2020 Year in Review | ಸಂಘರ್ಷ, ಆತಂಕದ ನಡುವೆ ಕಾಡಿದ ಒಂಟಿತನ; ಒಂದು ವರ್ಷದಲ್ಲಿ ಏನೆಲ್ಲಾ ಆಯ್ತು?

|

Updated on: Dec 30, 2020 | 12:41 PM

2020ರಲ್ಲಿ ದೇಶದಲ್ಲಿ ಏನೆಲ್ಲಾ ನಡೆಯಿತು. ಕೊರೊನಾ ಸೋಂಕು, ಲಾಕ್​ಡೌನ್, ವಲಸೆ ಕಾರ್ಮಿಕರ ಸಂಕಷ್ಟ, ಬಾಲಿವುಡ್ ಡ್ರಗ್ಸ್​ ಜಾಲ, ರೈತರ ಪ್ರತಿಭಟನೆ.. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಪ್ರಮುಖ ಘಟನೆಗಳ ಮೆಲುಕು ಇಲ್ಲಿದೆ.

2020 Year in Review | ಸಂಘರ್ಷ, ಆತಂಕದ ನಡುವೆ ಕಾಡಿದ ಒಂಟಿತನ; ಒಂದು ವರ್ಷದಲ್ಲಿ ಏನೆಲ್ಲಾ ಆಯ್ತು?
ಪ್ರಾತಿನಿಧಿಕ ಚಿತ್ರ
Follow us on

ಒಂದಿಡೀ ವರ್ಷದಲ್ಲಿ ಪ್ರತಿದಿನ ಎಂಬಂತೆ ಸುದ್ದಿಯಾದ ಪದ ಕೋವಿಡ್-19. ಕೊರೊನಾ ವೈರಸ್​ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲೆಂದು ಕೇಂದ್ರ ಸರ್ಕಾರ ಲಾಕ್​ಡೌನ್​ ಮಾರ್ಗಸೂಚಿ ಹೊರಡಿಸಿತು. ಅದನ್ನು ಅನುಷ್ಠಾನಕ್ಕೆ ತರುವ ಹೊಣೆಯನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟುಕೊಟ್ಟಿತ್ತು. ಬಸ್ಸು, ರೈಲು, ವಿಮಾನಗಳ ಸಂಚಾರ ನಿಂತುಹೋಯಿತು. ವಿವಿಧ ರಾಜ್ಯ ಸರ್ಕಾರಗಳ ನಡುವಣ ಕಾರ್ಯವೈಖರಿ ಮತ್ತು ನಿಯಮಗಳಲ್ಲಿ ಏಕರೂಪತೆ ಇರದ ಕಾರಣ ಗಡಿ ದಾಟಲು ಸಾಧ್ಯವಾಗದ ಅಸಹಾಯಕ ನೋವಿನಲ್ಲಿ ವಲಸೆ ಕಾರ್ಮಿಕರು ನಿಟ್ಟುಸಿರುಬಿಟ್ಟರು.

ಇದರ ನಡುವೆಯೇ ಗಲಭೆ, ಪ್ರತಿಭಟನೆ, ಚೀನಾ ಜತೆಗಿನ ಸಂಘರ್ಷ, ರೈತರ ಹೋರಾಟ ಎಲ್ಲವೂ ಈ ವರ್ಷದ ಪ್ರಮುಖ ಘಟನೆಗಳು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದೊಂದಿಗೆ ಮುನ್ನೆಲೆಗೆ  ಬಂದ ಡ್ರಗ್ ಜಾಲದ ಚರ್ಚೆ, ಕುನಾಲ್ ಕಾಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ, ಐಪಿಎಲ್, ಕಂಗನಾ ರನೌತ್ ಟ್ವೀಟ್ ವಾರ್ ಸಹ 2020 ಎಂದು ಧ್ಯಾನಿಸಿದಾಗ ಮನದಂಗಳಲ್ಲಿ ತೇಲಿ ಹೋಗುವ ಸುದ್ದಿ ತುಣುಕುಗಳು. 2020ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಪ್ರಮುಖ ಘಟನೆಗಳ ಮೆಲುಕು ಇಲ್ಲಿದೆ.

ಜನವರಿ; ಕೊರೊನಾ ಕಾಣಿಸಿಕೊಂಡ ತಿಂಗಳು

ಜನವರಿ 27: ಅಸ್ಸಾಂ ಸರ್ಕಾರ ಮತ್ತು ಭಾರತ ಸರ್ಕಾರವು ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊ ಲ್ಯಾಂಡ್ (ಎನ್​ಡಿಎಫ್​ಬಿ)ನೊಂದಿಗೆ ಒಪ್ಪಂದಕ್ಕೆ ಸಹಿ
ಜನವರಿ 30: ಚೀನಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಕೊರೊನಾವೈರಸ್ ಭಾರತಕ್ಕೂ ಕಾಲಿಟ್ಟಿತು. ಕೇರಳದಲ್ಲಿ ಕೊರೊನಾವೈರಸ್ ಮೊದಲ ಪ್ರಕರಣ ಪತ್ತೆ

ಫೆಬ್ರುವರಿ; ಮತ್ತೊಮ್ಮೆ ಆಪ್ ತೆಕ್ಕೆಗೆ ದೆಹಲಿ

ಫೆಬ್ರುವರಿ 8: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲುವು. 70 ಸೀಟುಗಳ ಪೈಕಿ 62 ಸೀಟುಗಳನ್ನು ಗೆದ್ದು ಆಮ್ ಆದ್ಮಿ ಪಕ್ಷ ಬಹುಮತ ಸಾಧಿಸಿತ್ತು.
ಫೆಬ್ರುವರಿ 23: ಹಿಂಸಾಚಾರ- ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ–ವಿರುದ್ಧದ ಪ್ರತಿಭಟನೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿತು. ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದರು.
ಫೆಬ್ರುವರಿ 24: ನಮಸ್ತೆ ಟ್ರಂಪ್- ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಸ್ವಾಗತ ಕೋರಿ ಅಹಮದಾಬಾದ್​ನ  ಮೊಟೇರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಮಾರ್ಚ್; ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು

ಮಾರ್ಚ್ 20: ರಾಜಕೀಯ ಬಿಕ್ಕಟ್ಟು- ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದರು. ಇದು ರಾಜಕೀಯ ಬಿಕ್ಕಟ್ಟಿಗೆ ನಾಂದಿ ಹಾಡಿತು.
ಮಾರ್ಚ್ 20: ಗಲ್ಲುಶಿಕ್ಷೆ- ಡಿಸೆಂಬರ್ 16, 2012ರಂದು ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಯಿತು.
ಮಾರ್ಚ್ 22:  ಜನತಾ ಕರ್ಫ್ಯೂ- ಕೊರೊನಾ ಸೋಂಕು ಹರಡುವುದನ್ನು ತಡೆಯಲು 14 ಗಂಟೆಗಳ ಲಾಕ್ ಡೌನ್ ಘೋಷಣೆ
ಮಾರ್ಚ್ 23: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಚೌಹಾಣ್ ಪ್ರತಿಜ್ಞಾವಿಧಿ ಸ್ವೀಕಾರ.

ಏಪ್ರಿಲ್​; ಕರ್ಫ್ಯೂ ಮಾದರಿ ಲಾಕ್​ಡೌನ್ ಘೋಷಿಸಿದ ಕೇಂದ್ರ

ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲೆಂದು ಮಾರ್ಚ್​ 24ರಿಂದ ಏಪ್ರಿಲ್ 14ರ ವರೆಗೆ 21 ದಿನಗಳ ಲಾಕ್​ಡೌನ್​ ಘೋಷಿಸಿದರು. ಮಾರ್ಚ್​ 24ರಿಂದ 21 ದಿನಗಳ ಕಾಲ ಯಾರೊಬ್ಬರೂ ಮನೆಯಿಂದ ಹೊರಗೆ ಬರಲೇಬಾರದು. ಇದು‌ ಕರ್ಪ್ಯೂ ರೀತಿಯಲ್ಲಿಯೇ ಇರುತ್ತದೆ. ಕೊರೊನಾ ಎಂದರೆ ಕೋಯಿ ರೋಡ್‌ ಪರ್‌ ನಾ ನಿಕಲೆ (ಯಾರೊಬ್ಬರೂ ರಸ್ತೆಗೆ ಬರಬಾರದು) ಎಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಮಹತ್ವವನ್ನು ಮನದಟ್ಟು ಮಾಡಲು ಮೋದಿ ಯತ್ನಿಸಿದ್ದರು.

ಮೇ; ವಿಶಾಖಪಟ್ಟಣ ವಿಷಾನಿಲ ದುರಂತ
ಮೇ 6: ಭಯೋತ್ಪಾದಕ ನೈಕೂ ಹತ್ಯೆ- ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೋಸ್ಟ್ ವಾಟೆಂಡ್ ಭಯೋತ್ಪಾದಕ ರಿಯಾಜ್ ನೈಕೂ ಹತ್ಯೆ
ಮೇ 7 : ಅನಿಲ ದುರಂತ- ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ರಾಸಾಯನಿಕ ಅನಿಲ ಸೋರಿಕೆಯಿಂದ 13 ಮಂದಿ ಸಾವು

ಮೇ 20: ಆಗ್ನೇಯ ರಾಜ್ಯಗಳಿಗೆ ಅಪ್ಪಳಿಸಿದ ಅಂಫನ್ ಚಂಡಮಾರುತ

ಚಂಡಮಾರುತದ ತೀವ್ರತೆಯನ್ನು ಅಂದಾಜಿಸಿ ಲಕ್ಷಾಂತರ ಮಂದಿಯನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಸಂತ್ರಸ್ತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಇದು ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಅತ್ಯಂತ ಪ್ರಬಲ ಚಂಡಮಾರುತ. ಸ್ವಾತಂತ್ರ್ಯಾನಂತರ ಭಾರತಕ್ಕೆ ಅಪ್ಪಳಿಸಿದ ಎರಡನೇ ಅತಿವೇಗದ ಚಂಡಮಾರುತ (ಸೂಪರ್‌ ಸೈಕ್ಲೋನ್‌) ಇದು. 1999ರ ಅಕ್ಟೋಬರ್ 29ರಂದು ಮೊದಲ ಸೂಪರ್ ಸೈಕ್ಲೋನ್ ದಾಳಿಯಿಟ್ಟಿತ್ತು.

ಜೂನ್; ಕೃಷಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ
ಜೂನ್ 2: ಪಶ್ಚಿಮ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ, ಮಹಾರಾಷ್ಟ್ರದಲ್ಲಿ ಹಾನಿ
ಜೂನ್ 5: ಕೃಷಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ, ಸುಗ್ರೀವಾಜ್ಞೆ
ಜೂನ್ 14: ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಮುಂಬೈ ಬಾಂದ್ರಾದಲ್ಲಿರುವ ಫ್ಲಾಟ್​ನಲ್ಲಿ ಆತ್ಮಹತ್ಯೆ.

ಜೂನ್ 15: ಲಡಾಖ್ ಸಂಘರ್ಷ- 20 ಯೋಧರು ಹುತಾತ್ಮ

ಲಡಾಖ್​ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಭಾರತ-ಚೀನಾ ಪಡೆಗಳ ನಡುವೆ ಸಂಘರ್ಷ ಸಂಭವಿಸಿದೆ. ಬಿಹಾರ್ ರೆಜಿಮೆಂಟ್​ನ ಕಮಾಂಡಿಂಗ್ ಆಫೀಸರ್ ಸೇರಿ ಭಾರತದ 20 ಯೋಧರು ಹುತಾತ್ಮರಾದರು. ಎರಡೂ ದೇಶಗಳ ಸೈನಿಕರ ನಡುವೆ ಜೂನ್ 15ರ ರಾತ್ರಿ ಘರ್ಷಣೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡು, ಕಣಿವೆಗೆ ಜಾರಿದ್ದ ಹಲವು ಸೈನಿಕರು ಅತಿ ಚಳಿಯಿಂದ ಮರಗಟ್ಟಿ ಹುತಾತ್ಮರಾದರು ಎಂದು ಭಾರತೀಯ ಸೇನೆ ಹೇಳಿತ್ತು.

ಜೂನ್ 25: ರೈಲು ರದ್ದು- ರಾಜಧಾನಿ ಮತ್ತು ವಲಸೆಗಾರರಿಗಿರುವ ಶ್ರಮಿಕ್ ಎಕ್ಸ್​ಪ್ರೆಸ್​ ರೈಲುಗಳನ್ನು ಹೊರತುಪಡಿಸಿ ಉಳಿದೆಲ್ಲ ರೈಲುಗಳ ಸಂಚಾರವನ್ನು ಆಗಸ್ಟ್ 12ರವರೆಗೆ ಭಾರತೀಯ ರೈಲ್ವೆ ರದ್ದು ಮಾಡಿತು.

ಜೂನ್ 29: ಚೀನಾ ಆ್ಯಪ್ ನಿಷೇಧ- ಟಿಕ್ ಟಾಕ್, ಕ್ಯಾಮ್ ಸ್ಕ್ಯಾನರ್, ಶೇರ್ ಇಟ್ ಸೇರಿದಂತೆ 59 ಚೀನಾ ಆ್ಯಪ್​ಗಳಿಗೆ ಭಾರತ ಸರ್ಕಾರ ನಿಷೇಧ ಹೇರಿತು.

ಜುಲೈ; ವಿಕಾಸ್​ ದುಬೆ ಎನ್​ಕೌಂಟರ್
ಜುಲೈ 3: ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ್ ದುಬೆ ನಡೆಸಿದ ದಾಳಿಯಲ್ಲಿ ಉತ್ತರ ಪ್ರದೇಶದ 8 ಪೊಲೀಸರು ಹುತಾತ್ಮ
ಜುಲೈ 10: ವಿಕಾಸ್ ದುಬೆ ಎನ್ ಕೌಂಟರ್
ಜುಲೈ 21:  ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ
ಜುಲೈ 29- ಪಂಜಾಬ್ ಲ್ಲಿ ಕಳ್ಳಭಟ್ಟಿ ದುರಂತ, 121 ಮಂದಿ ಸಾವು

ಆಗಸ್ಟ್; ರಾಮಮಂದಿರಕ್ಕೆ ಶಂಕು ಸ್ಥಾಪನೆ
ಆಗಸ್ಟ್ 5: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ, ನರೇಂದ್ರ ಮೋದಿಯಿಂದ ಭೂಮಿ ಪೂಜೆ
ಆಗಸ್ಟ್ 7: ವಿಮಾನ ದುರಂತ- ದುಬೈಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಯಿತು. ಅವಘಡದಲ್ಲಿ 19 ಮಂದಿ ಮೃತಪಟ್ಟಿದ್ದರು.
ಆಗಸ್ಟ್ 7: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್​ನಲ್ಲಿ ಮಣ್ಣು ಕುಸಿತ, 24 ಸಾವು
ಆಗಸ್ಟ್ 9: ಆಸ್ಪತ್ರೆಗೆ ಬೆಂಕಿ- ಆಂಧ್ರಪ್ರದೇಶದ ವಿಜಯವಾಡದ ಕೋವಿಡ್-19 ರೋಗಿಗಳಿದ್ದ ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ, 11 ಸಾವು
ಆಗಸ್ಟ್ 20: ತೆಲಂಗಾಣದ ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ವಿದ್ಯುತ್ ಘಟಕದಲ್ಲಿ ಬೆಂಕಿ ಅವಘಡ, 9 ಸಾವು
ಆಗಸ್ಟ್ 31:  2020- 2021 ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅಂತ್ಯಕ್ಕೆ ಜಿಡಿಪಿ ಶೇ. 23.9 ಕುಸಿತ

ಸೆಪ್ಟೆಂಬರ್; ಆಡ್ವಾಣಿ ದೋಷಮುಕ್ತ
ಸೆಪ್ಟೆಂಬರ್ 14:  ಸಂಸತ್ತಿನಲ್ಲಿ ಮೂರು ಕೃಷಿ ಮಸೂದೆ ಮಂಡನೆ
ಸೆಪ್ಟೆಂಬರ್ 30: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ. ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳನ್ನು ದೋಷಮುಕ್ತ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ.

ಅಕ್ಟೋಬರ್; ದೆಹಲಿಯಲ್ಲಿ ಚಳಿಚಳಿ
ಅಕ್ಟೋಬರ್ 31: ದೆಹಲಿಯಲ್ಲಿ ಸರಾಸರಿ ತಾಪಮಾನ 17.2 ಡಿಗ್ರಿಗೆ ಇಳಿಕೆ. 58 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲು. 1962ರ ಅಕ್ಟೋಬರ್‌ನಲ್ಲಿ ಕನಿಷ್ಠ ಸರಾಸರಿ 16.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ನವೆಂಬರ್; ಮುಂಬೈ ಇಂಡಿಯನ್ಸ್​ಗೆ ಐಪಿಎಲ್​ ಟ್ರೋಫಿ

ನವೆಂಬರ್ 10: ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರಾಭವಗೊಳಿಸಿ 5ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್

ನವೆಂಬರ್ 12: ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ- ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ತುರ್ತು ವಿಚಾರಣೆಗೆ ಸ್ವೀಕರಿಸಿದ್ದಕ್ಕಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಸೇರಿದಂತೆ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ‘ಸ್ಟ್ಯಾಂಡ್-ಅಪ್’ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಒಪ್ಪಿಗೆ ನೀಡಿದರು.

ನವೆಂಬರ್ 16: ಮತ್ತೊಮ್ಮೆ ನಿತೀಶ್- ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಮಾಣ ವಚನ.

ನವೆಂಬರ್ 25: ದೆಹಲಿ ಚಲೋ ಶುರು- ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರೈತ ಸಂಘಟನೆಗಳಿಂದ ದೆಹಲಿ ಚಲೋ ಚಳವಳಿ ಆರಂಭ. ದೇಶದ 450ಕ್ಕೂ ಹೆಚ್ಚು ರೈತ ಸಂಘಟನೆಗಳಿಂದ ಕಿಸಾನ್ ಏಕತಾ ಮೋರ್ಚಾ ಒಕ್ಕೂಟ ರಚನೆ. ಹರ್ಯಾಣದೆಹಲಿ, ದೆಹಲಿಉತ್ತರಪ್ರದೇಶದ ನಡುವಣ ಐದು ಪ್ರಮುಖ ಗಡಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರು ಬೀಡುಬಿಟ್ಟಿದ್ದಾರೆ

ಡಿಸೆಂಬರ್

ಡಿಸೆಂಬರ್ 27:  ಬಿಹಾರದಲ್ಲಿ ಬದಲಾವಣೆ- ಜೆಡಿಯು ಅಧ್ಯಕ್ಷ ಸ್ಥಾನಕ್ಕೆ  ನಿತೀಶ್ ಕುಮಾರ್ ರಾಜೀನಾಮೆ, ನೂತನ ಅಧ್ಯಕ್ಷರಾಗಿ ಆರ್​ಸಿಪಿ ಸಿಂಗ್ (ರಾಮಚಂದ್ರ ಪ್ರಸಾದ್ ಸಿಂಗ್) ಆಯ್ಕೆ
ಡಿಸೆಂಬರ್ 28:  ದೇಶದ ಮೊತ್ತ ಮೊದಲ ಚಾಲಕ ರಹಿತ ಮೆಟ್ರೋ ಮತ್ತು 100ನೇ ಕಿಸಾನ್ ರೈಲಿಗೆ ಮೋದಿ ಚಾಲನೆ

2020 year in review | ಸುಪ್ರೀಂಕೋರ್ಟ್ ನೀಡಿದ ಐದು ಮಹತ್ತರ ತೀರ್ಪುಗಳು

2020 year in review | ಸಚಿವರ ಸಾಧನೆಗೆ ಕೈಗನ್ನಡಿ; ಇಲ್ಲಿದೆ ಅಂಕಪಟ್ಟಿ