World Environment Day 2021: ಹೆಣ್ಣು ಮಗು ಹುಟ್ಟಿದರೆ 111 ಗಿಡ ನೆಡುವ ಗ್ರಾಮ, ಇದು ಪಿಪ್ಲಾಂತ್ರಿಯ ಹಸಿರು ಕ್ರಾಂತಿ

| Updated By: ರಾಜೇಶ್ ದುಗ್ಗುಮನೆ

Updated on: Jun 05, 2021 | 4:05 PM

Piplantri: ಇಲ್ಲಿ ಹೆಣ್ಣು ಮಗುವಿನ ಹೆಸರಲ್ಲಿ ನೆಟ್ಟ ಗಿಡಗಳು ಮರಗಳಾಗಿ ಬೆಳೆದು ನಿಂತು ಅರಣ್ಯವಾಗುವಾಗ ಅರಣ್ಯೋತ್ಪನ್ನಗಳನ್ನು ಬಳಸಿ ಸ್ವಾವಲಂಬಿ ಬದುಕು ಸಾಗಿಸುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

World Environment Day 2021: ಹೆಣ್ಣು ಮಗು ಹುಟ್ಟಿದರೆ 111 ಗಿಡ ನೆಡುವ ಗ್ರಾಮ, ಇದು ಪಿಪ್ಲಾಂತ್ರಿಯ ಹಸಿರು ಕ್ರಾಂತಿ
ಪಿಪ್ಲಾಂತ್ರಿ
Follow us on

ರಾಜಸ್ಥಾನ ಎಂದಾಗ ನಮ್ಮ ಕಣ್ಮುಂದೆ ಬರುವುದೇ ಮರುಭೂಮಿಯ ದೃಶ್ಯ. ಆದರೆ ಈ ರಾಜ್ಯದಲ್ಲಿ ಪಿಪ್ಲಾಂತ್ರಿ ಎಂಬ ಗ್ರಾಮವಿದೆ. ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಊರಿಗೆ ಊರೇ ಸಂಭ್ರಮಿಸುತ್ತದೆ. ಮನುಷ್ಯರು ಮಾತ್ರವಲ್ಲ ಮಣ್ಣು, ಆಕಾಶ,ಹೂವು, ನದಿ, ಪಕ್ಷಿ ಪ್ರಾಣಿಗಳೆಲ್ಲವೂ ಖುಷಿ ಪಡುತ್ತವೆ. ಯಾಕೆಂದರೆ ಇಲ್ಲಿ ಹೆಣ್ಣು ಮಗು ಜನಿಸಿದಾಗ 111 ಗಿಡಗಳನ್ನು ನೆಡಬೇಕು. ಇದು ಈ ಗ್ರಾಮದ ನಿಯಮ. ಒಂದು ಹೆಣ್ಣು ಮಗು ಹುಟ್ಟಿದರೆ 111 ಗಿಡ ನೆಡುವ ಈ ಗ್ರಾಮದ ವೃಕ್ಷ ಸಂಪತ್ತನ್ನೊಮ್ಮೆ ಊಹಿಸಿಕೊಳ್ಳಿ. ಕಾಡಿದ್ದರೆ ಮಾತ್ರ ನಾಡು, ಪರಿಸರ ರಕ್ಷಣೆಯ ಹೊಣೆ ನಮ್ಮದು ಎಂಬುದು ಇಲ್ಲಿನ ಗ್ರಾಮದ ಜನರಿಗೆ ತಿಳಿದಿದೆ. ಹೆಣ್ಣು ಮಗುವಿನ ಹುಟ್ಟಿನ ಜತೆಗೆ ಪರಿಸರ ಕಾಳಜಿ ಮೆರೆದು ಸಂಭ್ರಮಿಸುವ ಈ ಗ್ರಾಮದಲ್ಲಿ ಇಂಥದ್ದೊಂದು ಆಚರಣೆ ಹುಟ್ಟಿಕೊಂಡದ್ದು 2005ರಲ್ಲಿ.

2005 ರಲ್ಲಿ ಶ್ಯಾಮ್‌ಸುಂದರ್ ಪಾಲಿವಾಲ್ ಸರ್ಪಂಚ್ (ಗ್ರಾಮದ ಮುಖ್ಯಸ್ಥ) ಆಗಾದ ಅಮೃತಶಿಲೆಯ ಗಣಿಗಾರಿಕೆಗೆ ತಡೆಯೊಡ್ಡಿರು. ಆಗಾಗಲೇ ಸುತ್ತಲಿನ ಪರಿಸರ ಹಾಳಾಗುತ್ತಾ ಬಂದಿತ್ತು, ಗಿಡಗಳು ಒಣಗಿದ್ದವು. ಈ ಗ್ರಾಮದಲ್ಲಿ ಹೆಣ್ಣುಮಕ್ಕಳನ್ನು ಆರ್ಥಿಕ ಹೊರೆಯಾಗಿ ಕಾಣುತ್ತಿದ್ದ ಕಾಲವದು. ಗಂಡು ಮಕ್ಕಳು ಹೆತ್ತವರಿಗೆ ಆರ್ಥಿಕವಾಗಿ ನೆರವಾಗುತ್ತಾರೆ ಎಂಬ ಕಾರಣದಿಂದ ಗಂಡಿಗೆ ಹೆಚ್ಚಿನ ಮರ್ಯಾದೆ ದಕ್ಕುತ್ತಿತ್ತು.

ಇಂತಿರುವಾಗ 2007ರಲ್ಲಿ ಪಾಲಿವಾಲ್ ಅವರ 17 ವರ್ಷದ ಮಗಳು ನಿರ್ಜಲೀಕರಣದಿಂದ ಮೃತಪಟ್ಟಳು. ಮಗಳ ಅಗಲಿಕೆ ಪಾಲಿವಾಲ್ ಅವರನ್ನು ಬಹುವಾಗಿ ಕಾಡಿತು. ಮುದ್ದಿನ ಮಗಳ ನೆನಪಿಗಾಗಿ ಪಾಲಿವಾಲ್ ಕುಟುಂಬ ಗ್ರಾಮದ ಪ್ರವೇಶ ಭಾಗದಲ್ಲಿ ಗಿಡವೊಂದನ್ನು ನೆಟ್ಟರು.ಅದ್ಯಾಕೆ ಇಂಥಾ ಕಾರ್ಯವನ್ನು ಮತ್ತಷ್ಟು ಮಾಡಬಾರದು ಎಂದು ಯೋಚಿಸಿದ ಪಾಲಿವಾಲ್, ಮಗಳ ಹೆಸರಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಇಡೀ ಗ್ರಾಮಕ್ಕೆ ಗ್ರಾಮವೇ ಗಿಡ ನೆಡುವ ಕಾರ್ಯಕ್ರಮವನ್ನು ಸಂಪ್ರದಾಯದಂತೆ ಪಾಲಿಸಿದರು.
ಈಗ ಪಿಪ್ಲಾಂತ್ರಿಯಲ್ಲಿ ಪ್ರತಿ ಬಾರಿಯೂ ಹೆಣ್ಣು ಜನಿಸಿದಾಗ ಗ್ರಾಮಸ್ಥರು 111 ಮರಗಳನ್ನು ನೆಡುತ್ತಾರೆ. ಸ್ಥಳೀಯ ಹಿಂದೂಗಳಿಗೆ 111 ಎಂಬುದು ಒಂದು ಶುಭ ಸಂಖ್ಯೆ . ಹಾಗಾಗಿ ಹೆಣ್ಣನ್ನು ಗೌರವಿಸುವ ಮತ್ತು ಪರಿಸರ ಪ್ರೀತಿಗೆ ನಾಂದಿ ಹಾಡಿದ ಕ್ರಮ ಇದಾಗಿದೆ.

ನಾವು ಅದನ್ನು ಒಂದು ಹುಡುಗಿಯ ಹೆಸರಿನಲ್ಲಿ ಮಾಡಲು ಸಾಧ್ಯವಾದರೆ, ಪ್ರತಿ ಹುಡುಗಿಯ ಹೆಸರಿನಲ್ಲಿ ಅದನ್ನು ಏಕೆ ಮಾಡಬಾರದು? ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಹುಟ್ಟಿತು. ಈ ಪ್ರದೇಶದಲ್ಲಿ ಈಗ 3,50,000 ಕ್ಕೂ ಹೆಚ್ಚು ಮರಗಳಿವೆ, ಮಾವು ಮತ್ತು ನೆಲ್ಲಿಕಾಯಿಯಿಂದ ಶ್ರೀಗಂಧದ ಮರ, ಬೇವು, ಆಲ ಮತ್ತು ಬಿದಿರಿನವರೆಗೆ ಎಲ್ಲವೂ ಬೆಳೆಯುತ್ತಿದೆ. ಬಂಜರು ಭೂಮಿಯಾಗಿದ್ದ ಇದು ಅಂದಾಜು 1,000 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ ಅಂತಾರೆ ಪಾಲಿವಾಲ್.

ಇತ್ತೀಚಿನ ವರ್ಷಗಳಲ್ಲಿ ಪಾಲಿವಾಲ್ ಅವರ ಸರಳ ಕಲ್ಪನೆಯು ವಿಶಾಲವಾದ ಪರಿಸರ-ಸ್ತ್ರೀವಾದಿ ಚಳುವಳಿಯಾಗಿ ವಿಸ್ತರಿಸಿದೆ. ಗಿಡ ನೆಡುವುದರ ಜತೆಗೆ ಹೆಣ್ಣುಮಕ್ಕಳ ಪೋಷಕರು 18 ತುಂಬುವುದಕ್ಕಿಂತ ಮುನ್ನ ಮಗಳ ಮದುವೆ ಮಾಡುವುದಿಲ್ಲ, ಆಕೆಗೆ ಶಾಲಾ ಶಿಕ್ಷಣ ಮುಗಿಸಲು ಅವಕಾಶ ನೀಡುತ್ತೇವೆ ಎಂದು ಅಫಿಡವಿಟ್‌ಗೆ ಸಹಿ ಹಾಕುತ್ತಾರೆ. ಪ್ರತಿ ಬಾಲಕಿಗೆ ರೂ 31,000ದೊಂದಿಗೆ ಸ್ಥಿರ-ಠೇವಣಿ ಖಾತೆಯನ್ನು ತೆರೆಯುತ್ತಾರೆ. 18 ವರ್ಷ ತುಂಬಿದ ನಂತರವೇ ಈ ಹಣವನ್ನು ವಿಥ್ ಡ್ರಾ ಮಾಡಲಾಗುತ್ತಿದ್ದು ಇದನ್ನು ಆಕೆಯ ಶಿಕ್ಷಣಕ್ಕಾಗಿ ಅಥವಾ ಮದುವೆಯ ಖರ್ಚಿಗಾಗಿ ಬಳಸಬಹುದು. ಪಿಪ್ಲಾಂತ್ರಿಯಲ್ಲಿ ಬೆಳೆಯುತ್ತಿರುವ ಅರಣ್ಯದಿಂದಾಗಿ ನೀರಿನ ನಿರ್ವಹಣೆಯೂ ಸುಧಾರಿಸಿದ್ದು ಭಾರತೀಯ ಹಳ್ಳಿಯೊಂದರ ಹಸಿರುಕ್ರಾಂತಿಗೆ ಇದು ಉದಾಹರಣೆಯಾಗಿದೆ.

ವರ್ಷವಿಡೀ ಈ ಗ್ರಾಮದಲ್ಲಿ ಪ್ರತಿ ಹೆಣ್ಣುಮಕ್ಕಳ ಜನನಕ್ಕೆ ಗ್ರಾಮಸ್ಥರು 111 ಗಿಡಗಳನ್ನು ನೆಟ್ಟರೂ, ಪ್ರತಿ ಆಗಸ್ಟ್‌ನ ಮಳೆಗಾಲದಲ್ಲಿ, ಹಿಂದಿನ 12 ತಿಂಗಳಲ್ಲಿ ಜನಿಸಿದ ಎಲ್ಲ ಹುಡುಗಿಯರಿಗಾಗಿ ವಿಶೇಷ ಮರ ನೆಡುವ ಸಮಾರಂಭ ನಡೆಯುತ್ತದೆ. 5,500 ವ್ಯಕ್ತಿಗಳ ಈ ಗ್ರಾಮದಲ್ಲಿ ಪ್ರತಿವರ್ಷ ಸುಮಾರು 60 ಹೆಣ್ಣು ಮಕ್ಕಳು ಜನಿಸುತ್ತಾರೆ ಎಂದು ಪಾಲಿವಾಲ್ ಅಂದಾಜಿಸಿದ್ದಾರೆ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಒಡಹುಟ್ಟಿದವರನ್ನು ಪೂಜಿಸಬೇಕೆಂದು ಪರಿಗಣಿಸಿ, ತಮ್ಮ ಹೆಸರಿನಲ್ಲಿ ನೆಟ್ಟ ಸಸಿಗಳಿಗೆ ಇವರು ರಾಖಿ ಕಟ್ಟುತ್ತಾರೆ.

ಇತಿಹಾಸದ ಪುಟಗಳನ್ನು ನೋಡಿದರೆ ರಾಜಸ್ಥಾನದ ಜನರು ಎಂದಿಗೂ ಸೋಲೊಪ್ಪದ ಯೋಧರಾಗಿದ್ದರು. ನಾವೂ ಅವರಂತೆಯೇ ಸೋಲೊಪ್ಪುವುದಿಲ್ಲ. ಹಿಂದಿನ ಶತಮಾನಗಳಲ್ಲಿ ಅವರು ಶತ್ರುಗಳ ವಿರುದ್ಧ ಹೋರಾಡುತ್ತಿದ್ದಂತೆ ನಾವೀಗ ಪರಿಸರ ಮಾಲಿನ್ಯ,ರೋಗಗಳ ವಿರುದ್ಧ ಹೋರಾಡುತ್ತೇವೆ. ಪಿಪ್ಲಾಂತ್ರಿಯಲ್ಲಿ ಮರಗಳು ಬೆಳೆದಂತೆ, ಅಂತರ್ಜಲ ಮಟ್ಟ ಹೆಚ್ಚಾಗಿದೆ ಮತ್ತು ಗಮನಾರ್ಹ ಸಾಂಸ್ಕೃತಿಕ ಬದಲಾವಣೆಯು ಮಹಿಳೆಯರ ಸ್ಥಿತಿಯನ್ನು ಸುಧಾರಿಸಿದೆ. ಈಗ 14 ರ ಹರೆಯದ ನಿಕಿತಾ ಪಾಲಿವಾಲ್ (ಶ್ಯಾಮ್ ಸುಂದರ್‌ಗೆ ಯಾವುದೇ ಸಂಬಂಧವಿಲ್ಲ) ತನ್ನ ಹೆಸರಿನಲ್ಲಿ ಮರಗಳನ್ನು ನೆಟ್ಟ ಮೊದಲ ಹುಡುಗಿಯರಲ್ಲಿ ಒಬ್ಬಳು. ಈಗ, ಆಕೆ ವೈದ್ಯೆಯಾಗಲು ಬಯಸಿದ್ದಾಳೆ .”ನಾವು ಸಹ ನಮ್ಮ ಕಾಲುಗಳ ಮೇಲೆ ನಿಲ್ಲಬೇಕು” ಎಂದು ನಿಕಿತಾ ಹೇಳುತ್ತಾರೆ. ನೀವು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಫಲವೂ ಸಿಗುತ್ತದೆ, ಜತೆಗೆ ಜನ ಬೆಂಬಲವೂ ಅಂತಾರೆ ಶ್ಯಾಮ್ ಸುಂದರ್.

ಪಿಪ್ಲಾಂತ್ರಿ ಗ್ರಾಮದಲ್ಲಿ ಹುಡುಗಿಯರನ್ನು ಗೌರವಿಸುವುದು ಅಥವಾ ಪರಿಸರ ಕಾಳಜಿಯ ಕ್ರಾಂತಿಕಾರಿ ಬದಲಾವಣೆ ಮಾತ್ರವಲ್ಲ, ನೈಸರ್ಗಿಕ ಸಂಪನ್ಮೂಲಗಳ ಮೂಲಕ ಉದ್ಯೋಗ ಸೃಷ್ಟಿಯೂ ನಡೆಯುತ್ತದೆ.ಹಳ್ಳಿಯಲ್ಲಿ ಮಾರಾಟ ಮಾಡಲು ಅಲೋವೆರಾ ರಸ, ಆಹಾರ ಪದಾರ್ಥಗಳು ಮತ್ತು ಜೆಲ್‌ಗಳಂತಹ ಉತ್ಪನ್ನಗಳನ್ನು ರಚಿಸುವ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಹೆಣ್ಣು ಮಗುವಿನ ಹೆಸರಲ್ಲಿ ನೆಟ್ಟ ಗಿಡಗಳು ಮರಗಳಾಗಿ ಬೆಳೆದು ನಿಂತು ಅರಣ್ಯವಾಗುವಾಗ ಅರಣ್ಯೋತ್ಪನ್ನಗಳನ್ನು ಬಳಸಿ ಸ್ವಾವಲಂಬಿ ಬದುಕು ಸಾಗಿಸುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪಿಪ್ಲಾಂತ್ರಿ ಗ್ರಾಮ ಮಗಳು ಮತ್ತು ಮರಗಳ ಬಗ್ಗೆ ಪ್ರೀತಿ, ಕಾಳಜಿ ವಹಿಸುತ್ತಿದೆ ಎಂಬುದಕ್ಕೆ ಅಲ್ಲಿನ ಅರಣ್ಯಗಳೇ ಸಾಕ್ಷಿ.

ಇದನ್ನೂ ಓದಿ:  World Environment Day 2021: ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು ಯಾವುವು?

Published On - 10:26 am, Sat, 5 June 21