ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮವು ಗಣೇಶ ಚತುರ್ಥಿ ಆಚರಣೆಯು ಧಾರವಾಡ ಜಿಲ್ಲೆಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಬೇಡಿದ ವರಗಳನ್ನು ಇಡೇರಿಸುತ್ತಾ, ವರಸಿದ್ದಿ ವಿನಾಯಕನಾಗಿ, ಸರ್ವ ವಿಘ್ನಗಳನ್ನು ನಿವಾರಣೆ ಮಾಡುತ್ತ ವಿಘ್ನನಿವಾರಕನಾಗಿ ಸರ್ವರಿಗು ಸನ್ಮಂಗಲ ಉಂಟು ಮಾಡುತ್ತಿದ್ದಾನೆ.
ಈ ಗಣೇಶ ಉತ್ಸವದ ಇತಿಹಾಸ ಹೀಗಿದೆ
ಸುಮಾರು 1827 ರಲ್ಲಿ ತಮ್ಮಪ್ಪಣ್ಣ ಎಂಬ ಬ್ರಾಹ್ಮಣನಿಗೆ ಸಂತಾನ ಇಲ್ಲದಿದ್ದಾಗ, ದತ್ತಾವತಾರಿ ಶ್ರೀ ಕೃಷ್ಣೇಂದ್ರ ಸ್ವಾಮಿಜಿಯವರು ಲೋಕಕಲ್ಯಾಣಾರ್ಥವಾಗಿ ಸಂಚರಿಸುತ್ತಿದ್ದಾಗ ಛಬ್ಬಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ತಮ್ಮಪ್ಪಣ್ಣ ತಮ್ಮ ಸಮಸ್ಯೆಯನ್ನು ಸ್ವಾಮೀಜಿ ಅವರ ಹತ್ತಿರ ತೋಡಿಕೊಂಡಾಗ ಅವರು 3 ದಿನಗಳ ಕಾಲ ಗಣೇಶ ಉತ್ಸವವನ್ನು ಮಾಡಿ ನಿಮಗೆ ಕಲ್ಯಾಣವಾಗುತ್ತದೆ ಎಂದು ಆಶಿರ್ವದಿಸಿದರು.
ಇವರ ಮಾತಿನಂತೆ ತಮ್ಮಪ್ಪಣ್ಣ ಅವರು ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದರು. ಮೂರುದಿನಗಳ ಕಾಲ ಗಣೇಶ ಉತ್ಸವವನ್ನು ಆಚರಿದ ನಂತರ ಇವರಿಗೆ ಗಣಪತಿಯು ಸಂತಾನವನ್ನು ಕರುಣಿಸಿದನು. ತಮ್ಮಪ್ಪಣ್ಣ ದಂಪತಿಗಳಿಗೆ ಅವರಿಗೆ ವಿಟ್ಟಪ್ಪ ಎಂಬ ಗಂಡು ಮಗು ಜನಿಸಿತು. ಈ ವಿಟ್ಟಪ್ಪನಿಗೆ ನಾಲ್ಕು ಜನ ಮಕ್ಕಳು ಜನಿಸಿದರು. ಮುಂದೆ ಹೀಗೆ ಗಣೇಶನ ಆಶಿರ್ವಾದದಿಂದ ಮನೆಯಲ್ಲಿ ಸುಖ ಸೌಭಾಗ್ಯ ಪ್ರಾಪ್ತಿಯಗುತ್ತಿದೆ.
ಈ ಉತ್ಸವ ಅಂದಿನಿಂದ ಇಂದಿನವರಗೂ ನಡೆಯುತ್ತಾ ಬಂದಿದೆ. ಪ್ರಸ್ತುತ ಒಂದೇ ಕುಟಂಬದ 7 ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಗಣಪತಿಯ ವಿಶೇಷತೆ
ಗಣಪತಿ ಮೂರ್ತಿ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿರುತ್ತದೆ . ಸಾಮಾನ್ಯವಗಿ ಗಣೇಶನ ಬಲಗೈ ಆಶಿರ್ವಾದ ಸ್ಥಿತಿಯಲ್ಲಿದ್ದರೇ, ಈ ಗಣಪತಿಯ ಬಲಗೈನಲ್ಲಿ ಅರ್ಧ ಮುರಿದ ದಂತವಿರುತ್ತದೆ. ಎಡಗೈನಲ್ಲಿ ಲಿಂಗವಿದೆ. ಹಿಂದಿನ ಎರಡು ಕೈಯಲ್ಲಿ ಆಯುಧಗಳಿವೆ. ಈ ಗಜಾನನನು ಉಗ್ರಸ್ವರೂಪಿಯು ಹೌದು ವರಸಿದ್ದಿ ವಿನಾಯಕನು ಹೌದು. ಈ ಗಣೇಶನನ್ನು ಸಾಯಂಕಾಲವೇ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಈ ಗಣೇಶನನ್ನು ಮೂರು ದಿನ ಮಾತ್ರ ಪ್ರತಿಷ್ಠಪನೆ ಮಾಡಲಾಗುತ್ತಿದ್ದು, ಮೊದಲನೇ ದಿನ ಸಾಯಂಕಾಲ ಗಣೇಶ ಪ್ರತಿಷ್ಠಪನವಾದ ಮೂರನೇ ದಿನ ರಾತ್ರಿ 12 ಗಂಟೆಯ ನಂತರ ವಿಸರ್ಜಿಸಲಾಗುತ್ತದೆ. ಈ ಮೂಶಿಕವಾಹನನಿಗೆ ಶಾಸ್ತ್ರೋಕ್ತ ಪೂಜಾ ಕೈಂಕರ್ಯಗಳು ನಡೆಯುತ್ತವೆ. 5 ಅಥವಾ 8 ಜನ ಬ್ರಾಹ್ಮಣರು ಪ್ರಮಾಣವನ್ನು ಮಾಡಿ ವಿಶಿಷ್ಟವಾದ ಪಾರಾಯಣಗಳನ್ನು, ಪೂಜಾ ವಿಧಾನಗಳನ್ನು ನೆರವೇರಿಸುತ್ತಾರೆ.
ಪೂಜಾ ವಿಧಾನಗಳು
ಮೊದಲ ದಿನ ಪ್ರತಿಷ್ಟಾಪನೆ ಸಮಯದಲ್ಲಿ ಪುಣ್ಯಾಹವಾಚನ ಪೂಜೆ ಮಾಡಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠಪನೆಯನ್ನು ಮಾಡಿ, ಬಳಿಕ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿ ಪೂಜೆಗಳು ನೆರವೇರುತ್ತವೆ.
ಎರಡನೇ ದಿನ ಬೆಳಿಗ್ಗೆ ಕಾಕಡಾರತಿ ಪೂಜೆ, ಗಣಹೋಮ ನರೆವೇರುತ್ತದೆ. ಮಧ್ಯಾಹ್ನ ಶಾಸ್ತ್ರೋಕ್ತವಾದ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ಸಾಯಂಕಾಲ ಅಷ್ಟಾವದಾನ ಪೂಜೆ ನೆರವೇರುತ್ತದೆ. ಅಷ್ಟಾವದಾನ ಪೂಜೆ ಅಂದರೆ ವಿದ್ವಾಂಸರು ತಮ್ಮಲ್ಲಿನ ವಿದ್ಯೆಗಳನ್ನು ಪ್ರಕಟಿಸುತ್ತಾರ. ಉದಾ: ಸಂಗೀತ, ನೃತ್ಯ, ಬಜನೆ, ಕೀರ್ತನೆ ವೇದಗಳ ಪಠಣ ಇದು ಎರಡು ದಿನ ಪರ್ಯಂತ ರಾತ್ರಿ ಸಮಯದಲ್ಲಿ ನೆರವೇರುತ್ತದೆ.
ಮೂರನೇ ದಿನ ಬೆಳಿಗ್ಗೆಯ ಪೂಜೆ ನಂತರ ಮಧ್ಯಾಹ್ನ ಬ್ರಾಹ್ಮಣರ ಪಾದ ಪೂಜೆಯಾಗುತ್ತದೆ. ನಂತರ ಸಾಯಂಕಾಲ ಮತ್ತೆ ಅಷ್ಟಾವದಾನ ಪೂಜೆ ನೆರವೇರಿದ ನಂತರ ಉತ್ತರ ಪೂಜೆಯಾಗುತ್ತದೆ. ಬಳಿಕ ಉತ್ತರ ಪೂಜೆಯಾದ ನಂತರ ರಾತ್ರಿ 12 ಗಂಟೆಯ ನಂತರ ಗಣೇಶನನ್ನು ವಿಸರ್ಜಿಸಲಾಗುತ್ತದೆ.
ಇದರ ವಿಶಿಷ್ಟವೆಂದರೇ ಇದು ಮನೆತನದ ಗಣೇಶವಾದರೂ, ಪ್ರಸ್ತುತ ಸಾರ್ವಜನಿಕ ಗಣೇಶವಾಗಿದೆ. ಈ ಗಣೇಶನನ್ನು ಪ್ರತಿಷ್ಟಾಪಿಸಲು ಪ್ರಾರಂಭಿಸಿ 195 ವರ್ಷಗಳಾದವು. 2027ಕ್ಕೆ 200 ವರ್ಷ ಪೂರೈಸುತ್ತದೆ.
ಇಲ್ಲಿ ಪೂಜೆಯಾದ ಅಡಿಕೆ ಬೆಟ್ಟಗಳನ್ನು ತೆಗೆದುಕೊಂಡು ಹೋಗಿ ಭಕ್ತರು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುವುದು ಭಕ್ತರ ನಂಬಿಕೆಯಾಗಿದೆ. ಇನ್ನೂ ಒಂದು ಸಾರಿ ದರ್ಶನಕ್ಕೆ ಹೋದರೆ ಮೂರು ವರ್ಷ, ಐದು ವರ್ಷ ಹೋಗಬೇಕು ಎಂದು ಭಕ್ತರು ನಿಯಮಗಳನ್ನು ಹಾಕಿಕೊಂಡಿದ್ದಾರೆ ಹೊರತು ಯಾವುದೇ ಪ್ರತೀತಿ ಇಲ್ಲ ಎನ್ನುತ್ತಾರೆ ಗಣೇಶನನ್ನು ಪ್ರತಿಷ್ಟಾಪಿಸುವ ಮನೆತನದವರು.
ಈ ಗಣೇಶನ ದರ್ಶನಕ್ಕೆ ಸುತ್ತಮುತ್ತಲಿನ ಊರುಗಳಿಂದ ಅಪಾರ ಸಂಖ್ಯೆಯ ಜನರು ಆಗಮಿಸಿ ಗಣೇಶನ ದರ್ಶನ ಪಡೆಯುತ್ತಾರೆ. ಮೂರುದಿನಗಳ ಪರ್ಯಂತ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.