AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ: 7ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧತೆ, ಇಂದಾದರೂ ಈಡೇರುತ್ತಾ ರೈತರ ಬೇಡಿಕೆಗಳು?

ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ಇಂದು ಫಿಕ್ಸ್ ಆಗಿದೆ. ಇಂದು ಮಧ್ಯಾಹ್ನ 2ಗಂಟೆಗೆ ದೆಹಲಿಯ ವಿಜ್ಞಾನ ಭವನಕ್ಕೆ ರೈತರನ್ನ ಆಹ್ವಾನಿಸಲಾಗಿದೆ. 40ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ: 7ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧತೆ, ಇಂದಾದರೂ ಈಡೇರುತ್ತಾ ರೈತರ ಬೇಡಿಕೆಗಳು?
ಪ್ರತಿಭಟನಾನಿರತ ರೈತರು (ಸಂಗ್ರಹ ಚಿತ್ರ)
ಪೃಥ್ವಿಶಂಕರ
| Edited By: |

Updated on:Dec 30, 2020 | 9:32 AM

Share

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರು ಮೊಳಗಿಸಿರುವ ಪ್ರತಿಭಟನೆಯ ರಣಕಹಳೆ 36ನೇ ದಿನಕ್ಕೆ ಕಾಲಿಟ್ಟಿದ್ದು, ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಈ ನಡುವೆ ಹೋರಾಟಗಾರರು ಹಾಗೂ ಸರ್ಕಾರಕ್ಕೆ ಇವತ್ತು ಮಹತ್ವದ ದಿನವಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ 36 ನೇ ದಿನಕ್ಕೆ‌ ಕಾಲಿಟ್ಟಿದೆ. ನವೆಂಬರ್ 26 ರಿಂದ ದೆಹಲಿ ಗಡಿ ಭಾಗದಲ್ಲಿ ಅನ್ನದಾತರು ಈ ಹೋರಾಟ ಆರಂಭಿಸಿದ್ದಾರೆ. ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದ್ದು, ದಿನೇ ದಿನೇ ಪರಿಸ್ಥಿತಿ ಜಟಿಲವಾಗುತ್ತಿದೆ.

5 ಬಾರಿ ಸರ್ಕಾರ, 1 ಬಾರಿ ಅಮಿತ್ ಶಾ ಸಭೆ ವಿಫಲ..! ಈ ಮಧ್ಯೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ 5 ಸಭೆಗಳು ನಡೆದಿವೆ. ಗೃಹ ಸಚಿವ ಅಮಿತ್ ಶಾ ಅವರು ಕೂಡ ಒಮ್ಮೆ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆಯನ್ನ ನಡೆಸಿದ್ದಾರೆ. ಅವೆಲ್ಲ ವಿಫಲವಾಗಿದ್ದು, ರೈತರು ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಹೀಗಾಗಿಯೇ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ಇಂದು ಫಿಕ್ಸ್ ಆಗಿದೆ. ಇಂದು ಮಧ್ಯಾಹ್ನ 2ಗಂಟೆಗೆ ದೆಹಲಿಯ ವಿಜ್ಞಾನ ಭವನಕ್ಕೆ ರೈತರನ್ನ ಆಹ್ವಾನಿಸಲಾಗಿದೆ. 40ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ 5 ಬಾರಿ ಸರ್ಕಾರ ಹಾಗೂ 1 ಬಾರಿ ಅಮಿತ್ ಶಾ ಜೊತೆ ನಡೆದಿದ್ದ ಸಭೆ ವಿಫಲವಾಗಿದೆ. ಹೀಗಾಗಿ ಇಂದಿನ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಹೋರಾಟ ನಿರತ ರೈತರ ಬೇಡಿಕೆಗಳು ಏನೇನು..? ಅಂದಹಾಗೆ ಇಂದಿನ ಮಹತ್ವದ ಸಭೆಯಲ್ಲಿ ಭಾಗಿಯಾಗ್ತಿರೋ ರೈತರು ಹಲವು ಮಹತ್ವದ ಬೇಡಿಕೆಗಳನ್ನ ತಮ್ಮ ಜೊತೆಯೇ ಹೊತ್ತೊಯ್ಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಧಾನ ಸಭೆಯಲ್ಲಿ ಈ ಬಗ್ಗೆ ಒತ್ತಡ ಹೇರಲಿದ್ದಾರೆ. ಹಾಗಾದ್ರೆ ರೈತರ ಬೇಡಿಕೆಗಳು ಏನು ಅನ್ನೋದನ್ನ ನೋಡೋದಾದ್ರೆ.

ಕೇಂದ್ರದ 3 ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು. ಕೃಷಿ ಆಯೋಗದ ಶಿಫಾರಸು ಪ್ರಕಾರ ಕೃಷಿ ಉತ್ಪನ್ನದ ಬೆಂಬಲ ಬೆಲೆ ನೀಡಿಕೆಗೆ ಕಾನೂನು ಬದ್ಧ ಗ್ಯಾರಂಟಿ ನೀಡಬೇಕು. NCR ಹಾಗೂ ಸುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆ ಸುಗ್ರೀವಾಜ್ಞೆಗೆ ತಿದ್ದುಪಡಿ ತರಬೇಕು. ರೈತರಿಗೆ ಈ‌ ಕಾಯಿದೆಯಡಿ ದಂಡವನ್ನು ವಿಧಿಸಬಾರದು. ರೈತರ ಹಿತ ರಕ್ಷಣೆಗೆ ವಿದ್ಯುತ್ ತಿದ್ದುಪಡಿ ಮಸೂದೆ 2020 ಕ್ಕೆ ತಿದ್ದುಪಡಿ ಸೇರಿದಂತೆ ಇತರ ಬೇಡಿಕೆಗಳನ್ನ ರೈತರು ಸರ್ಕಾರದ ಮುಂದಿಟ್ಟಿದ್ದಾರೆ.

ಮೇಲೆ ವಿವರಿಸಿದ 4 ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕೆಂದು ರೈತ ಸಂಘಟನೆಗಳಿಂದ ಅಜೆಂಡಾ ಫಿಕ್ಸ್ ಆಗಿದೆ‌. ಅಜೆಂಡಾವನ್ನ ಕೇಂದ್ರ ಕೃಷಿ ಇಲಾಖೆಗೆ ರವಾನಿಸಿದ್ದಾರೆ. ಇಂದಿನ ಸಭೆಗೂ ಮುನ್ನಾ ಗೃಹ ಸಚಿವ ಅಮಿತ್ ಶಾ ಜೊತೆ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ರೇಲ್ವೆ ಸಚಿವ ಪಿಯೂಷ್ ಗೋಯಲ್ ಚರ್ಚೆ ನಡೆಸಿದ್ದಾರೆ‌. ರೈತರ ಮನವೊಲಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ರೈತರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟ ಇಂದಿನ ಸಭೆಯ ಬಳಿಕ ಕೊನೆಯಾಗಲಿದೆಯಾ ಅಥವಾ ಮತ್ತೆ ಮುಂದುವರಿಯಲಿದೆಯಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಪಂಜಾಬ್​ ರೈತರ Delhi Chaloಗೆ ರಾಜ್ಯದ ಅನ್ನದಾತರ ಬೆಂಬಲ

Published On - 9:21 am, Wed, 30 December 20