ಭಾರತದಲ್ಲಿ ಗಂಡನನ್ನೇ ದೇವರು ಎಂದು ಪೂಜಿಸುವ ಸಂಪ್ರದಾಯ ಬಹಳ ಪುರಾತನ ಕಾಲದಿಂದಲೂ ಇದೆ. ಹೆಣ್ಣಿಗೆ ಮುತ್ತೈದೆ ಭಾಗ್ಯ ನೀಡುವ ಗಂಡನ ಆರೋಗ್ಯ ವೃದ್ಧಿಯಾಗಬೇಕು, ಆತನಿಗೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗಬೇಕೆಂದು ಹೆಂಡತಿ ಸಾಕಷ್ಟು ರೀತಿಯ ವ್ರತಗಳನ್ನು ಕೂಡ ಮಾಡುತ್ತಾಳೆ. ಆ ರೀತಿಯ ಮುಖ್ಯವಾದುದು ‘ಭೀಮನ ಅಮಾವಾಸ್ಯೆ’. ಭೀಮನ ಅಮಾವಾಸ್ಯೆಯಂದು ಪತ್ನಿ ಕಂಕಣ ಕಟ್ಟಿಕೊಂಡು ವ್ರತ ಮಾಡಿದರೆ ಪತಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ, ಈ ವ್ರತಕ್ಕೆ ಭೀಮನ ಅಮಾವಾಸ್ಯೆ ಎಂದು ಹೆಸರು ಬಂದಿದ್ದು ಹೇಗೆ? ಇದರ ಇತಿಹಾಸವೇನು? ಭೀಮನ ಅಮಾವಾಸ್ಯೆಯ ಹಿಂದೆ ಕೇವಲ ಧಾರ್ಮಿಕ ಕಾರಣ ಮಾತ್ರವಲ್ಲದೆ ಐತಿಹಾಸಿಕ ಕಾರಣವೂ ಇದೆ. ಮಹಾಭಾರತದ ಭೀಮನಿಗೂ ಈ ವ್ರತಕ್ಕೂ ಏನಾದರೂ ಸಂಬಂಧವಿದೆಯಾ? ಎಂಬ ಪ್ರಶ್ನೆಗಳು ಉದ್ಭವವಾಗುವುದು ಸಾಮಾನ್ಯ. ಭೀಮನ ಅಮಾವಾಸ್ಯೆ ಕುರಿತು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.
ಈ ಬಾರಿ ಆಗಸ್ಟ್ 8ರಂದು ಅಂದರೆ ಇಂದು ಭೀಮನ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ ಭೀಮನ ಅಮಾವಾಸ್ಯೆಯ ವ್ರತವನ್ನು ಆಚರಿಸಲಾಗುತ್ತದೆ. ಕೇವಲ ಮದುವೆಯಾದ ಗೃಹಿಣಿಯರು ಮಾತ್ರವಲ್ಲದೆ ಅವಿವಾಹಿತ ಯುವತಿಯರು ಕೂಡ ಈ ವ್ರತವನ್ನು ಮಾಡಬಹುದು. ಆದರೆ, ಮುಖ್ಯವಾಗಿ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಇದನ್ನು ಕೊಡೆ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಮದುವೆಯಾದ ಬಳಿಕ ತನ್ನ ತವರುಮನೆಯಲ್ಲಿ ಮೊದಲ ಬಾರಿಗೆ ಮಾಡುವ ಭೀಮನ ಅಮಾವಾಸ್ಯೆ ಅಥವಾ ಕೊಡೆ ಅಮಾವಾಸ್ಯೆ ವ್ರತ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಈ ದಿನ ಮಾವನ ಮನೆಯವರು ತಮ್ಮ ಅಳಿಯನಿಗೆ ಕೊಡೆ ಅಥವಾ ಛತ್ರಿಯನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ.
ಭೀಮನ ಅಮಾವಾಸ್ಯೆಯ ದಿನ ಕರಿಗಡುಬು, ತಂಬಿಟ್ಟಿನ ಉಂಡೆ, ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಈ ದಿನದಂದು ನವವಿವಾಹಿತರನ್ನು ಮನೆಗೆ ಕರೆದು ಛತ್ರಿ ಕೊಟ್ಟು ಕಳುಹಿಸುವ ಪದ್ಧತಿ ಹಲವು ಕಡೆಯಿದೆ. ಈ ದಿನ ಪತ್ನಿಯು ಗಂಡನ ಪಾದವನ್ನು ತೊಳೆದು, ಆತನ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾಳೆ.
ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ, ಕರ್ಕಾಟಕ ಅಮಾವಾಸ್ಯೆ ಎಂದು ಕರೆಯುತ್ತಾರೆ. ಆಷಾಡ ಮಾಸದಲ್ಲಿ ಗಂಡನಿಂದ ದೂರ ಉಳಿದು ತವರಿಗೆ ಹೋಗುವ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಪತಿಯನ್ನು ಪೂಜಿಸಿ ಮತ್ತೆ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತಾರೆ. ಈ ದಿನ ಮಹಿಳೆಯರು ಶಿವ, ಪಾರ್ವತಿಯನ್ನು ಆರಾಧಿಸಿದರೆ ಸಮೃದ್ಧಿ, ಸಂತಾನ, ಪತಿವ್ರತೆ, ಆಯಸ್ಸು, ಯಶಸ್ಸು, ಸಂತೋಷ ಸೇರಿದಂತೆ ಎಲ್ಲವನ್ನು ಶಿವ ಮತ್ತು ಪಾರ್ವತಿ ದೇವಿ ಕರುಣಿಸುತ್ತಾರೆಂಬ ನಂಬಿಕೆಯಿದೆ.
ಇದನ್ನೂ ಓದಿ: Guru Purnima 2021: ಗುರು ಪೂರ್ಣಿಮೆ ವಿಶೇಷ ದಿನದ ಮಹತ್ವ, ಆಚರಣೆಯ ಇತಿಹಾಸ ಇಳಿಯಿರಿ
ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?
(Bheemana Amavasya 2021 Celebrated Today of The Ashada Month Jyoti Bheemeshwara Vrata Importance)