
ಆಹಾರದ ಪಾವಿತ್ರ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ “ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದ್ ಅನ್ನ-ಸಂಭವಃ ಯಜ್ಞಾದ್, ಭವತಿ ಪರ್ಜನ್ಯೋ ಯಜ್ಞಃ ಕರ್ಮ-ಸಮುದ್ಭವಃ”. ಇದರ ಅರ್ಥ ಎಲ್ಲಾ ಜೀವಿಗಳು ಆಹಾರದಿಂದ ಬದುಕುತ್ತವೆ ಮತ್ತು ಆಹಾರವು ಮಳೆಯಿಂದ ಉತ್ಪತ್ತಿಯಾಗುತ್ತದೆ. ಮಳೆಯು ಯಜ್ಞಗಳನ್ನು ಮಾಡುವುದರಿಂದ ಬರುತ್ತದೆ ಮತ್ತು ಯಜ್ಞವು ನಿಗದಿತ ಕರ್ತವ್ಯಗಳನ್ನು ಮಾಡುವುದರಿಂದ ಉತ್ಪತ್ತಿಯಾಗುತ್ತದೆ.
ಅಂತಹ ಪವಿತ್ರವಾದ ಅನ್ನವನ್ನು ಸೇವಿಸುವಾಗ ನಾವು ಅತ್ಯಂತ ಶ್ರದ್ಧೆ ಮತ್ತು ಗೌರವದಿಂದ ವರ್ತಿಸಬೇಕು. ಅದು ಶುಭ ಸಮಾರಂಭಗಳಿರಬಹುದು, ಮದುವೆ, ಮಹೋತ್ಸವಗಳು, ದೇವತಾ ಪ್ರತಿಷ್ಠಾಪನೆಗಳು, ಉಪನಯನಗಳು ಅಥವಾ ಗೃಹಪ್ರವೇಶಗಳಂತಹ ಕಾರ್ಯಕ್ರಮಗಳಿರಬಹುದು, ಅಥವಾ ಮನೆಯಲ್ಲಿ ಊಟ ಮಾಡುವಾಗಲೂ ದುರಾಸೆಯಿಂದ ಅಥವಾ ಕಣ್ಣಿನ ಆಸೆಯಿಂದ ಹೆಚ್ಚು ಆಹಾರವನ್ನು ಬಡಿಸಿಕೊಂಡು, ಅರ್ಧದಲ್ಲಿಯೇ ಎದ್ದು ಹೋಗುವುದು ದೊಡ್ಡ ತಪ್ಪಾಗುತ್ತದೆ. ಇದು ಕೇವಲ ಪ್ರಸ್ತುತ ಜನ್ಮಕ್ಕೆ ಮಾತ್ರವಲ್ಲದೆ, ಮುಂದಿನ ಜನ್ಮಕ್ಕೂ ಕಂಟಕಪ್ರಾಯವಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.
ಊಟ ಮಾಡುವ ಸಂದರ್ಭದಲ್ಲಿ ಫೋನ್ ಕರೆಗಳು, ಮನೆಯಲ್ಲಿನ ಗಂಡ-ಹೆಂಡತಿಯರ ನಡುವಿನ ಕೋಪ, ಅಥವಾ ಇನ್ನಿತರ ವಿಷಯಗಳಿಂದ ಅಡ್ಡಿ ಉಂಟಾಗಿ ಊಟವನ್ನು ಅರ್ಧಕ್ಕೆ ಬಿಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಊಟವನ್ನು ಯಜ್ಞದಂತೆ ಪರಿಗಣಿಸಬೇಕು. ಯಜ್ಞ ಮಾಡುವಾಗ ನಾವು ಎಷ್ಟು ಭಕ್ತಿ ಮತ್ತು ಏಕಾಗ್ರತೆಯಿಂದ ಇರುತ್ತೇವೆಯೋ, ಅದೇ ರೀತಿ ಅನ್ನ ಸೇವಿಸುವಾಗಲೂ ಇರಬೇಕು. ಕೆಲವೊಮ್ಮೆ ರಾಜಕೀಯ ವ್ಯಕ್ತಿಗಳು ಅಥವಾ ಸ್ಥಾನಮಾನ ಇರುವವರು ಒಂದು ಕಾರ್ಯಕ್ರಮಕ್ಕೆ ಬಂದು ಒಂದೆರಡು ಚಮಚ ಅನ್ನ ತಿಂದು ಅರ್ಧಕ್ಕೆ ಬಿಟ್ಟು ಹೊರಟು ಹೋಗುತ್ತಾರೆ. ಈ ರೀತಿ ಆಹಾರವನ್ನು ತ್ಯಜಿಸುವುದರಿಂದ ಕರ್ಮ, ಪಾಪ ಹೆಚ್ಚುತ್ತದೆ ಮತ್ತು ನಮಗೆ ಬರಬೇಕಾದ ಅದೃಷ್ಟವು ದೂರವಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ
ಇದರಿಂದ ಅನ್ನಪೂರ್ಣೇಶ್ವರಿಯ ಕೃಪೆ ದೊರೆಯುವುದಿಲ್ಲ ಮತ್ತು ದೇಹದಲ್ಲಿ ರೋಗರುಜಿನೆಗಳ ಕಾಟ ಹೆಚ್ಚಾಗುತ್ತದೆ. ಇಲ್ಲಿ “ಅನ್ನ” ಎಂದರೆ ಕೇವಲ ಬೇಯಿಸಿದ ಅಕ್ಕಿಯಲ್ಲ, ತಿನ್ನಲು ಯೋಗ್ಯವಾದ ಪ್ರತಿಯೊಂದು ಆಹಾರವೂ ಅನ್ನವೇ. ಹಣ್ಣುಗಳೂ ಸಹ ಆಹಾರದ ಭಾಗವೇ. ಆದ್ದರಿಂದ, ಆಹಾರವನ್ನು ಅರ್ಧದಲ್ಲಿಯೇ ಬಿಟ್ಟು ಹೋಗಬಾರದು. ನಮಗೆ ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳಬೇಕು ಮತ್ತು ಅದನ್ನು ಪೂರ್ಣಗೊಳಿಸಬೇಕು. ಇಂದಿನ ದಿನಗಳಲ್ಲಿ ಎಷ್ಟೋ ಆಹಾರ ವ್ಯರ್ಥವಾಗುತ್ತಿದೆ. ಅದಕ್ಕೆ ನಾವೇ ಕಾರಣರಾಗುತ್ತೇವೆ. ನಮ್ಮ ಲೆಕ್ಕ ತಪ್ಪಿದರೂ ಭಗವಂತನ ಲೆಕ್ಕ ತಪ್ಪುವುದಿಲ್ಲ ಎಂಬ ಮಾತಿದೆ.
ಯಾರಿಗಾದರೂ ಮಧ್ಯದಲ್ಲಿ ಹೋಗಬೇಕಾದ ಅನಿವಾರ್ಯತೆ ಇದ್ದರೆ, ಮೊದಲೇ ತಿಳಿಸಿ, ಅಷ್ಟಕ್ಕೆ ತಕ್ಕಂತೆ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ ಹೊರಡುವುದು ಸೂಕ್ತ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Tue, 28 October 25