
ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳು, ಹುಟ್ಟುಹಬ್ಬ ಅಥವಾ ಗೃಹಪ್ರವೇಶದಂತಹ ಶುಭ ಸಂದರ್ಭಗಳಲ್ಲಿ ಸ್ನೇಹಿತರಿಗೆ ಮತ್ತು ಆಪ್ತರಿಗೆ ಸುಂದರವಾದ ಗಿಡಗಳನ್ನು ಉಡುಗೊರೆಯಾಗಿ (Green Gifting) ನೀಡುವುದು ಒಂದು ದೊಡ್ಡ ಟ್ರೆಂಡ್ ಆಗಿದೆ. ಗಿಡಗಳನ್ನು ನೀಡುವುದು ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳನ್ನು ಇತರರಿಗೆ ಗಿಫ್ಟ್ ಆಗಿ ನೀಡುವುದು ಅಥವಾ ಇತರರಿಂದ ಪಡೆದುಕೊಳ್ಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ ಗಿಡಗಳು ಉಡುಗೊರೆ ನೀಡಿದವರ ಮತ್ತು ಪಡೆದವರ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ ವಾಸ್ತು ಪ್ರಕಾರ ಯಾವ ಗಿಡಗಳನ್ನು ಎಂದಿಗೂ ಗಿಫ್ಟ್ ಮಾಡಬಾರದು ಎಂಬುದರ ವಿವರ ಇಲ್ಲಿದೆ.
ಇತ್ತೀಚೆಗೆ ಸಣ್ಣ ಸಣ್ಣ ಕುಂಡಗಳಲ್ಲಿರುವ ಬಣ್ಣ ಬಣ್ಣದ ಕ್ಯಾಕ್ಟಸ್ (Cactus) ಗಿಡಗಳನ್ನು ಕಚೇರಿ ಮೇಜು ಅಥವಾ ಮನೆಯ ಅಲಂಕಾರಕ್ಕಾಗಿ ಗಿಫ್ಟ್ ಕೊಡುವುದು ಹೆಚ್ಚಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳುಗಳನ್ನು ಹೊಂದಿರುವ ಯಾವುದೇ ಗಿಡವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಮತ್ತು ಸಂಘರ್ಷವನ್ನು ಪ್ರತಿನಿಧಿಸುತ್ತವೆ. ಇಂತಹ ಗಿಡಗಳನ್ನು ಗಿಫ್ಟ್ ನೀಡುವುದರಿಂದ ಆಪ್ತರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಬಹುದು ಹಾಗೂ ಅವರ ಮನೆಯಲ್ಲಿ ಸದಾ ಜಗಳ, ಅಶಾಂತಿ ಮೂಡುವಂತೆ ಮಾಡಬಹುದು ಎಂದು ನಂಬಲಾಗಿದೆ.
ದೊಡ್ಡದಾಗಿ ಬೆಳೆಯುವ ಮರಗಳನ್ನು ಕೃತಕ ತಂತ್ರಜ್ಞಾನದ ಮೂಲಕ ಕುಬ್ಜವಾಗಿ (ಚಿಕ್ಕದಾಗಿ) ಬೆಳೆಸುವ ಬೋನ್ಸಾಯ್ ಗಿಡಗಳು ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ. ಈ ಕಾರಣಕ್ಕಾಗಿಯೇ ಇದನ್ನು ಪ್ರೀತಿಯಿಂದ ಗಿಫ್ಟ್ ಮಾಡಲು ಅನೇಕರು ಇಷ್ಟಪಡುತ್ತಾರೆ. ಆದರೆ ವಾಸ್ತು ಪ್ರಕಾರ ಬೋನ್ಸಾಯ್ ಗಿಡಗಳನ್ನು ಮನೆಗೆ ತರುವುದು ಅಥವಾ ಇತರರಿಗೆ ಕೊಡುವುದು ಒಳ್ಳೆಯದಲ್ಲ. ಏಕೆಂದರೆ, ಬೋನ್ಸಾಯ್ ಗಿಡಗಳು “ಬೆಳವಣಿಗೆಯನ್ನು ಕುಂಠಿತಗೊಳಿಸಿದ” ಸಂಕೇತವಾಗಿವೆ. ಇದನ್ನು ಉಡುಗೊರೆಯಾಗಿ ನೀಡುವುದರಿಂದ, ಪಡೆದುಕೊಂಡವರ ವೃತ್ತಿಜೀವನ, ವ್ಯಾಪಾರ ಅಥವಾ ಆರ್ಥಿಕ ಪ್ರಗತಿಯು ಕುಂಠಿತಗೊಳ್ಳಬಹುದು ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ಮದರಂಗಿ ಅಥವಾ ಮೆಹಂದಿ ಎಲೆಗಳನ್ನು ಶುಭ ಸಮಾರಂಗಳಲ್ಲಿ ಕೈಗೆ ಹಚ್ಚಿಕೊಳ್ಳಲು ಬಳಸಲಾಗುತ್ತದೆಯಾದರೂ, ಅದರ ಗಿಡವನ್ನು ಉಡುಗೊರೆಯಾಗಿ ನೀಡುವುದನ್ನು ವಾಸ್ತು ಶಾಸ್ತ್ರವು ನಿಷೇಧಿಸಿದೆ. ಆಧಾತ್ಮಿಕ ನಂಬಿಕೆಗಳ ಪ್ರಕಾರ, ಮೆಹಂದಿ ಗಿಡಗಳು ನಕಾರಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ತನ್ನತ್ತ ಬೇಗನೆ ಆಕರ್ಷಿಸುವ ಗುಣವನ್ನು ಹೊಂದಿರುತ್ತವೆ. ಆದ್ದರಿಂದ, ಈ ಗಿಡವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ ಅಥವಾ ಮನೆಯ ಮುಖ್ಯ ಆವರಣದಲ್ಲಿ ನೆಟ್ಟರೆ, ಅದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯು ಕ್ಷೀಣಿಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ