ಬೆಂಗಳೂರು, ಸೆ.04: ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ನಿಂದ ತಯಾರಿಸಿದ ಗಣೇಶ ವಿಗ್ರಹಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ವಿಧಿಸಿದೆ. ನಿಯಮಗಳನ್ನು ಉಲ್ಲಂಘಿಸಿದರೆ ತಯಾರಕರಿಗೆ ಭಾರಿ ದಂಡವನ್ನು ವಿಧಿಸಲು ಮುಂದಾಗಿದೆ.
ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್ ಅವರು ಗಣೇಶ ಹಬ್ಬದ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತೆ. ರಸ್ತೆಗಳಲ್ಲಿ ಗೊಂದಲ ರಹಿತವಾಗಿ ಆಚರಣೆಗೆ ಬಿಬಿಎಂಪಿ ನಿರ್ದೇಶನ ನೀಡಿದೆ. ಪರಿಸರ ಸ್ನೇಹಿಯಾಗಿ ಉತ್ಸವ ನಡೆಯುವಂತೆ ನೋಡಿಕೊಳ್ಳಲಾಗುವುದು ಮತ್ತು ಆಚರಣೆಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ಕೊಟ್ಟಿದೆ.
ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಸಲಹೆ
ಹಬ್ಬದ ಸಂದರ್ಭದಲ್ಲಿ ನಗರದಾದ್ಯಂತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳಿಗೆ ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಅನಧಿಕೃತ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ನಿಷೇಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನೆ ವೇಳೆ ಸರಿಯಾದ ವ್ಯವಸ್ಥೆ ಮಾಡಲು ಬಿಬಿಎಂಪಿ ವಿವಿಧ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಇಡುವ ಸಣ್ಣ ವಿಗ್ರಹಗಳಿಗೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಇನ್ನು ದೊಡ್ಡ ಮೂರ್ತಿಗಳ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಅಗರ ಕೆರೆ, ಹೆಬ್ಬಾಳ ಕೆರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:23 pm, Mon, 4 September 23