ಸನಾತನ ಪರಂಪರೆಯಲ್ಲಿ ಮತ್ತು ಎಲ್ಲಾ ಧರ್ಮಗಳಲ್ಲೂ ಕಾಲಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆಡು ಭಾಷೆಯಲ್ಲಿ ಹೇಳುವಂತೆ ಸಮಯಪ್ರಜ್ಞೆ ಸರಿ ಇರಬೇಕು. ಅದೆಷ್ಟೋ ಸಲ ನಾವು ಈ ಪ್ರಜ್ಞೆಯ ಕೊರತೆಯ ಕಾರಣದಿಂದ ಒಳ್ಳೆಯ ಅವಕಾಶ ವಂಚಿರಾಗುತ್ತೇವೆ ಹಾಗೆಯೇ ಅದೆಷ್ಟೋ ಜನರ ಅಮೂಲ್ಯ ಕ್ಷಣಗಳ ನಾಶಕ್ಕೆ ಕಾರಣೀಭೂತರಾಗಿರುತ್ತೇವೆ ಅಲ್ಲದೇ ಸ್ವಾರ್ಥಕ್ಕಾಗಿ ಪರಹಿತವನ್ನು ಯೋಚಿಸದೇ ಸಮಯದ ದುಂದುವೆಚ್ಚ ಮಾಡಿರುತ್ತೇವೆ ಅಲ್ಲವೇ? ಒಮ್ಮೆ ಯೋಚಿಸಿ. ಶಾಸ್ತ್ರ ಹೇಳುತ್ತದೆ ಕಾಲೋ ಜಗದ್ ಭಕ್ಷಕಃ: ಎಂದು. ಸಮಯು ಮಾನವನ ಜೀವನವನ್ನು ನಿಧಾನವಾಗಿ ಭಕ್ಷಿಸುತ್ತದೆ ಎಂದು ಇದರ ಅರ್ಥ. ಅದೇನೇ ಇರಲಿ ಈಗ ನಾವು ಯಾವ ಕಾಲದಲ್ಲಿ ಆಹಾರಾದಿಗಳ ಮತ್ತು ನಿದ್ರೆಯನ್ನು ಮಾಡಬಾರದು ಎಂದು ನೋಡೋಣ. ಭರತ ಭೂಮಿಯಲ್ಲಿ ಸಂಧ್ಯಾಕಾಲಕ್ಕೆ ಅತ್ಯಂತ ಮಹತ್ತರವಾದ ಸ್ಥಾನವಿದೆ. ಸಂಧ್ಯಾಕಾಲವು ಮೂರುವಿಧ. ಪ್ರಾತಃಸಂಧ್ಯೆ ಮಧ್ಯಾಹ್ನ ಸಂಧ್ಯೆ ಸಾಯಂ ಸಂಧ್ಯೆ ಎಂದು. ಇದರಲ್ಲಿ ಮಧ್ಯಾಹ್ನ ಸಂಧ್ಯೆಯೆಂಬುದು ಅಷ್ಟೊಂದು ಮುಖ್ಯ ಸ್ಥಾನವನ್ನು ವಹಿಸುವುದಿಲ್ಲ. ಆದರೆ ಪ್ರಾತ ಮತ್ತು ಸಾಯಂ ಸಂಧೆಗಳು ಅತ್ಯಂತ ಮುಖ್ಯವಾದ ಕಾಲಗಳು.
ಸೂರ್ಯೋದಯದ ಸಮಯವನ್ನು ಪ್ರಾತಃಸಂಧ್ಯೆ ಅಂತಲೂ ಸೂರ್ಯಾಸ್ತದ ಸಮಯವನ್ನು ಸಾಯಂ ಸಂಧ್ಯೆ ಅಂತಲೂ ಕರೆಯುತ್ತಾರೆ. ಈ ಸಮಯವು ದೇವತಾಕಾರ್ಯಗಳಿ ಅತ್ಯಂತ ಪ್ರಶಸ್ತವಾದ ಸಮಯ. ಯಾಜ್ಞವಲ್ಕ್ಯ ಮಹರ್ಷಿಗಳು ಹೀಗೆ ಹೇಳುತ್ತಾರೆ. ಶುಚಿಃ ವಾ ಅಶುಚಿಃ ವಾ ಕಾಲೇ ಸಂಧ್ಯಾ ಸಮಾಚರೇತ್ ಎಂದು. ಮಾನವನು ಶುಚಿಯಾಗಿರಲಿ ಅಶುಚಿಯಾಗಿರಲಿ ಸಂಧ್ಯಾಕಾಲದಲ್ಲಿ ದೇವರ ನಾಮಸ್ಮರಣೆ ಮತ್ತು ಸಂಧ್ಯವಂದನೆಯನ್ನು ಮಾಡಲೇಬೇಕು ಎಂದು.
ಅರ್ಥಾತ್ ಸಂಧ್ಯಾ ಸಮಯವೆಂಬುದು ಅತ್ಯಂತ ಪುಣ್ಯಕಾಲ ಎಂಬುದು ನಿಶ್ಚಿತ. ಇಂತಹ ಪುಣ್ಯಕಾಲವಾದ ಪ್ರಾತಃಸಂಧ್ಯೆಯಲ್ಲಿ ಜ್ಞಾನಾಪೇಕ್ಷಿತನಾದ (ಒಳ್ಳೆಯ ಬುದ್ಧಿ ಬಯಸುವವನು) ವ್ಯಕ್ತಿಯು ಪೂರ್ವಭಿಮುಖವಾಗಿ ಸೂರ್ಯನನ್ನು ಧ್ಯಾನಿಸಬೇಕು ಮತ್ತು ಸೂರ್ಯಸ್ತುತಿಯನ್ನು ಮಾಡಬೇಕು. ಈ ಸಮಯದಲ್ಲಿ (ಸೂರ್ಯೋದಯದ ಕಾಲದಲ್ಲಿ) ತಪ್ಪಿಯೂ ಮಲಗಿರಬೇಡಿ. ಇದರಿಂದ ಅನಾರೋಗ್ಯ ನಿಶ್ಚಿತವಾಗಿಯೂ ಸಂಭವಿಸುವುದು. ಇದು ಆಯುರ್ವೇದವೂ ಒಪ್ಪಿದ ಸತ್ಯ.
ಹಾಗೆಯೇ ಸಾಯಂ ಸಂಧ್ಯೆಯ ಕಾಲ ಲಕ್ಷ್ಮಿಯ ಕಾಲ. ಈ ಕಾಲವನ್ನು ಸೂರ್ಯಾಸ್ತದ ಕಾಲವೆನ್ನುವರು. ಈ ಸೂರ್ಯಾಸ್ತದ ಸಂದರ್ಭದಲ್ಲಿ ಯಾರೂ ಮುಖ್ಯವಾಗಿ ಆಹಾರ ಸೇವನೆ ಮಾಡಲೇಬಾರದು ಮತ್ತು ಮಲಗಿರಲೂ ಬಾರದು. ಈ ಸಮಯದಲ್ಲಿ ಸಂಪತ್ತಿನ ಅಪೇಕ್ಷೆಯುಳ್ಳವರು ಮತ್ತು ಅಭಿವೃದ್ಧಿಯನ್ನು ಬಯಸುವವರು ಈ ಎರಡು ತಪ್ಪನ್ನು ಮಾಡಬೇಡಿರಿ. ಸಾಯಂಕಾಲ ಸೂರ್ಯೋದಯ ಆದಾಗಿನಿಂದ 48 ನಿಮಿಷಗಳ ಕಾಲ ಆಹಾರವನ್ನು ಸ್ವೀಕರಿಸಲೇಬೇಡಿ. ಸಾಧ್ಯವಿದ್ದಲ್ಲಿ ಮನೆಯ ಮುಂದೆ ತುಳಸಿ ಇದ್ದರೆ ಅಲ್ಲಿ ದೀಪವನ್ನು ಹಚ್ಚಿರಿ ಇಲ್ಲದಿದ್ದಲ್ಲಿ ಮನೆಯ ಮುಖ್ಯ ದ್ವಾರದ ಮುಂಭಾಗದಲ್ಲಿ ದೀಪವನ್ನು ಹಚ್ಚಿರಿ. ಅದರಿಂದ ಮನೆಗೆ ಭಾಗ್ಯಲಕ್ಷ್ಮಿಯನ್ನು ಸ್ವಾಗತಿಸಿದಂತೆ ಆಗುವುದು. ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದು.
ಸಂಧ್ಯಾಕಾಲವೆನ್ನುವುದು ದೇವತಾಕಾರ್ಯಕ್ಕೆ ಅಂದರೆ ನಾಮಸ್ಮರಣೆ ಭಜನೆ ಪೂಜೆ ಇತ್ಯಾದಿಗಳಿಗೆ ಅತ್ಯಂತ ಪುಣ್ಯಕಾಲ ಮಾತ್ರವಲ್ಲ ಒಳ್ಳೆಯ ಮುಹೂರ್ತಕಾಲವೂ ಹೌದು. ಇಂತಹ ಒಳ್ಳೆಯ ಮುಹೂರ್ತವನ್ನು ಭಗವಂತ ನಮಗೆ ದಿನಕ್ಕೆ ಎರಡು ಬಾರಿ ನೀಡಿರುವಾಗ ಅದನ್ನು ಮಲಗಿಯೋ ಅಥವಾ ಆಹಾರ ಸೇವನೆಗೋ ಬಳಸಿ ದಾರಿದ್ರ್ಯ ರೋಗ ಅಶುಭವನ್ನು ಅನುಭವಿಸುವುದಕ್ಕಿಂತ ಉತ್ತಮ ಕಾರ್ಯಗಳಾದ ದೇವರ ನಾಮಸ್ಮರಣೆಯಲ್ಲಿ ತೊಡಗಿಸಿ ನೆಮ್ಮದಿ ಆರೋಗ್ಯ ಸಂಪತ್ತುಗಳನ್ನು ಅನುಭವಿಸುವುದು ಉತ್ತಮ ಅಲ್ಲವೇ? ಯೋಚಿಸಿ. ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ, ಮನಸ್ಸಿದ್ದರೆ ಯಾವುದೂ ಕಷ್ಟವಲ್ಲ ಅಲ್ಲವೇ?
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:01 am, Thu, 11 May 23