ನಾಯಿಗಳನ್ನು ದೇವರಂತೆ ಪೂಜಿಸುವ ದೇಶವಿದು; ಈ ಹಬ್ಬದ ಆಚರಣೆ ನೋಡಿದರೆ ಅಚ್ಚರಿಯಾಗುತ್ತೆ!

ನೇಪಾಳದಲ್ಲಿ 'ತಿಹಾರ್' ಹಬ್ಬದ ಎರಡನೇ ದಿನವನ್ನು 'ಕುಕ್ಕುರ್ ತಿಹಾರ್' ಎಂದು ಆಚರಿಸಲಾಗುತ್ತದೆ. ಈ ದಿನ ನಾಯಿಗಳನ್ನು ದೇವರಂತೆ ಪೂಜಿಸಿ, ಮಾಲೆ ಹಾಕಿ, ತಿಲಕವಿಟ್ಟು, ವಿಶೇಷ ಭೋಜನ ನೀಡಲಾಗುತ್ತದೆ. ನಾಯಿಗಳ ನಿಷ್ಠೆ, ಸ್ನೇಹವನ್ನು ಗೌರವಿಸುವ ಈ ಹಬ್ಬಕ್ಕೆ ಮಹಾಭಾರತದ ಪೌರಾಣಿಕ ಹಿನ್ನೆಲೆಯಿದೆ. ಯಮರಾಜನ ದೂತ ಹಾಗೂ ಧರ್ಮದ ಪ್ರತೀಕವಾಗಿ ನಾಯಿಗಳನ್ನು ಕಾಣುವ ಈ ವಿಶಿಷ್ಟ ಆಚರಣೆಯು ಜಾಗತಿಕವಾಗಿ ಪ್ರಾಣಿ ದಯೆಗೆ ಸ್ಫೂರ್ತಿಯಾಗಿದೆ.

ನಾಯಿಗಳನ್ನು ದೇವರಂತೆ ಪೂಜಿಸುವ ದೇಶವಿದು; ಈ ಹಬ್ಬದ ಆಚರಣೆ ನೋಡಿದರೆ ಅಚ್ಚರಿಯಾಗುತ್ತೆ!
ಕುಕುರ್ ತಿಹಾರ್
Image Credit source: Getty Images

Updated on: Oct 28, 2026 | 9:53 AM

ನೇಪಾಳದಲ್ಲಿ ನಾಯಿಗಳಿಗಾಗಿಯೇ ವಿಶೇಷ ದಿನವನ್ನು ಮೀಸಲಿಟ್ಟು, ದೇವರಂತೆ ಪೂಜಿಸಲಾಗುತ್ತದೆ. ನೇಪಾಳ ಪ್ರವಾಸೋದ್ಯಮ ಮಂಡಳಿ ಮತ್ತು ಪ್ರಮುಖ ವರದಿಗಳ ಪ್ರಕಾರ, ನೇಪಾಳದ ಐದು ದಿನಗಳ ದೀಪಾವಳಿ ಹಬ್ಬವಾದ ‘ತಿಹಾರ್’ ಆಚರಣೆಯ ಎರಡನೇ ದಿನವನ್ನು ‘ಕುಕುರ್ ತಿಹಾರ್’ ಎಂದು ಆಚರಿಸಲಾಗುತ್ತದೆ. ಈ ದಿನ ಸಾಕುನಾಯಿಗಳು, ಬೀದಿ ನಾಯಿಗಳು ಹಾಗೂ ಪೊಲೀಸ್ ನಾಯಿಗಳಿಗೆ ಚೆಂಡುಹೂವಿನ ಮಾಲೆ ಹಾಕಿ, ಹಣೆಗೆ ಕೆಂಪು ತಿಲಕವನ್ನಿಟ್ಟು, ಅವುಗಳಿಗೆ ಇಷ್ಟವಾದ ಭೋಜನ ನೀಡಲಾಗುತ್ತದೆ. 2026 ರಲ್ಲಿ ನೇಪಾಳಿ ಪಂಚಾಂಗದ ಪ್ರಕಾರ ನವೆಂಬರ್ 8 ರಂದು (ಕೆಲವು ಪಂಚಾಂಗಗಳಲ್ಲಿ ನವೆಂಬರ್ 7) ಲಕ್ಷ್ಮಿ ಪೂಜೆಯ ದಿನವೇ ಈ ಅಪರೂಪದ ಹಬ್ಬ ಬಂದಿದೆ.

ತಿಹಾರ್ ಹಬ್ಬದ ಮಧ್ಯೆ ನಾಯಿಗಳಿಗೊಂದು ಪವಿತ್ರ ದಿನ:

ನೇಪಾಳದಲ್ಲಿ ದೀಪಾವಳಿಯನ್ನು ‘ತಿಹಾರ್’ ಎಂದು ಕರೆಯಲಾಗುತ್ತದೆ. ಮೊದಲ ದಿನ ಕಾಗೆಗಳನ್ನು (ಕಾಗ್ ತಿಹಾರ್), ಎರಡನೇ ದಿನ ನಾಯಿಗಳನ್ನು (ಕುಕುರ್ ತಿಹಾರ್), ಮತ್ತು ಮೂರನೇ ದಿನ ಹಸುಗಳನ್ನು ಪೂಜಿಸಲಾಗುತ್ತದೆ. ಉಳಿದ ದಿನಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ಅಣ್ಣ-ತಂಗಿಯರ ಬಾಂಧವ್ಯದ ಹಬ್ಬ ‘ಭಾಯಿ ಟಿಕಾ’ ಆಚರಿಸಲಾಗುತ್ತದೆ. ಮಾನವ ಮತ್ತು ನಾಯಿಗಳ ನಡುವಿನ ನಿಷ್ಠೆ ಹಾಗೂ ಸ್ನೇಹವನ್ನು ಗೌರವಿಸಲು ಕುಕ್ಕುರ್ ತಿಹಾರ್ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಈ ದಿನ ಕೇವಲ ಮನೆಯಲ್ಲಿ ಸಾಕುವ ನಾಯಿಗಳು ಮಾತ್ರವಲ್ಲದೆ, ಬೀದಿಬದಿಯ ನಾಯಿಗಳಿಗೂ ಸಮಾನ ಗೌರವ ಸಿಗುತ್ತದೆ.

ಪೂಜೆಯ ಹಿಂದಿರುವ ಪೌರಾಣಿಕ ನಂಬಿಕೆ ಮತ್ತು ಮಹಾಭಾರತದ ಕಥೆ:

ಹಿಂದೂ ಧರ್ಮದಲ್ಲಿ ನಾಯಿಯನ್ನು ಯಮರಾಜನ ದೂತ ಎಂದು ನಂಬಲಾಗುತ್ತದೆ. ನಾಯಿಯನ್ನು ಪೂಜಿಸುವುದರಿಂದ ಯಮರಾಜ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇಲ್ಲಿದೆ. ಅಲ್ಲದೆ, ನಾಯಿಗಳು ಮರಣೋತ್ತರ ಜೀವನದ ಬಾಗಿಲನ್ನು ಕಾಯುತ್ತವೆ ಎಂಬ ಆಚರಣೆಯೂ ಇದೆ. ಈ ಹಬ್ಬಕ್ಕೆ ಮಹಾಭಾರತದ ಕಥೆಯ ನಂಟೂ ಇದೆ. ಧರ್ಮರಾಯ (ಯುಧಿಷ್ಠಿರ) ತನ್ನ ಜೀವಿತಾವಧಿಯ ಕೊನೆಯಲ್ಲಿ ಸ್ವರ್ಗಾರೋಹಣ ಮಾಡುವಾಗ, ಒಂದು ಬೀದಿ ನಾಯಿ ಅವನನ್ನು ಹಿಂಬಾಲಿಸುತ್ತದೆ. ಸ್ವರ್ಗದ ಬಾಗಿಲಿಗೆ ತಲುಪಿದಾಗ ಇಂದ್ರದೇವನು ನಾಯಿಯನ್ನು ಒಳಗೆ ಬಿಡಲು ನಿರಾಕರಿಸುತ್ತಾನೆ. ಆದರೆ ಧರ್ಮರಾಯ, “ನನ್ನನ್ನು ನಂಬಿ ಬಂದ ಈ ನಾಯಿಯನ್ನು ಬಿಟ್ಟು ನಾನು ಸ್ವರ್ಗಕ್ಕೆ ಬರುವುದಿಲ್ಲ” ಎಂದು ಪಟ್ಟುಹಿಡಿಯುತ್ತಾನೆ. ಆಗ ಆ ನಾಯಿ ಧರ್ಮದೇವನ ರೂಪ ತಳೆದು, ಯುಧಿಷ್ಠಿರನ ಧರ್ಮ ಮತ್ತು ನಿಷ್ಠೆಯನ್ನು ಮೆಚ್ಚಿ ಆಶೀರ್ವದಿಸುತ್ತದೆ.

ಚೆಂಡುಹೂವಿನ ಮಾಲೆ, ಕೆಂಪು ತಿಲಕ ಮತ್ತು ಶ್ರೇಷ್ಠ ಭೋಜನ:

ಕುಕ್ಕುರ್ ತಿಹಾರ್ ದಿನದಂದು ನಾಯಿಗಳನ್ನು ಪೂಜಿಸುವ ವಿಧಾನ ಅತ್ಯಂತ ಸುಂದರವಾಗಿರುತ್ತದೆ. ನಾಯಿಗಳ ಕುತ್ತಿಗೆಗೆ ಗೌರವದ ಸಂಕೇತವಾಗಿ ತಾಜಾ ಚೆಂಡುಹೂವಿನ ಮಾಲೆಯನ್ನು ಹಾಕಲಾಗುತ್ತದೆ. ಅವುಗಳ ಹಣೆಗೆ ಕೆಂಪು ತಿಲಕವನ್ನಿಟ್ಟು ಆಶೀರ್ವದಿಸಲಾಗುತ್ತದೆ. ಪೂಜೆಯ ನಂತರ ನಾಯಿಗಳಿಗೆ ಹಲು, ಮೊಟ್ಟೆ, ಮಾಂಸ ಹಾಗೂ ಅವುಗಳಿಗೆ ಇಷ್ಟವಾದ ವಿಶೇಷ ಖಾದ್ಯಗಳನ್ನು ನೈವೇದ್ಯವಾಗಿ ನೀಡಲಾಗುತ್ತದೆ. ಬೀದಿ ನಾಯಿಗಳಿಗೂ ಪ್ರೀತಿಯಿಂದ ರುಚಿಕರವಾದ ಆಹಾರವನ್ನು ಬಡಿಸಲಾಗುತ್ತದೆ.

ಇದನ್ನೂ ಓದಿ: ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ

ಕಾವಲು ಮತ್ತು ಪೊಲೀಸ್ ನಾಯಿಗಳಿಗೆ ಸರ್ಕಾರಿ ಗೌರವ:

ಕುಕ್ಕುರ್ ತಿಹಾರ್ ಆಚರಣೆಯು ಕೇವಲ ಮನೆ ಅಥವಾ ಬೀದಿಯ ನಾಯಿಗಳಿಗೆ ಮಾತ್ರ ಸೀಮಿತವಾಗಿಲ್ಲ. ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ತಮ್ಮ ತರಬೇತಿ ಕೇಂದ್ರಗಳಲ್ಲಿ ಅಧಿಕೃತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಪರಾಧ ತನಿಖೆ, ಬಾಂಬ್ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಪೊಲೀಸ್ ನಾಯಿಗಳಿಗೆ ಮಾಲೆ ಹಾಕಿ, ತಿಲಕವಿಟ್ಟು, ವಿಶೇಷ ರಾಜಭೋಜನ ನೀಡಿ ಗೌರವಿಸಲಾಗುತ್ತದೆ.

ಪ್ರಾಣಿ ದಯೆಗೆ ಮಾದರಿಯಾದ ಜಾಗತಿಕ ಸ್ಪೂರ್ತಿ:

ನೇಪಾಳದ ಈ ವಿಶಿಷ್ಟ ಸಂಸ್ಕೃತಿ ಇಂದು ಜಗತ್ತಿನಾದ್ಯಂತ ಗಮನ ಸೆಳೆದಿದೆ. ಪ್ರಾಣಿ ಪ್ರೇಮಿಗಳು ಮತ್ತು ಪ್ರಾಣಿ ರಕ್ಷಣಾ ಸಂಸ್ಥೆಗಳು ಕುಕ್ಕುರ್ ತಿಹಾರ್ ಹಬ್ಬದಿಂದ ಸ್ಪೂರ್ತಿ ಪಡೆದು, ಬೀದಿ ನಾಯಿಗಳ ದತ್ತು ಸ್ವೀಕಾರ, ರಕ್ಷಣೆ ಮತ್ತು ಪ್ರಾಣಿ ಹಿಂಸೆ ತಡೆಯುವ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಈ ಮೂಲಕ ನೇಪಾಳದ ಪವಿತ್ರ ಸಾಂಸ್ಕೃತಿಕ ಹಬ್ಬವು ಜಾಗತಿಕ ಮಟ್ಟದಲ್ಲಿ ಪ್ರಾಣಿ ದಯೆಯ ಸಂಕೇತವಾಗಿ ಹೊರಹೊಮ್ಮಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us