ಜಗತ್ತು ಕಂಡ ಪೌರಾಣಿಕ ಪ್ರೇಮ ಕಥೆಗಳು; ಪ್ರೀತಿಯನ್ನು ಪಡೆಯಲು ಆದಿ ಶಕ್ತಿ ಕೂಡ ತಪಸ್ಸು ಮಾಡ್ಬೇಕಾಯ್ತು
TV9 Web | Updated By: ಆಯೇಷಾ ಬಾನು
Updated on:
Nov 29, 2021 | 8:19 AM
ಪ್ರೀತಿ, ಪ್ರೇಮಕ್ಕೆ ಹಲವು ಮುಖಗಳಿವೆ. ಪ್ರೀತಿ ಮನುಷ್ಯನನ್ನು ಏನು ಬೇಕಾದರೂ ಮಾಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಬಿದ್ದ ಮನುಷ್ಯ ಯಾರು ಊಹಿಸಲಾಗದಷ್ಟು ಬದಲಾಗುತ್ತಾನೆ. ಪ್ರೀತಿ ಕೆಲವೊಮ್ಮೆ ಅರಳಿಸುತ್ತದೆ ಮತ್ತೆ ಕೆಲವು ಬಾರಿ ಮುದುಡಿಸುತ್ತದೆ ಹಾಗೇ ದೇವದಾಸನಾಗಿಯೂ ಮಾಡುತ್ತದೆ. ಅದೇನೇ ಇರಲಿ ಜಗತ್ತಿನ ಕಾಲ ಚಕ್ರ ನಿಂತಿರೋದೆ ಪ್ರೀತಿ-ಪ್ರೇಮದ ಮಾಯೆಯ ಮೇಲೆ. ಸುಖ, ದುಃಖ, ಜೀವಿಗಳ ಉಗಮ, ಬೆಳವಣಿಗೆ ಎಲ್ಲದಕ್ಕೂ ಪ್ರೀತಿಯೇ ಮೂಲ ಕಾರಣ. ಹಾಗಾಗಿ ನಾವಿಂದು ಪುರಾಣ ಕತೆಗಳಲ್ಲಿ ಮೂಡಿದ ಪ್ರೇಮ ಕಥೆಗಳು, ಯುಗ ಯುಗಗಳಿಗೂ ಉದಾಹರಣೆಯಾಗಿರುವ ಪ್ರೀತಿಯ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇವೆ.
1 / 5
ಶಿವ ಸತಿ(Shiva Sati): ಅರ್ಧನಾರೀಶ್ವರನಾಗಿ ಪತ್ನಿಗೆ ತನ್ನ ಸಮ ಭಾಗ ಕೊಟ್ಟವನು ಮಹಾದೇವ. ಶಿವ ಮತ್ತು ಸತಿಯ ಪ್ರೇಮ ಕಥೆಯನ್ನು ಲೋಕದ ಪ್ರಥಮ ಪ್ರೇಮ ಕಥೆ ಎಂದು ಹೇಳಲಾಗುತ್ತೆ. ಕಷ್ಟ, ನೋವು, ಸಹನೆಯಿಂದ ತುಂಬಿದ ಪ್ರೇಮ ಕಥೆ ಇದಾಗಿದೆ. ದಕ್ಷ ರಾಜನ ಮಗಳು ಸತಿ ತಂದೆಯ ವಿರೋಧದ ಹೊರತಾಗಿಯೂ ಶಿವನನ್ನು ಪ್ರೇಮಿಸಿ ವಿವಾಹವಾಗುತ್ತಾಳೆ. ಆನಂತರ ದಕ್ಷ ರಾಜ ಯಜ್ಞವನ್ನೇರ್ಪಡಿಸಿ ಅಲ್ಲಿಗೆ ಕರೆಯದಿದ್ದರೂ, ಸತಿ ತಂದೆಯ ಮನೆಯಲ್ಲವೇ ಎಂದುಕೊಂಡು ಹೋಗುತ್ತಾಳೆ. ಆದರೆ ಮಗಳು ಕರೆಯದಿದ್ದರೂ ಮಹಾ ಯಜ್ಞಕ್ಕೆ ಬಂದಿದ್ದನ್ನು ಸಹಿಸಲಾಗದೆ ಎಲ್ಲರ ಸಮ್ಮುಖದಲ್ಲಿ ದಕ್ಷ ಸತಿ ಮತ್ತು ಶಿವನ ಕುರಿತು ಅವಮಾನಿಸುವ ಮಾತುಗಳನ್ನಾಡುತ್ತಾನೆ. ಇದನ್ನು ಕೇಳಿದಾಗ ಕೋಪಗೊಂಡ ಸತಿ, ತನ್ನ ತಂದೆ ಶಿವನ ಕೈಯಿಂದಲೇ ಮೃತನಾಗಲಿ ಎಂದು ಶಾಪವನ್ನು ಕೊಡುತ್ತಾ ಅಗ್ನಿಗೆ ಹಾರಿ ಪ್ರಾಣ ಬಿಡುತ್ತಾಳೆ. ಬಳಿಕ ಸತಿ ಪುನರ್ಜನ್ಮದಲ್ಲಿ ಪಾರ್ವತಿಯಾಗಿ ಹುಟ್ಟುತ್ತಾಳೆ. ತಪಸ್ಸಿನ ಮೂಲಕ ಮತ್ತೆ ಶಿವನನ್ನು ಮೆಚ್ಚಿಸಿ ವಿವಾಹವಾಗುತ್ತಾಳೆ.
2 / 5
ರಾಧಾ ಕೃಷ್ಣ(Radha Krishna): ನಿಜವಾದ ಪ್ರೀತಿಗೆ ಯಾವುದೇ ಬಂಧನಗಳಿಲ್ಲ. ಅದು ಹರಿಯುವ ನದಿಯಂತೆ ಬಂಡೆಗಳನ್ನೂ ಸೀಳಿಕೊಂಡು ಮುನ್ನುಗ್ಗುತ್ತೆ ಎನ್ನವುದಕ್ಕೆ ರಾಧಾ ಕೃಷ್ಣ ಪ್ರೇಮ ಕಥೆಯೇ ಸಾಕ್ಷಿ. ರಾಧೆ ಕೃಷ್ಣ ಒಂದಾಗದೇ ಹೋದರೂ ಅವರ ಪ್ರೀತಿ ಸೋಲಲ್ಲ. ರಾಧೆ ಕೃಷ್ಣನಿಗಿಂತ ದೊಡ್ಡವಳಾಗಿರುತ್ತಾಳೆ. ಅಲ್ಲದೆ ವಿವಾಹಿತೆ ಕೂಡಾ ಆದರೂ ಕೃಷ್ಣನೆಡೆಗಿನ ಆಕೆಯ ಪ್ರೇಮವನ್ನು ತಡೆಯಲು ಸ್ವತಃ ಆಕೆಗೂ ಸಾಧ್ಯವಾಗುವುದಿಲ್ಲ. ಪ್ರೇಮ ಆಗುವುದೇ ಹೊರತು, ಒತ್ತಾಯಪೂರ್ವಕವಾಗಿ ಹುಟ್ಟುವುದಿಲ್ಲ ಎಂಬುದನ್ನು ಈ ಪ್ರೇಮ ಸಾಬೀತುಗೊಳಿಸುತ್ತದೆ.
3 / 5
ನಳ ದಮಯಂತಿ(Nala Damayanthi): ಇವರಿಬ್ಬರ ಪ್ರೀತಿ ಪರಸ್ಪರ ಮುಖ ನೋಡುವ ಮುಂಚೆಯೇ ಆರಂಭವಾದದ್ದು. ಹಂಸದ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ದಮಯಂತಿಗೆ ಆಕೆಯ ತಂದೆ ಭೀಮ ಸ್ವಯಂವರ ಏರ್ಪಡಿಸುವ ಮುಂಚೆಯೇ ಆಕೆ ನಳನೇ ತನ್ನ ಪತಿ ಎಂದು ನಿರ್ಧರಿಸಿರುತ್ತಾಳೆ. ಒಟ್ಟಿನಲ್ಲಿ ಅವರಿಬ್ಬರ ವಿವಾಹವಾಗುತ್ತದೆ. ಆದರೆ, ನಂತರದಲ್ಲಿ ಕಲಿಯ ಕಾರಣದಿಂದ ಇವರಿಬ್ಬರ ಜೀವನದಲ್ಲಿ ಅನೇಕ ಅಗ್ನಿ ಪರೀಕ್ಷೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಜಯಿಸಿ ಮತ್ತೆ ಒಂದಾಗುವ ನಳದಮಯಂತಿಯ ಕತೆ ಭಾರತೀಯ ಪುರಾಣದಲ್ಲಿ ಮಹತ್ವದ ಸ್ಥಾನ ಪಡೆದಿದೆ.
4 / 5
ವಿಶ್ವಾಮಿತ್ರ ಹಾಗೂ ಮೇನಕೆ(Vishwamitra and Menaka): ಋಷಿವರ್ಯ ವಿಶ್ವಾಮಿತ್ರರ ಘೋರ ತಪಸ್ಸು ತನ್ನ ಸ್ಥಾನವನ್ನೇ ಅಲ್ಲಾಡಿಸುತ್ತದೆ ಎಂದು ತಿಳಿದಾಗ ದೇವತೆಗಳ ರಾಜ ಇಂದ್ರ, ವಿಶ್ವಾಮಿತ್ರರ ತಪಸ್ಸನ್ನು ಭಂಗ ಮಾಡುವಂತೆ ಅಪ್ಸರೆ ಮೇನಕಳನ್ನು ಕಳುಹಿಸುತ್ತಾನೆ. ಋುಷಿಯ ತಪಸ್ಸನ್ನು ಭಂಗ ಮಾಡುವ ಉದ್ದೇಶದಿಂದ ಧರೆಗಿಳಿದ ಮೇನಕೆಗೆ ವಿಶ್ವಾಮಿತ್ರ ಮೇಲೆ ಪ್ರೇಮಾಂಕುರವಾಗುತ್ತೆ. ವಿಶ್ವಾಮಿತ್ರರೂ ಮೇನಕೆಯೂ ಪ್ರೇಮದ ಉತ್ಕಟತೆಯಲ್ಲಿರುವಾಗಲೇ ಒಂದು ದಿನ ಮೇನಕೆ ತಾನು ಬಂದು ಅವರೆದುರು ನರ್ತಿಸಿದ ಉದ್ದೇಶವನ್ನು ಹೇಳುತ್ತಾಳೆ. ಇದರಿಂದ ನಂಬಿಕೆದ್ರೋಹಕ್ಕೊಳಗಾದಂತೆನಿಸಿ ವಿಶ್ವಾಮಿತ್ರರು ಮೇನಕೆಗೆ ತನಗೆ ಮುಖ ತೋರಿಸಬೇಡ ಎಂದು ಶಾಪ ನೀಡುತ್ತಾರೆ. ಇದರಿಂದ ಆಕೆ ಅವರನ್ನು ಬಿಟ್ಟು ತೆರಳಲೇಬೇಕಾಗುತ್ತದೆ. ಆದರೆ ಇವರಿಬ್ಬರ ಪ್ರೇಮಕತೆ ಮಾತ್ರ ಶಾಶ್ವತವಾಗಿದೆ.
5 / 5
ಸತ್ಯವಾನ್ ಸಾವಿತ್ರಿ(Sathyavan Savithri): ಮಾದ್ರ ದೇಶದ ರಾಜಕುಮಾರಿ ಸಾವಿತ್ರಿ, ಆಳಲು ದೇಶವಿಲ್ಲದೆ ಕಾಡು ಸೇರಿದ್ದ ಕುರುಡ ರಾಜ ಬಲ್ವನ ಪುತ್ರ ಸತ್ಯವಾನನನ್ನು ವಿವಾಹವಾಗಲು ನಿರ್ಧರಿಸುತ್ತಾಳೆ. ಆದರೆ, ನಾರದರು ಸತ್ಯವಾನನಿಗೆ ಒಂದೇ ವರ್ಷ ಆಯಸ್ಸಿರುವುದೆಂದು ಸಾವಿತ್ರಿಗೆ ತಿಳಿಸುತ್ತಾರೆ. ಅದು ತಿಳಿದೂ ಕೂಡಾ ಸಾವಿತ್ರಿ ತಾನು ಮನಸ್ಸಿನಲ್ಲೇ ಆತನನ್ನು ಪತಿಯಾಗಿ ಸ್ವೀಕರಿಸಿದ್ದೇನೆಂದು ಹೇಳಿ ವಿವಾಹವಾಗುತ್ತಾಳೆ. ಆದರೆ, ಈ ಪ್ರೇಮಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ವಿವಾಹವಾದ ನಂತರ ರಾಜವೈಭೋಗ ಬಿಟ್ಟು ಅತ್ತೆ ಮಾವ ಪತಿಯ ಸೇವೆ ಮಾಡುತ್ತಾ ಕಾಡಿನಲ್ಲಿ ವಾಸಿಸುವ ಸಾವಿತ್ರಿ ಪತಿಯ ಪ್ರಾಣ ಉಳಿಸಲು ಹಲವಾರು ವೃಥಗಳನ್ನು ಆಚರಿಸುತ್ತಾಳೆ. ಅಷ್ಟಾಗಿಯೂ ಒಂದು ದಿನ ಸತ್ಯವಾನನ ಪ್ರಾಣ ತೆಗೆದುಕೊಂಡು ಹೋಗಲು ಯಮ ಬಂದಾಗ, ಆತನೊಂದಿಗೆ ವಾದಿಸಿ, ಮಾತಿನಲ್ಲೇ ಆತನನ್ನು ಸೋಲಿಸಿ ಪತಿಯ ಪ್ರಾಣವನ್ನು ಹಿಂದೆ ಪಡೆದುಕೊಂಡು ಬರುತ್ತಾಳೆ ಸಾವಿತ್ರಿ. ತನ್ನ ಅಚಲ ಪ್ರೇಮದಿಂದ ಪತಿಯ ಪ್ರಾಣವನ್ನುಳಿಸುತ್ತಾಳೆ.