
ಹಿಂದೂ ಧರ್ಮ ಸಂಪ್ರದಾಯದಲ್ಲಿ ಪಿತೃ ಪಕ್ಷಕ್ಕೆ ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ನಮ್ಮನ್ನಗಲಿದ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ, ಅವರ ಆಶೀರ್ವಾದ ಪಡೆಯಲು ತರ್ಪಣ, ಶ್ರಾದ್ಧ ಮತ್ತು ಪಿಂಡದಾನ ನೆರವೇರಿಸುವುದು ಭಾರತೀಯ ಸಂಸ್ಕೃತಿಯ ಅನಾದಿ ಕಾಲದ ಪದ್ಧತಿ. ಪ್ರತಿ ವರ್ಷ ಭಾದ್ರಪದ ಮಾಸದ ಪೂರ್ಣಿಮೆ ಅಥವಾ ಅಶ್ವಯುಜ ಮಾಸದ ಕೃಷ್ಣ ಪಕ್ಷದ ಪ್ರತಿಪದೆಯಿಂದ ಪ್ರಾರಂಭವಾಗುವ ಈ ಶ್ರಾದ್ಧ ಆಚರಣೆಗಳು ಸರ್ವ ಪಿತೃ ಅಮಾವಾಸ್ಯೆಯಂದು ಮುಕ್ತಾಯಗೊಳ್ಳುತ್ತವೆ. ಭಾರತದಾದ್ಯಂತ ಶ್ರಾದ್ಧ ಕರ್ಮಗಳನ್ನು ಮಾಡಲು ಗಯಾ, ಕಾಶಿ, ಗೋಕರ್ಣ ಮುಂತಾದ ಹಲವು ಪುಣ್ಯಕ್ಷೇತ್ರಗಳಿದ್ದರೂ, ಉತ್ತರಾಖಂಡದ ಬದರಿನಾಥ ಧಾಮದಲ್ಲಿರುವ ಬ್ರಹ್ಮಕಪಾಲ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಟವಾದ ಕ್ಷೇತ್ರವಾಗಿದೆ.
ಬದರಿನಾಥ ದೇವಾಲಯದ ಸಮೀಪ ಹರಿಯುವ ಪವಿತ್ರ ಅಲಕನಂದಾ ನದಿಯ ದಡದಲ್ಲಿದೆ ಈ ಬ್ರಹ್ಮಕಪಾಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮಕಪಾಲದಲ್ಲಿ ಒಮ್ಮೆ ಪಿಂಡದಾನ ನೆರವೇರಿಸಿದರೆ ಅದು ‘ಅಂತಿಮ ಪಿಂಡದಾನ’ ಎನಿಸಿಕೊಳ್ಳುತ್ತದೆ. ಅಂದರೆ, ಇಲ್ಲಿ ಪಿಂಡದಾನ ಮಾಡಿದ ನಂತರ ಆ ಪೂರ್ವಜರಿಗಾಗಿ ಮತ್ತೆ ಎಲ್ಲೂ, ಎಂದಿಗೂ ಶ್ರಾದ್ಧ ಅಥವಾ ಪಿಂಡದಾನ ಮಾಡುವ ಅಗತ್ಯವಿರುವುದಿಲ್ಲ. ಇಲ್ಲಿ ನೆರವೇರಿಸುವ ಆಚರಣೆಗಳಿಂದ ಅಗಲಿದ ಪಿತೃಗಳ ಆತ್ಮಕ್ಕೆ ನೇರವಾಗಿ ಮೋಕ್ಷ ಸಿಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
ಬ್ರಹ್ಮಕಪಾಲ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂತು ಎಂಬುದರ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯಿದೆ. ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನಿಗೆ ಐದು ಮುಖಗಳಿದ್ದವು. ಕಾಲಕ್ರಮೇಣ ಬ್ರಹ್ಮನಲ್ಲಿ ದುರಹಂಕಾರ ಹೆಚ್ಚಾಗಿ, ತನ್ನನ್ನು ತಾನೇ ಸರ್ವಶ್ರೇಷ್ಠನೆಂದು ಭಾವಿಸತೊಡಗಿದನು. ಬ್ರಹ್ಮನ ಈ ಅಹಂಕಾರವನ್ನು ನಿಗ್ರಹಿಸಲು ಪರಮಶಿವನು ಆತನ ಐದನೇ ತಲೆಯನ್ನು ಕತ್ತರಿಸಿದನು.
ಬ್ರಾಹ್ಮಣನಾದ ಬ್ರಹ್ಮನ ಶಿರಚ್ಛೇದನ ಮಾಡಿದ್ದರಿಂದ ಶಿವನಿಗೆ ‘ಬ್ರಹ್ಮಹತ್ಯಾ ದೋಷ’ ಆವರಿಸಿತು. ಬ್ರಹ್ಮನ ಕತ್ತರಿಸಿದ ತಲೆಬುರುಡೆ (ಕಪಾಲ) ಶಿವನ ಕೈಗೆ ಅಂಟಿಕೊಂಡಿತು ಮತ್ತು ಶಿವನು ಎಷ್ಟೇ ಪ್ರಯತ್ನಿಸಿದರೂ ಅದು ಕೈಯಿಂದ ಕಳಚಲಿಲ್ಲ. ಈ ಮಹಾಪಾಪದಿಂದ ಮುಕ್ತಿ ಪಡೆಯಲು ಶಿವನು ಕಪಾಲವನ್ನು ಕೈಯಲ್ಲಿ ಹಿಡಿದು ಭಿಕ್ಷುಕನಂತೆ ತ್ರಿಲೋಕಗಳನ್ನು ಅಲೆದಾಡಿದನು. ಅಂತಿಮವಾಗಿ ಶಿವನು ಬದರಿ ಪ್ರದೇಶಕ್ಕೆ ತಲುಪಿದಾಗ, ಬ್ರಹ್ಮನ ಕಪಾಲವು ಶಿವನ ಕೈಯಿಂದ ಜಾರಿ ನೆಲಕ್ಕೆ ಬಿದ್ದಿತು. ಬ್ರಹ್ಮನ ಕಪಾಲ ಬಿದ್ದ ಈ ಜಾಗವೇ ಕಾಲಕ್ರಮೇಣ ‘ಬ್ರಹ್ಮಕಪಾಲ’ ಎಂದು ಪ್ರಸಿದ್ಧಿಯಾಯಿತು.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ಬ್ರಹ್ಮಕಪಾಲ ಕ್ಷೇತ್ರಕ್ಕೆ ಮಹಾಭಾರತದ ಕಾಲದ ಸುದೀರ್ಘ ಇತಿಹಾಸವೂ ಜೋಡಿಸಲ್ಪಟ್ಟಿದೆ. ಕುರುಕ್ಷೇತ್ರ ಯುದ್ಧ ಮುಗಿದ ನಂತರ, ತಮ್ಮ ಸ್ವಂತ ಬಂಧು-ಮಿತ್ರರು, ಸೋದರರು ಮತ್ತು ಗುರುಗಳನ್ನು ಕೊಂದ ಅಪರಾಧ ಭಾವನೆ ಪಾಂಡವರನ್ನು ತೀವ್ರವಾಗಿ ಕಾಡತೊಡಗಿತು. ಯುದ್ಧದಲ್ಲಿ ಮಡಿದ ತಮ್ಮ ಪೂರ್ವಜರ ಮತ್ತು ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ತಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ಪಾಂಡವರು ಬದರಿನಾಥದ ಬ್ರಹ್ಮಕಪಾಲಕ್ಕೆ ಆಗಮಿಸಿ ತರ್ಪಣ ಮತ್ತು ಪಿಂಡದಾನ ನೆರವೇರಿಸಿದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಬ್ರಹ್ಮಕಪಾಲದಲ್ಲಿ ಅರ್ಪಿಸುವ ಪಿಂಡವು ಪಿತೃಗಳನ್ನು ಜನನ ಮತ್ತು ಮರಣಗಳ ನಿರಂತರ ಚಕ್ರದಿಂದ ಮುಕ್ತಗೊಳಿಸಿ ಸಂಪೂರ್ಣ ಮೋಕ್ಷವನ್ನು ನೀಡುತ್ತದೆ. ಹೀಗಾಗಿ, ಪಿತೃ ಪಕ್ಷದ ಸಂದರ್ಭದಲ್ಲಿ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ ಮತ್ತು ಅವರ ಋಣ ತೀರಿಸಲು ಬ್ರಹ್ಮಕಪಾಲಕ್ಕೆ ಆಗಮಿಸುತ್ತಾರೆ. ನೀವೂ ನಿಮ್ಮ ಪೂರ್ವಜರ ಆತ್ಮಕ್ಕೆ ಶ್ರೇಷ್ಠವಾದ ಮೋಕ್ಷ ಪ್ರಾಪ್ತಿಯನ್ನು ಬಯಸುವುದಾದರೆ, ಬದರಿನಾಥದ ಈ ಪುಣ್ಯಭೂಮಿ ಬ್ರಹ್ಮಕಪಾಲಕ್ಕೆ ಭೇಟಿ ನೀಡಿ ಪಿಂಡದಾನ ಮಾಡುವುದು ಅತ್ಯಂತ ಫಲಪ್ರದವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ