ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.
ಪರಿಕಲ್ಪನೆ : ಶ್ರೀದೇವಿ ಕಳಸದ
ತೀರ್ಥಹಳ್ಳಿಯ ಟಿ.ಜಿ.ನಂದೀಶ್ ಬೆಂಗಳೂರು ಮತ್ತು ಬಸ್ ಪ್ರಯಾಣದ ಮಧ್ಯೆ ಆವರಿಸುವ ನಿದ್ರೆಯಿಂದ ಕಳೆದುಕೊಂಡಿದ್ದೇನು?
ನಾನು ಅದೆಷ್ಟೇ ಕೆಲಸಗಳ ಒತ್ತಡದಲ್ಲಿದ್ದರೂ, ಅವುಗಳನ್ನು ಮರೆತು ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದದ್ದು ಬಿಎಂಟಿಸಿ ಬಸ್ನಲ್ಲಿ ಮಾತ್ರ. ಬೆಂಗಳೂರಿನ ರಸ್ತೆ, ಟ್ರಾಫಿಕ್ ಗಜಿಬಿಜಿ, ಹತ್ತತ್ತು ಹೆಜ್ಜೆಗೂ ಅಡ್ಡ ಹಾಕೋ ಜನ ಬಿಎಂಟಿಸಿ ಪಯಣವನ್ನು ಹಿಗ್ಗಿಸುತ್ತಿತ್ತು. ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಬಿಎಂಟಿಸಿ ಬಸ್ಸಲ್ಲಿ ಗಡದ್ದಾಗಿ ನಿದ್ದೆ ಮಾಡ್ತಾ ನಾಲ್ಕೈದು ಸ್ಟಾಪ್ ಮುಂದೆ ಹೋಗಿ ಇಳಿದದ್ದು ಇದೆ. ಮೊದಲನೇದಾಗಿ ಬಿಎಂಟಿಸಿಯಲ್ಲಿ ಸೀಟು ಸಿಗುವುದೇ ಕಷ್ಟ, ಅದರಲ್ಲೂ ಕಿಟಕಿ ಪಕ್ಕದ ಸೀಟು ಸಿಕ್ಕು ಹಿತವಾಗಿ ಗಾಳಿ ಬೀಸಿದರೆ ಅದ್ಯಾವ ಮಾಯದಲ್ಲೋ ನಿದ್ದೆಗೆ ಜಾರಿ ಬಿಡ್ತೇವೆ. ಹೀಗೆ ಒಮ್ಮೆ ನಿದ್ದೆಗಣ್ಣಲ್ಲಿ ಜೇಬಿನಲ್ಲಿದ್ದ ಮೊಬೈಲ್ ಬೀಳಿಸಿಕೊಂಡೆ. ಆದರೆ ಅದು ಗಮನಕ್ಕೆ ಬಂದದ್ದು ಬಸ್ ಇಳಿದು ಹದಿನೈದಿಪ್ಪತ್ತು ನಿಮಿಷ ಕಳೆದ ಬಳಿಕ. ಆಗ ತಾನೇ ಸ್ವಂತ ದುಡಿಮೆ ಆರಂಭಿಸಿದ ದಿನಗಳವು, ಒಂದಷ್ಟು ತಿಂಗಳು ಕೂಡಿಸಿಟ್ಟ ಹಣದಲ್ಲಿ ಕೊಂಡ ಮೊಬೈಲು. ಕಷ್ಟಪಟ್ಟು ಕೊಂಡ ಮೊಬೈಲ್ ಕಳೆದುಕೊಂಡ ನೋವು ಒಂದೆಡೆಯಾದರೆ, ಇಷ್ಟಪಟ್ಟ ಜೀವದ ಜೊತೆಗಿನ ಪೋಟೋ, ಚಾಟ್ ಎಲ್ಲವೂ ನಿದ್ದೆಯಿಂದಾಗಿ ಶಾಶ್ವತವಾಗಿ ನಾಶವಾಯ್ತಲ್ಲ ಅನ್ನೋ ನೋವು ಕಾಡ್ತಲೇ ಇತ್ತು.
ನನಗೆ ಕಥೆ, ಕವಿತೆ ಬರೆಯುವ ಹವ್ಯಾಸ. ಈ ಕತೆ ಕವಿತೆ ಅರಳುವುದಕ್ಕೆ ಸಮಯ ಅಂತ ಇರಲ್ಲವಲ್. ಹಾಗಾಗಿ ಹೊತ್ತಲ್ಲದ ಹೊತ್ತಲ್ಲಿ ಹೊಳೆದದ್ದನ್ನೆಲ್ಲಾ ಮೊಬೈಲ್ ನಲ್ಲಿ ಬರೆದಿಟ್ಟುಕೊಳ್ತಿದ್ದೆ. ಎಲ್ಲವನ್ನು ಒಂದು ಕಳ್ಳನಿದ್ದೆ ನುಂಗಿ ಹಾಕಿತ್ತು. ಅಕ್ಷರಶಃ ಕಣ್ಣಲ್ಲಿ ನೀರು. ಹೇಳಿಕೊಳ್ಳೋಣ ಅಂದ್ರೆ ಸುತ್ತಮುತ್ತಲೂ ಅಪರಿಚಿತರೇ ಇದ್ರು. ಹಾಗೂ ಧೈರ್ಯ ಮಾಡಿದ ಪಕ್ಕದಲ್ಲಿದ್ದವರಿಗೆ ನಡೆದದ್ದನ್ನು ಹೇಳಿ ಅವರ ಮೊಬೈಲ್ನಿಂದ ನನ್ನ ನಂಬರಿಗೆ ಕರೆ ಮಾಡಿದೆ. ರಿಂಗ್ ಆಯ್ತು, ಬಟ್ ನೋ ರೆಸ್ಪಾನ್ಸ್, ದಿಗಿಲು ಜಾಸ್ತಿ ಆಯ್ತು. ಪಕ್ಕದಲ್ಲಿದ್ದೋರು ಬಸ್ ರೂಟ್ ನಂಬರ್ ಕೇಳಿದ್ರು, ಕಡೆಗೆ ಮತ್ತಿಕೆರೆ ಡಿಪೋಗೆ ಹೋಗಿ ವಿಚಾರಿಸಿ ಏನಾದ್ರು ಗೊತ್ತಾಗಬಹುದು ಅಂದ್ರು. ಅಲ್ಲಿಗೆ ಹೋಗಿ ಡಿಪೋ ಮ್ಯಾನೇಜರಿಗೆ ವಿಚಾರಿಸಿದ್ದು ಆಯ್ತು. ಅಲ್ ನೋಡಪ್ಪ ಅರ್ಧ ಗಂಟೆ ಹಿಂದೆ ಬಂದಿರೋ ಬಸ್ಸುಗಳೆಲ್ಲಾ ಒಂದೇ ಕಡೆ ನಿಂತಿದೆ, ಹೋಗಿ ವಿಚಾರಿಸು ಅಂದ್ರು. ಅಲ್ಲಿ ಹೋಗಿ ಕೇಳಿದ್ರೆ ಕಂಡಕ್ಟರ್ ನಾನ್ ನೋಡಿಲ್ಲಪ್ಪ, ಬಸ್ಸಲ್ಲಿ ಒಮ್ಮೆ ನೋಡು ಅಂದ್ರು. ಅದು ನಾನು ಇದ್ದ ಬಸ್ಸು ಎಂಬುದು ಖಾತ್ರಿಯಾಯಿತು. ನಾನು ಕುಳಿತ ಸೀಟ್ ಬಳಿ ಹೋಗಿ ಗಮನಿಸಿದೆ. ಅಲ್ಲೆಲ್ಲೂ ಮೊಬೈಲ್ ಕಾಣಲಿಲ್ಲ. ಮತ್ತೆ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕಾಯಿನ್ ಬೂತ್ಗೆ ಹೋಗಿ ಕರೆ ಮಾಡಿದಾಗ ನನ್ನ ನಂಬರ್ ಸ್ವಿಚ್ಆಫ್ ಬರ್ತಿತ್ತು. ಯಾರಿಗೋ ಸಿಕ್ಕಿದೆ ಅಂತ ಕನ್ಫರ್ಮ್ ಆಯ್ತು. ಹೆಚ್ಚು ಕಡಿಮೆ ಮೊಬೈಲ್ ಆಸೆ ಮರೀಚಿಕೆಯಾಗಿತ್ತು. ಆದರೂ ಧೈರ್ಯ ಮಾಡಿ ಪೊಲೀಸರಿಗೆ ದೂರು ಕೊಟ್ಟೆ. ನಾಲ್ಕು ಬಾರಿ ಸ್ಟೇಷನ್ನಿಗೆ ಅಲೆದದ್ದು ಬಿಟ್ರೆ ಬೇರೇನು ಪ್ರಯೋಜನವಾಗಲಿಲ್ಲ. ಆ ಘಟನೆ ಬಳಿಕ ಎಷ್ಟೋ ದಿನ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ, ಯಾರೇ ಸಂತೈಸಿದರೂ ಸಮಾಧಾನವಾಗ್ತಿರಲಿಲ್ಲ.
ಇನ್ನು ಇದೆ ನಿದ್ದೆಯಿಂದಾಗಿ ಮಾರ್ಕ್ಸ್ ಕಾರ್ಡ್ ಕಳೆದುಕೊಂಡ ಘಟನೆಯು ಇದೆ. ಬೆಂಗಳೂರಿನಲ್ಲಿ ಏಳೆಂಟು ವರ್ಷ ಜೀವ-ಜೀವನ ಸವೆಸಿದ ನಂತರ ಎಲ್ಲಾ ಬಿಟ್ಟು ಊರಿಗೆ ಮರಳುವ, ಊರಿನಲ್ಲೇ ಏನಾದ್ರೂ ದುಡಿಮೆ ಮಾಡುವ ನಿರ್ಧಾರ ಮಾಡಿದ್ದೆ. ಆಬಳಿಕ ನನ್ನ ಬಳಕೆಯ ವಸ್ತು, ಬಟ್ಟೆಗಳನ್ನು ಅಲ್ಲಿಂದಿಲ್ಲಿಗೆ ಸಾಗಿಸುವುದೇ ತಲೆ ನೋವಿನ ಕೆಲಸವಾಗಿತ್ತು. ಹೀಗೆ ಅವುಗಳನ್ನು ಸಾಗಿಸುವ ಸಂದರ್ಭದಲ್ಲಿ ಮಾಡಿಕೊಂಡ ಎಡವಟ್ಟಿದೆಯೆಲ್ಲಾ ಅದು ಬಹುದೊಡ್ಡ ಪಾಠ ಕಲಿಸಿತು. ನಿದ್ದೆಯಿಂದಾಗಿ ಹಿಂದೆ ಮಾಡಿಕೊಂಡ ನಷ್ಟ ನೆನಪಿದ್ದ ಕಾರಣ ನಾನು ಪ್ರತೀ ಬಾರಿ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆ ವಹಿಸುತ್ತಿದ್ದೆ, ಅದು ಯಾವ ಮಟ್ಟಕ್ಕೆ ಅಂದ್ರೆ ಬೆಂಗಳೂರಿಂದ ತೀರ್ಥಹಳ್ಳಿಗೆ ಆರೇಳು ತಾಸುಗಳ ಪಯಣ. ಸ್ಲೀಪರ್ ಬಸ್ ಹತ್ತಿದ್ರು ನಿದ್ದೆ ಮಾಡಿದ್ರೆ ಏನಾದರೂ ಕಳೆದುಕೊಳ್ಳುವ ಭೀತಿಯಲ್ಲಿ ಪಯಣದುದ್ದಕ್ಕೂ ಎಚ್ಚರವಿರುತ್ತಿದ್ದೆ, ಸಾಥ್ ನೀಡಲು ಒಂದೆರಡು ಸಿನಿಮಾ ಮೊದಲೇ ಡೌನ್ಲೋಡ್ ಮಾಡಿಕೊಂಡಿರುತ್ತಿದ್ದೆ. ಇದು ವರ್ಕೌಟ್ ಕೂಡ ಆಯ್ತು. ಒಂದೆರಡು ವರ್ಷ ರಾತ್ರಿಯೆಲ್ಲಾ ಎಚ್ಚರವಿದ್ದೆ ನೈಟ್ ಜರ್ನಿ ಮುಗಿಸುತ್ತಿದ್ದೆ. ಆದರೆ ನನ್ನ ದುರಾದೃಷ್ಟಕ್ಕೆ ಮತ್ತೊಂದು ಘಟನೆ ನಡೆದೇ ಬಿಡ್ತು. ಈ ಬಾರಿ ಬೆಂಗಳೂರಿನಿಂದ ಹೊರಡುವಾಗಲೇ ನಾಲ್ಕೈದು ಬ್ಯಾಗುಗಳಿದ್ದವು. ಎಂದಿನಂತೆ ಸಿನಿಮಾ ನೋಡ್ತಾ ಮುಂಜಾನೆ ತನಕ ಸಮಯ ಕಳೆದೆ. ತರೀಕೆರೆ ದಾಟುವ ಹೊತ್ತಿಗೆ ನಿದ್ರಾದೇವಿ ಆವರಿಸಿಕೊಂಡಿದ್ದಾಳೆ. ಕಣ್ತೆರೆದು ನೋಡುವಾಗ ನನ್ನೂರನ್ನು ದಾಟಿ ಮುಂದೆ ಹೋಗಿದ್ದೇನೆ. ಅರ್ಜೆಂಟಲ್ಲಿ ಎದ್ದು ಕಂಡಕ್ಟರ್ ಬಳಿ ಹೇಳಿ ಗಾಡಿ ನಿಲ್ಲಿಸಿದೆ. ನಂತರ ಕಾರಲ್ಲಿ ಬಂದ ಯಾರ ಬಳಿಯೋ ಡ್ರಾಪ್ ಕೇಳಿ ನನ್ನ ಮನೆಯೆದುರು ಬೆಳಿಗ್ಗೆ 6.30 ರ ಸಮಯದಲ್ಲಿ ಬಂದಿಳಿದೆ. ಮನೆಗೆ ಬಂದವನೇ ಸೀದಾ ಹೋಗಿ ಹಾಸಿಗೆ ಮೇಲೆ ಬಿದ್ದೆ. ಮತ್ತೆ ಎಚ್ಚರವಾದಾಗ ಬೆಳಿಗ್ಗೆ 10.30 ಆಗಿದೆ. 12 ಗಂಟೆ ಹೊತ್ತಿಗೆ ಮಾರ್ಕ್ಸ್ ಕಾರ್ಡ್ ಇದ್ದ ಬ್ಯಾಗೇ ಮಿಸ್ಸಾಗಿದೆ ಎಂಬ ವಿಷಯ ಅರಿವಿಗೆ ಬಂತು.
ಈ ಬಾರಿ ನನ್ನನ್ನು ನಾನೇ ಶಪಿಸಿಕೊಂಡೆ. ಮತ್ತೆ ಮೊದಲಿನಂತೆ ಹಲವು ದಿನಗಳ ಕಾಲ ಸರಿಯಾಗಿ ನಿದ್ದೆ ಬರಲಿಲ್ಲ. ಆದರೆ ನಾನು ಮಾಡುವ ಕೆಲಸ ಹಾಗೂ ಪಡೆದ ಪದವಿ ಭಿನ್ನವಾದ ಕಾರಣ ನನಗ್ಯಾರೂ ಮಾರ್ಕ್ಸ್ ಕಾರ್ಡ್ ಕೇಳುವುದಿಲ್ಲ, ನನ್ನ ಅಕಡೆಮಿಕ್ ರಿಪೋರ್ಟ್ ನೋಡಿ ಸಂಭಾವನೆ ನೀಡುವುದಿಲ್ಲ. ಹಾಗಾಗಿ ಈ ಘಟನೆ ನಡೆದು ವರ್ಷವೇ ಕಳೆದರೂ ಇನ್ನು ಡೂಪ್ಲಿಕೇಟ್ ಮಾರ್ಕ್ಸ್ ಕಾರ್ಡ್ ಪಡೆದುಕೊಂಡಿಲ್ಲ. ಆದರೆ ಈಗ ಮಾತ್ರ ನಿದ್ದೆ ಸಕತ್ತಾಗ್ ಬರುತ್ತೆ. ನನ್ನ ವಿಷಯದಲ್ಲಿ ನಿದ್ರೆ ಎಷ್ಟು ಆರೋಗ್ಯಸ್ನೇಹಿಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ ಅಂತ ನನಗನ್ಸುತ್ತೆ. ನನ್ನ ಈ ಹಳೇ ನೆನಪುಗಳನ್ನ ನೆನೆದಾಗೆಲ್ಲಾ ಮುಖದಲ್ಲೊಂದು ನಗು ಅರಳುತ್ತೆ.
ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ: ಉಗ್ಗದಲ್ಲಿ ನೀರಲ್ಲ ಕಣ್ಣೀರು ತುಂಬಿತ್ತು
Published On - 1:43 pm, Fri, 19 March 21