ಊಟದ ಮಧ್ಯೆ ನೀರು ಕುಡಿಯುವುದರ ಬಗ್ಗೆ ವೈಜ್ಞಾನಿಕವಾಗಿ ಆಯುರ್ವೇದ ಏನು ಹೇಳುತ್ತೆ? ನೀವು ತಿಳಿಯಲೇ ಬೇಕಾದ ಸತ್ಯಗಳು ಇಲ್ಲಿವೆ

|

Updated on: Apr 16, 2021 | 6:31 AM

ಊಟದ ಮಧ್ಯೆ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲುಂಟಾಗುವ ಪರಿಣಾಮಗಳೇನು? ನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು? ಅನ್ನೋ ಪ್ರಶ್ನೆಗಳು ಅನೇಕರಿಗೆ ಕಾಡುತ್ತೆ. ಈ ಎಲ್ಲಾ ಪ್ರಶ್ನೆಗಳಿಗೆ ಆಯುರ್ವೇದ ಶಾಸ್ತ್ರದಲ್ಲಿ ಉತ್ತರ ತಿಳಿಯೋಣ.

ಊಟದ ಮಧ್ಯೆ ನೀರು ಕುಡಿಯುವುದರ ಬಗ್ಗೆ ವೈಜ್ಞಾನಿಕವಾಗಿ ಆಯುರ್ವೇದ ಏನು ಹೇಳುತ್ತೆ? ನೀವು ತಿಳಿಯಲೇ ಬೇಕಾದ ಸತ್ಯಗಳು ಇಲ್ಲಿವೆ
ನೀರು ಕುಡಿಯುತ್ತಿರುವುದು
Follow us on

ಸಾಮಾನ್ಯವಾಗಿ ನಾವೆಲ್ಲಾ ಊಟ ಮಾಡುವಾಗ ನೀರನ್ನು ಕುಡಿಯುತ್ತೇವೆ. ಆದ್ರೆ ಆಯುರ್ವೇದ ಶಾಸ್ತ್ರದ ಪ್ರಕಾರ, ಊಟದ ಮಧ್ಯೆ ಹೀಗೆ ನೀರನ್ನು ಕುಡಿಯುವುದು ಎಷ್ಟು ಸರಿ?. ಊಟದ ಮಧ್ಯೆ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲುಂಟಾಗುವ ಪರಿಣಾಮಗಳೇನು? ನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು? ಅನ್ನೋ ಪ್ರಶ್ನೆಗಳು ಅನೇಕರಿಗೆ ಕಾಡುತ್ತೆ. ಈ ಎಲ್ಲಾ ಪ್ರಶ್ನೆಗಳಿಗೆ ಆಯುರ್ವೇದ ಶಾಸ್ತ್ರದಲ್ಲಿ ಉತ್ತರ ತಿಳಿಯೋಣ.

ಆಯುರ್ವೇದ ಶಾಸ್ತ್ರದ ಪ್ರಕಾರ, ಊಟದ ಮಧ್ಯೆ ನೀರು ಕುಡಿಯೋದು ತಪ್ಪು. ಯಾಕಂದ್ರೆ ಊಟದ ಮಧ್ಯೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ದುರ್ಬಲಗೊಂಡು, ಆರೋಗ್ಯದ ಮೇಲೆ ಕೆಟ್ಟ ಪರಣಾಮ ಬೀರುತ್ತೆ. ಇದಿಷ್ಟೇ ಅಲ್ಲದೇ, ಊಟಕ್ಕೂ ಮುನ್ನ ನೀರು ಕುಡಿದ್ರೆ, ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್‌ ರಸ ಕರಗಿ ಬಿಡುತ್ತೆ. ಇದ್ರಿಂದ ದೇಹದಲ್ಲಿನ ಜೀರ್ಣಕ್ರಿಯೆ ಪ್ರಕ್ರಿಯೆ ದುರ್ಬಲಗೊಂಡು, ನಿಧಾನವಾಗಿ ಆರೋಗ್ಯ ಹದಗೆಡುತ್ತೆ ಅಂತಾ ಹೇಳಲಾಗುತ್ತೆ. ಆಯುರ್ವೇದ ಶಾಸ್ತ್ರದ ಪ್ರಕಾರ, ಊಟಕ್ಕೂ ಮುನ್ನ ನೀರು ಕುಡಿದ್ರೆ, ದೇಹದಲ್ಲಿ ನಿಶ್ಯಕ್ತಿ ಹೆಚ್ಚಾಗುತ್ತೆ. ಹೀಗಾಗಿ ಯಾವುದೇ ಕಾರಣಕ್ಕೂ ಊಟಕ್ಕೂ ಮುನ್ನ ಹಾಗೂ ಊಟದ ಮಧ್ಯೆ ನೀರನ್ನು ಸೇವಿಸಬಾರದು. ಊಟ ಪ್ರಾರಂಭಿಸುವ ಕೆಲವು ಗಂಟೆಗಳ ಮುನ್ನವೇ ನೀರನ್ನು ಕುಡಿಯಬೇಕು. ಇದ್ರಿಂದ ಆರೋಗ್ಯ ಚೆನ್ನಾಗಿರುತ್ತೆ. ಹೀಗೆ ಮಾಡಿದ್ರೆ, ಜಠರದಲ್ಲಿ ಜೀರ್ಣ ಶಕ್ತಿ ಹೆಚ್ಚಿಸುವ ಆಮ್ಲಗಳು ಆಹಾರವನ್ನು ಕರಗಿಸಿ, ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತೆ.

ನಂತರ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣಗೊಂಡು, ಅದರಲ್ಲಿನ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತೆ ಅಂತಾ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಊಟಕ್ಕೂ ಮುನ್ನ ನೀರು ಕುಡಿದ್ರೆ, ದೇಹದಲ್ಲಿನ ಜೀರ್ಣಕ್ರಿಯೆ ಪ್ರಕ್ರಿಯೆ ಅಲ್ಲೋಲ ಕಲ್ಲೋಲವಾಗಿ, ಕರುಳಿನ ಗೋಡೆಗಳು ಹಾನಿಯಾಗಿಬಿಡುತ್ತೆ. ಇದಿಷ್ಟೇ ಅಲ್ಲದೇ, ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೇ, ಕರುಳಿನಲ್ಲೇ ಕೆಲ ಹೊತ್ತು ಕೊಳೆಯುವುದರಿಂದ ಅದರಲ್ಲಿನ ಪೋಷಕಾಂಶಗಳು ಕುಂಠಿತಗೊಳ್ಳುತ್ತೆ. ಇದು ಒಂದು ರೀತಿಯಾದ್ರೆ, ಮತ್ತೊಂದು ರೀತಿಯ ಪ್ರಕಾರ, ಬಾಯಿಯಲ್ಲಿ ಉತ್ಪತ್ತಿಯಾಗುವ ಲಾವಾರಸಕ್ಕೂ ಇದರ ಪರಿಣಾಮ ಬೀರುತ್ತೆ. ಅದೇನಂದ್ರೆ, ಜೀರ್ಣ ಕ್ರಿಯೆಗೆ ಮೊದಲ ಹಂತವಾಗಿರುವ ಲಾವಾರಸ, ಆಹಾರವನ್ನು ಜೀರ್ಣಿಸುವ ಕಿಣ್ವಗಳನ್ನಷ್ಟೇ ಹೊಂದದೇ, ಜಠರದಲ್ಲಿ ಜೀರ್ಣ ಕ್ರಿಯೆಗೆ ಸಹಕರಿಸುವ ಕಿಣ್ವಗಳನ್ನು ಬಿಡುಗಡೆಗೊಳಿಸಲು ನೆರವಾಗುತ್ತೆ. ನಾವೇನಾದ್ರೂ ಊಟದ ಮಧ್ಯೆ ನೀರನ್ನು ಕುಡಿದ್ರೆ, ಬಾಯಿಯಲ್ಲಿನ ಲಾವಾರಸ ಕರಗಿ, ಜಠರದಲ್ಲಿನ ಕಿಣ್ವಗಳನ್ನೂ ಸಹ ಕುಂಠಿತಗೊಳಿಸುತ್ತೆ. ಜೊತೆಗೆ ಬಾಯಿಯಲ್ಲಿ ಆಹಾರವನ್ನು ಜೀರ್ಣಿಸುವ ಕಿಣ್ವಗಳನ್ನೂ ದುರ್ಬಲಗೊಳಿಸುತ್ತೆ. ಹೀಗೆ ಊಟದ ಮಧ್ಯೆ ನೀರನ್ನು ಸೇವಿಸಿದ್ರೆ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತೆ ಅಂತಾ ಆಯುರ್ವೇದ ಹೇಳುತ್ತೆ. ಹಾಗಿದ್ರೆ ನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು? ಇಲ್ಲಿ ತಿಳಿದುಕೊಳ್ಳಿ.

ನೀರನ್ನು ಕುಡಿಯಲು ಸರಿಯಾದ ಸಮಯ
1.ಭೋಜನ ಪ್ರಾರಂಭಿಸಿ, ಮುಕ್ತಾಯಗೊಳ್ಳುವವರೆಗೂ ಕೇವಲ ಅರ್ಧ ಲೋಟ ನೀರನ್ನು ಮಾತ್ರ ಅವಶ್ಯಕತೆ ಇದ್ರೆ ಕುಡಿಯಬೇಕು.
2.ಭೋಜನವಾದ ಒಂದು ಗಂಟೆಯ ನಂತರ ಒಂದು ಲೋಟ ನೀರನ್ನು ಕುಡಿಯಬೇಕು.
3.ಬೆಳಿಗ್ಗೆ ಎದ್ದ ತಕ್ಷಣ ಅರ್ಧದಿಂದ ಒಂದು ಲೀಟರ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದ್ರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ಹೋಗುತ್ತೆ.
4.ನೀರಡಿಕೆಯಾದಾಗ ಮಾತ್ರ ನೀರು ಕುಡಿಯದೇ, ಇಡೀ ದಿನ ಆಗಾಗ ಸ್ವಲ್ಪ ಸ್ವಲ್ಪವೇ ನೀರನ್ನು ಕುಡಿಯುತ್ತಿರಬೇಕು.
5.ವ್ಯಾಯಾಮದ ನಂತರ ನೀರನ್ನು ಕುಡಿಯಬೇಕು.
6.ಅನಾರೋಗ್ಯದ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
7.ಕುಳಿತುಕೊಂಡು ನೀರನ್ನು ಕುಡಿಯೋದು ಸರಿಯಾದ ಪದ್ಧತಿ.
8.ಸ್ನಾನಕ್ಕೂ ಮುನ್ನ ನೀರು ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ.
9.ರಾತ್ರಿ ಮಲಗುವ ಮುನ್ನ ನೀರನ್ನು ಕುಡಿದ್ರೆ ಹೃದಯದ ಆರೋಗ್ಯ ಉತ್ತಮವಾಗುತ್ತೆ.

ಹೀಗೆ ಸರಿಯಾದ ಪದ್ಧತಿಯನ್ನು ಅನುಸರಿಸಿ, ಸರಿಯಾದ ಸಮಯಕ್ಕೆ ನೀರನ್ನು ಕುಡಿದರೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಅಂತಾ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..