ಕಷ್ಟಗಳು, ಸಮಸ್ಯೆಗಳು ಅಂತ ಬಂದಾಗ ದೇವರನ್ನು ಬೇಡಿಕೊಳ್ಳುವವರು ಅನೇಕ ಮಂದಿ. ಇನ್ನೂ ಕೆಲವರು ಹರಕೆ ಹೇಳಿಕೊಳ್ಳುತ್ತಾರೆ. ಆರೋಗ್ಯ ಸಮಸ್ಯೆಯೋ, ಹಣಕಾಸು ಸಮಸ್ಯೆಯೋ, ಸಾಂಸಾರಿಕವಾಗಿ ಸಮಸ್ಯೆಯೋ ಅದನ್ನು ಸರಿಪಡಿಸು ದೇವರೇ ಅಂತ ಕೇಳಿಕೊಳ್ತಾರೆ. ಆ ರೀತಿ ದೇವರಿಗೆ ಹರಕೆ ಹೊತ್ತು, ಸಮಸ್ಯೆ ಪರಿಹಾರ ಆದಂಥ ದೇಗುಲಗಳು ಸಾಕಷ್ಟಿವೆ. ಈ ದಿನ ಕರ್ನಾಟಕದಲ್ಲೇ ಜನಪ್ರಿಯವಾದ ದೇಗುಲವೊಂದನ್ನು ಪರಿಚಯಿಸಲಾಗುತ್ತಿದೆ. ಸುಲಭಕ್ಕೆ ಗುರುತು ಹೇಳಬಹುದಾದ ಉಡುಪಿ ಹತ್ತಿರ ಪೆರ್ಡೂರು ಎಂಬಲ್ಲಿ ಅನಂತಪದ್ಮನಾಭ ಸ್ವಾಮಿ (Anantapadmanabha) ದೇವಸ್ಥಾನ ಇದೆ. ಇದು ಪೆರ್ಡೂರು ಅನಂತ ಪದ್ಮನಾಭ ಅಂತಲೇ ವಿಖ್ಯಾತಿ ಪಡೆದಿದೆ. ಈ ದೇವರನ್ನ ಕದಳೀಪ್ರಿಯ ಅಂತಲೂ ಕರೆಯಲಾಗುತ್ತದೆ. ಉಡುಪಿಯಿಂದ ಪೆರ್ಡೂರಿಗೆ 22 ಕಿಲೋಮೀಟರ್ ದೂರ. ಇಲ್ಲಿನ ಅನಂತಪದ್ಮನಾಭ ಸ್ವಾಮಿಗೆ ಕದಳೀಫಲ, ಅಂದರೆ ಬಾಳೇಹಣ್ಣು ಸಮರ್ಪಿಸುವುದಾಗಿ ಭಕ್ತರು ಹರಕೆ ಹೇಳಿಕೊಳ್ಳುತ್ತಾರೆ.
ಅದು, ಸಾವಿರಗಳ ಲೆಕ್ಕದಲ್ಲಿ. ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಹೀಗೆ. ದೇವಸ್ಥಾನ ಹೊರಭಾಗದಲ್ಲೇ ಬಾಳೇಹಣ್ಣಿನ ಅಂಗಡಿ ಇದೆ. ಅಲ್ಲಿಯೇ ಖರೀದಿಸಿ, ದೇವರಿಗೆ ಅರ್ಪಿಸಲಾಗುತ್ತದೆ. ಹೀಗೆ ಸಾವಿರಗಳ ಲೆಕ್ಕದಲ್ಲಿ ಅರ್ಪಿಸುವ ಬಾಳೇಹಣ್ಣನ್ನು ಆ ನಂತರ ದೇವಾಲಯಕ್ಕೆ ಬರುವ ಭಕ್ತರಿಗೆ ಹಮಚಲಾಗುತ್ತದೆ. ಇದು ಒಂದು ಬಗೆಯ ಹರಕೆ ಆಯಿತು. ಇನ್ನು ಮತ್ತೊಂದು ಬಗೆಯಲ್ಲಿ ಅಂದರೆ, ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ, ಆ ಅಂಗವನ್ನು ಹೋಲುವಂಥ ಆಕಾರವನ್ನು ಬೆಳ್ಳಿಯಲ್ಲಿ ಮಾಡಿಸಿ, ದೇವರ ಹುಂಡಿಗೆ ಕಾಣಿಕೆ ನೀಡಲಾಗುತ್ತದೆ.
ಉದಾಹರಣೆಗೆ, ಮಾತು ಬರುವುದು ತಡವಾಗುತ್ತಿದೆ ಎಂದಾದಲ್ಲಿ, ನಾಲಗೆ ಆಕಾರದ ಸಣ್ಣ ಬೆಳ್ಳಿ ನಾಲಗೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಅದೇ ರೀತಿ ಕಣ್ಣು, ಕಿವಿ, ಕೈ- ಕಾಲು ಇವುಗಳನ್ನು ಸಹ ಸಣ್ಣದಾಗಿ ಬೆಳ್ಳಿಯಲ್ಲಿ ಆಕಾರ ಮಾಡಿಸಿ, ಹರಕೆ ಈಡೇರಿದ ನಂತರ ಅರ್ಪಿಸಲಾಗುತ್ತದೆ.
ಇದನ್ನೂ ಓದಿ: Spiritual: ಆಶೌಚಗಳಲ್ಲಿ ದೇವತಾಕಾರ್ಯಗಳನ್ನು ಮಾಡದಿರಲು ಏನು ಕಾರಣ?
ಪ್ರತಿ ತಿಂಗಳು ಬರುವ ಸಂಕ್ರಮಣದ ದಿನ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ಸಿಂಹ ಸಂಕ್ರಮಣ ತುಂಬ ವಿಶೇಷ. ಅವತ್ತು ಸ್ವತಃ ತಿರುಪತಿಯ ವೆಂಕಟ ರಮಣ ಈ ದೇವಾಲಯಕ್ಕೆ ಬರುತ್ತಾನೆ ಅನ್ನೋದು ಸ್ಥಳೀಯರ ನಂಬಿಕೆ. ಆದ್ದರಿಂದ ನವ ವಿವಾಹಿತರಾಗಿದ್ದರೆ ಆ ದಿವಸ ಇಲ್ಲಿಗೆ ಬಂದು ಆಶೀರ್ವಾದ ತೆಗೆದುಕೊಳ್ಳುತ್ತಾರೆ. ಪ್ರತಿ ವರ್ಷ ಮೀನ ಸಂಕ್ರಮಣದ ದಿನ ದೇವಾಲಯದಲ್ಲಿ ರಥೋತ್ಸವ ನಡೆಯುತ್ತದೆ. ಇದು ಬಹಳ ವಿಶೇಷ.
ಈ ದೇವಸ್ಥಾನಕ್ಕೆ ಭಕ್ತರು ಮೊದಲಿಗೆ ತಮ್ಮ ಹರಕೆಯನ್ನು ಹೇಳಿಕೊಳ್ಳುತ್ತಾರೆ. ಅದು ನೆರವೇರಿದ ಮೇಲೆ ದೇವರಿಗೆ ಸಮರ್ಪಣೆ ಮಾಡುತ್ತಾರೆ. ಪೆರ್ಡೂರು ಅನಂತ ಪದ್ಮನಾಭ ದೇವಾಲಯ ಬೆಳಗ್ಗೆ 6.30ಕ್ಕೆ ತೆರೆಯಲಾಗುತ್ತದೆ. ಆದರೆ ಪೂಜೆ ಶುರುವಾಗುವುದು ಬೆಳಗ್ಗೆ 7 ಗಂಟೆಯಿಂದ. ಆಗಿನಿಂದ ರಾತ್ರಿ 8 ಗಂಟೆಯ ತನಕ ದೇವಾಲಯ ತೆರೆದಿರುತ್ತದೆ. ಒಂದು ದಿನದಲ್ಲಿ 14 ಬಗೆಯ ಪೂಜೆಗಳು ಪೆರ್ಡೂರು ಅನಂತ ಪದ್ಮನಾಭ ದೇವಾಲಯದಲ್ಲಿ ಆಗುತ್ತದೆ. ನಿಮಗೂ ಸಮಸ್ಯೆಗಳಿದ್ದಲ್ಲಿ ಕದಳೀಪ್ರಿಯ ಪೆರ್ಡೂರು ಪದ್ಮನಾಭನಿಗೆ ಹರಕೆ ಹೇಳಿಕೊಳ್ಳಬಹುದು.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ