ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಚಿತ್ರಕಲಾವಿದೆ ಶಾಂತಲಾ ಸತೀಶ

|

Updated on: Dec 30, 2020 | 10:58 AM

‘ಯಹೂದೀ ಎಂಬ ಒಂದೇ ಕಾರಣಕ್ಕೆ ನಾಝಿ ಶ್ರಮಶಿಬಿರಗಳ ಪಾಲಾಗುವ ಹದಿವಯಸ್ಸಿನ ಹುಡುಗಿ ಸಿಲ್ಕಾ, ಆಶ್ವಿಟ್ಸಿನ ಶ್ರಮಶಿಬಿರದಲ್ಲಿ ಕಷ್ಟದ ದುಡಿತದ ಜೊತೆಗೇ ನಾಝಿ ಸೈನಿಕರ ಕಾಮದಾಹಕ್ಕೆ ಬಲಿಯಾಗುತ್ತಾಳೆ. ಮುಂದೆ ನಾಝಿ ಸಹಚರಳು ಎಂಬ ಹಣೆಪಟ್ಟಿ ಹೊತ್ತು ಸೋವಿಯತ್ ಶ್ರಮಶಿಬಿರಕ್ಕೆ ರವಾನೆಯಾಗುತ್ತಾಳೆ.‘ ಈ ಸಾಹಸಗಾಥೆಯೊಂದಿಗೆ ಮತ್ತೆ ಇನ್ನೇನು ಹೇಳಿದ್ದಾರೆ ಚಿತ್ರಕಲಾವಿದೆ ಶಾಂತಲಾ ಸತೀಶ?

ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಚಿತ್ರಕಲಾವಿದೆ ಶಾಂತಲಾ ಸತೀಶ
ಶಾಂತಲಾ ಸತೀಶ
Follow us on

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಚಿತ್ರಕಲಾವಿದೆ ಶಾಂತಲಾ ಸತೀಶ ಅವರ ಆಯ್ಕೆಗಳು ಇಲ್ಲಿವೆ.

ಕೃ:  Cilka’s Journey

ಲೇ: Heather Morris

ಪ್ರ: St. Martins press 

ಯಹೂದೀ ಎಂಬ ಒಂದೇ ಕಾರಣಕ್ಕೆ ನಾಝಿ ಶ್ರಮಶಿಬಿರಗಳ ಪಾಲಾಗುವ ಹದಿವಯಸ್ಸಿನ ಹುಡುಗಿ ಸಿಲ್ಕಾ, ಆಶ್ವಿಟ್ಸಿನ ಶ್ರಮಶಿಬಿರದಲ್ಲಿ ಕಷ್ಟದ ದುಡಿತದ ಜೊತೆಗೇ ನಾಝಿ ಸೈನಿಕರ ಕಾಮದಾಹಕ್ಕೆ ಬಲಿಯಾಗುತ್ತಾಳೆ. ಮುಂದೆ ನಾಝಿ ಸಹಚರಳು ಎಂಬ ಹಣೆಪಟ್ಟಿ ಹೊತ್ತು ಸೋವಿಯತ್ ಶ್ರಮಶಿಬಿರಕ್ಕೆ ರವಾನೆಯಾಗುತ್ತಾಳೆ. ಅಲ್ಲಿಯೂ ಮತ್ತೊಮ್ಮೆ ಸೈನಿಕರಿಂದ ದೌರ್ಜನ್ಯಕ್ಕೊಳಗಾಗುತ್ತಾ, ಇರುವ ಕಷ್ಟದ ನಡುವೆ ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ನೆರವಾಗುತ್ತಾ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಾಳೆ.

ಲೇಖಕಿ ಹೆದರ್ ಮೋರಿಸ್​​ಗೆ  ಅತ್ಯಂತ ಜನಪ್ರಿಯತೆ ತಂದುಕೊಟ್ಟ ‘ದಿ ಟ್ಯಾಟೂಯಿಸ್ಟ್ ಆಪ್ ಆಶ್ವಿಟ್ಸ್’ ಕಾದಂಬರಿಯ ಕಥಾನಾಯಕ, ನಾಝೀ ಶ್ರಮಶಿಬಿರದಲ್ಲಿ ಹೆಣಗಾಡಿ ಸಾವಿನ ನೆರಳಿಂದ ಪಾರಾಗಿ ಬಂದ ಲಾಲೇ ಸುಕಲೋವರನ್ನು ಸಂದರ್ಶಿಸುವಾಗ ಆತ ‘ಸಿಸೀಲಿಯಾ’ ಎಂಬ ಹುಡುಗಿಯ ಕುರಿತು ಆಡುವ ‘ಆಕೆ ನಾನು ಕಂಡ ಅತ್ಯಂತ ದಿಟ್ಟ ವ್ಯಕ್ತಿ’ ಎನ್ನುವ ಮಾತು ಲೇಖಕಿಯನ್ನು ಬಹಳವಾಗಿ ಆಕರ್ಶಿಸಿದ ಪರಿಣಾಮವೇ ಸಿಲ್ಕಾ’ಸ್ ಜರ್ನಿ ಎಂಬ ಈ ಕಾದಂಬರಿ. ಸಿಲ್ಕಾಳ ಶಿಬಿರ ಸಹವರ್ತಿಗಳು ಹಾಗೂ ಲಾಲೇ ಇನ್ನಿತರರ ಸಂದರ್ಶನದ ಆಧಾರದೊಂದಿಗೆ ರಚಿಸಲ್ಪಟ್ಟ ಕಾಲ್ಪನಿಕ ಕಾದಂಬರಿಯಲ್ಲಿ ಯುದ್ಧ, ರಾಜಕೀಯ ಏಳುಬೀಳುಗಳು ಸಾಮಾನ್ಯರ ಜೀವನದಲ್ಲಿ ಉಂಟುಮಾಡುವ ಪರಿಣಾಮಗಳು, ನಾಝಿ ಶಿಬಿರಗಳ ಬರ್ಬರತೆ, ಪ್ರತಿಕ್ಷಣ ಎದುರಿಸಬೇಕಾದ ಅಭದ್ರತೆ ಮತ್ತು ಅಸ್ಥಿರತೆ, ಅನಿವಾರ್ಯ ಸಂದರ್ಭಗಳಲ್ಲಿ ಕಷ್ಟವನ್ನು ಎದುರಿಸುವ ಸಿಲ್ಕಾ(ಸಿಸೀಲಿಯಾ)ಳ ಧೈರ್ಯ ಎಲ್ಲವೂ ಗಾಢವಾಗಿ ಚಿತ್ರಿಸಲ್ಪಟ್ಟಿದೆ. ಸಿಸೀಲಿಯಾ ಕ್ಲೆಯೀನ್ನರ ಜೀವನಾಧಾರಿತ ಕಾದಂಬರಿ ಹೆದರ್ ಮೋರಿಸ್ ಅವರ ಉತ್ತಮ ಕೃತಿಗಳಲ್ಲಿ ಒಂದು.

ಕೃ: ಬದುಕ ದಿಕ್ಕು ಬದಲಿಸಿದ ಅಸ್ಟಿಯೋ ಸರ್ಕೋಮಾ 

ಲೇ: ಶ್ರುತಿ ಬಿ. ಎಸ್

ಪ್ರ: ಗೋಮಿನಿ ಪ್ರಕಾಶನ

ಕ್ಯಾನ್ಸರ್ ಎಂಬ ಪದಕ್ಕಿರುವ ಭೀಕರತೆ ಸ್ವತಃ ಸಾವಿಗೂ ಇಲ್ಲವೇನೋ. ಶೃತಿಯವರ ಈ ಪುಸ್ತಕ ವಿಷೇಶ ಎನಿಸಲು ಕಾರಣಗಳು ಹಲವು. ಮುಖ್ಯವಾಗಿ ಆಕೆಯ ಮುಗ್ಧ, ಸರಳ ನಿರೂಪಣಾ ಶೈಲಿ. ಬೆಟ್ಟದಂಥ ಸಮಸ್ಯೆಯನ್ನು ಕೂಡ ಹಗುರವಾಗಿ ನೋಡುತ್ತಾ ಧೈರ್ಯವಾಗಿ ಎದುರಿಸುವ ದೃಷ್ಟಿಕೋನ, ದಣಿದು ಮುದುಡಿದ ಮನಸ್ಥಿತಿಯಲ್ಲೂ ತನ್ನ ತಾನೇ ಸಮಾಧಾನಿಸುತ್ತಾ ಕಡೆಗೂ ಕ್ಯಾನ್ಸರ್ ಗೆದ್ದ ಅನುಭವ ಪ್ರತಿಯೊಬ್ಬರಿಗೂ ಮಾದರಿ.

ಡಯಾಗ್ನೋಸಿಸ್, ಕಿಮೋಥೆರಪಿ ಇವುಗಳ ಬಗ್ಗೆ ತಮ್ಮ ಅನುಭವ ದಾಖಲಿಸುವುದು ಮಾತ್ರವಲ್ಲದೇ ಆಸ್ಟಿಯೋ ಸರ್ಕೋಮಾದ ಸ್ವರೂಪ, ಆಪರೇಷನ್ ಮತ್ತು ಚಿಕಿತ್ಸಾ ವಿಧಾನಗಳು, ಕಿಮೋ ಥೆರಪಿಯ ಅಡ್ಡಪರಿಣಾಮಗಳು ಎಲ್ಲವನ್ನೂ ಚಿಕ್ಕದಾಗಿ ವಿವರಿಸಿರುವುದು, ಇದೇ ಸಮಸ್ಯೆ ದಾಟಿ ಬಂದ ಬೇರೆ ಕ್ಯಾನ್ಸರ್ ಸರ್ವೈವರ್​ಗಳ ಜೀವನಾನುಭವ, ಆಸ್ಪತ್ರೆ ವಾತಾವರಣ, ಅಲ್ಲಿನ ಸಹವರ್ತಿಗಳು, ಡಾಕ್ಟರುಗಳು, ಕುಟುಂಬದ ಸಹಕಾರ, ಕ್ಯಾನ್ಸರ್ ನಂತರದ ಆರೋಗ್ಯ ಕಾಳಜಿ, ಆಹಾರ, ಅಭ್ಯಾಸ, pause ಮಾಡಲ್ಪಟ್ಟ ಬದುಕಿಗೆ ಮತ್ತೆ ಮರಳಿದ ರೀತಿ ಎಲ್ಲವನ್ನೂ ಲೇಖಕಿ ಎಲ್ಲಿಯೂ ಕನಿಕರ ಬೇಡದ, ಗೋಳುಕರೆಯದ ನೇರ ಸ್ಪಷ್ಟ ಧ್ವನಿಯಲ್ಲಿ ನಿರೂಪಿಸಿದ್ದಾರೆ. ದುಃಖದ ಕ್ಷಣಗಳೂ ಕೂಡ ಪುಟ್ಟ ಗೆಳತಿಯೊಬ್ಬಳು ತನ್ನ ನೋವುಗಳನ್ನು ಹಂಚಿಕೊಂಡಂತಿವೆಯೇ ಹೊರತು‌ ಎಲ್ಲಿಯೂ‌ ಓದುಗರ ಧೈರ್ಯ ಕುಗ್ಗಿಸುವ, ಕಂಗೆಡಿಸುವ ರೀತಿಯಲ್ಲಿಲ್ಲ.

ಕ್ಯಾನ್ಸರ್/ ನೋ ಕ್ಯಾನ್ಸರ್ ಇದು ಪ್ರತಿಯೊಬ್ಬರೂ ಓದಲೇಬೇಕಾದ ಒಂದು ಅತ್ಯುತ್ತಮ ಸ್ಪೂರ್ತಿದಾಯಕ ಪುಸ್ತಕ. ನನ್ನ ಮಟ್ಟಿಗೆ ಈ ವರ್ಷದ ಅತ್ಯುತ್ತಮ ಓದುಗಳಲ್ಲಿ ಖಂಡಿತವಾಗಿಯೂ ಇದೂ ಒಂದು.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ರಂಗನಿರ್ದೇಶಕ ಪ್ರಸಾದ ರಕ್ಷಿದಿ; ’ರಂಗಕೈರಳಿ‘ ಮತ್ತು ‘ನಮ್ಮ ದಿನಗಳು ಮತ್ತು ಇತರ ಪ್ರಬಂಧಗಳು‘

 

Published On - 3:06 pm, Tue, 29 December 20