ಸ್ಮಶಾನವಾಸಿ ಶಿವನಿಗೇಕೆ ಮದ್ಯ, ಮಾಂಸ ನೈವೇದ್ಯ? ಪುರಾಣಗಳು ಹೇಳೋದೇನು?

| Updated By: ಸಾಧು ಶ್ರೀನಾಥ್​

Updated on: Apr 30, 2024 | 9:19 PM

ಕರ್ನಾಟಕವು ವೈವಿಧ್ಯಮಯ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ರಾಜ್ಯ. ಹಿಂದೂ ಧರ್ಮ ಮತ್ತು ನಮ್ಮ ಸಂಪ್ರದಾಯವು ಸಸ್ಯಾಹಾರದೊಂದಿಗೆ ಸಂಬಂಧ ಹೊಂದಿದೆ. ದೇಶದ ಬಹುತೇಕ ಹಿಂದೂ ದೇವಾಲಯಗಳಲ್ಲಿ ಸಸ್ಯಹಾರಿ ನೈವೇದ್ಯವನ್ನೇ ವಿತರಿಸಲಾಗುತ್ತದೆ. ಆದರೆ ಮುಕ್ಕೋಟಿ ದೇವರುಗಳ ಪೈಕಿ ಶಿವ ಮತ್ತು ಪಾರ್ವತಿಯ ಕೆಲ ದೇವಾಲಯಗಳಲ್ಲಿ ಮಾತ್ರ ಮಾಂಸಾಹಾರ ಪ್ರಸಾದವನ್ನು ವಿತರಿಸಲಾಗುತ್ತೆ. ಇದರ ಹಿಂದಿರುವ ಕಾರಣವೇನು? ಶಿವ ಮಾಂಸಹಾರವನ್ನೂ ಸ್ವೀಕರಿಸುವುದೇಕೆ?

ಸ್ಮಶಾನವಾಸಿ ಶಿವನಿಗೇಕೆ ಮದ್ಯ, ಮಾಂಸ ನೈವೇದ್ಯ? ಪುರಾಣಗಳು ಹೇಳೋದೇನು?
ಸ್ಮಶಾನವಾಸಿ ಶಿವನಿಗೇಕೆ ಮದ್ಯ, ಮಾಂಸ ನೈವೇದ್ಯ? ಪುರಾಣಗಳು ಹೇಳೋದೇನು?
Follow us on

ಹಿಂದೂ ಧರ್ಮದ ಪ್ರಕಾರ ಮುಕ್ಕೋಟಿ ದೇವರುಗಳ ಪೈಕಿ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಪ್ರಮುಖ ದೇವರುಗಳಾಗಿ ಕಾಣುತ್ತಾರೆ. ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಜಗದ ನಿರ್ವಾಹಕ ಮತ್ತು ಮಹೇಶ್ವರ ವಿನಾಶಕ ಎನ್ನಲಾಗುತ್ತೆ. ಇಲ್ಲಿ ವಿಶೇಷವೆಂದರೆ ಎಲ್ಲಾ ದೇವರುಗಳ ಪೈಕಿ ದೇವರುಗಳ ಒಡೆಯ, ಭಗವಾನ್ ಶಿವನಿಗೆ ಹಲವೆಡೆ ಮಾಂಸ, ಮದ್ಯ ನೈವೇದ್ಯ ಮಾಡುವ ಪದ್ಧತಿ ಇದೆ. ಪ್ರಾಣಿ ಹಿಂಸೆ ಮಹಾಪಾಪ, ಪ್ರಾಣಿ ಹಿಂಸೆ ನಿಷೇಧವಿರುವ ಸಮಾಜದಲ್ಲೇ ಈಗಲೂ ದೇವರಿಗೆ ಮಾಂಸ, ಮದಿರೆ ಅರ್ಪಿಸುವ ಪದ್ಧತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ.

ಭೋಲೆನಾಥ, ಸ್ಮಶಾನವಾಸಿ, ಗಜಚರ್ಮಾಂಬರ, ಅರ್ಧನಾರೀಶ್ವರ, ಅಭಿಷೇಕಪ್ರಿಯನೂ ಆಗಿರುವ ಶಿವನಿಗೆ ಭಕ್ತಿ, ಪ್ರೀತಿಯಿಂದ ಏನನ್ನು ಅರ್ಪಿಸಿದರೂ ಅದನ್ನು ಶಿವ ಸ್ವೀಕರಿಸುತ್ತಾರೆ ಎಂಬ ಮಾತಿದೆ. ಮೊದಲನೆಯದಾಗಿ, ಹಿಂದೂ ಸಂಸ್ಕೃತಿಯಲ್ಲಿ “ದೇವರಿಗೆ ಪ್ರಸಾದವನ್ನು ಅರ್ಪಿಸುವುದಿಲ್ಲ” ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಅರ್ಪಿಸಿದ ನಂತರವೇ ಅದು ದೇವರ ಕೃಪೆಯಿಂದ ಪ್ರಸಾದವಾಗುತ್ತದೆ. ಆ ಪ್ರಸಾದವನ್ನೇ ಭಕ್ತರಿಗೆ ವಿತರಿಸಲಾಗುತ್ತದೆ.

ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ದೇವರುಗಳಿಗೆ ಸಸ್ಯಾಹಾರ ನೈವೇದ್ಯವನ್ನೇ ನೀಡಲಾಗುತ್ತೆ. ಬಹುತೇಕ ದೇವಾಲಯಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಪ್ರಾಚೀನ ಗ್ರಂಥಗಳಲ್ಲಿ, ಮುಖ್ಯವಾಗಿ ವೇದಗಳಲ್ಲಿ, ಆಗಮ ಮತ್ತು ಪುರಾಣಗಳಲ್ಲಿ ಕೆಲವು ಸಂಪ್ರದಾಯಗಳನ್ನು ಅನುಸರಿಸುವಾಗ ಕೆಲವು ದೇವರುಗಳಿಗೆ ಮಾಂಸಾಹಾರಿ ನೈವೇದ್ಯವನ್ನು ಅರ್ಪಿಸುವ ಬಗ್ಗೆ ತಿಳಿಸಲಾಗಿದೆ. ವಾಮಾಚಾರ ಮತ್ತು ಕೆಲವೊಮ್ಮೆ ತಂತ್ರ ಸಾಧನ ಮತ್ತು ಶಾಕ್ತ ಸಂಪ್ರದಾಯಗಳಲ್ಲಿ ಮಾಂಸಹಾರ, ನರ ಬಲಿ ಕೊಡುವುದು, ರಕ್ತದ ಬಗ್ಗೆ ತಿಳಿಸಲಾಗಿದೆ. ಇಂತಹ ತಾಂತ್ರಿಕ ಆಗಮಗಳನ್ನು ಅನುಸರಿಸುವ ದೇವಾಲಯಗಳಲ್ಲಿ ಮಾಂಸವನ್ನು ನೀಡುವ ಆಚರಣೆ ಇದೆ. ವೇದಗಳು, ಶಿವನ ರೂಪ ರುದ್ರನನ್ನು ಮಾಂಸ ತಿನ್ನುವ ಬೇಟೆಗಾರ ದೇವರು ಎಂದು ಸ್ಪಷ್ಟವಾಗಿ ವಿವರಿಸುತ್ತವೆ. ಪ್ರಾಣಿಗಳ ದೇಹದ ಭಾಗಗಳನ್ನು ಅರ್ಪಿಸುವುದರಲ್ಲಿ ರುದ್ರ ಸಂತೋಷಪಡುತ್ತಾನೆ ಎಂದು ಅಥರ್ವವೇದ ಹೇಳುತ್ತದೆ. ಬಸವ ಪುರಾಣದಂತಹ ಲಿಂಗಾಯತ ಶೈವ ಗ್ರಂಥಗಳಲ್ಲಿ ಬೇಯಿಸಿದ ಮಾಂಸವನ್ನು ಶಿವನಿಗೆ ಬಡಿಸಿದ ಅನೇಕ ಕಥೆಗಳು ಕೇಳ ಸಿಗುತ್ತವೆ.

ಶಿವನಿಗೆ ಮಾಂಸ ನೀಡಿದ್ದ ಬೇಡರ ಕಣ್ಣಪ್ಪ

ಜನಪ್ರಿಯ ಬೇಡರ ಕಣ್ಣಪ್ಪನ ಕಥೆಯಲ್ಲೂ ಮಾಂಸದ ಉಲ್ಲೇಖವಿದೆ. ತಮಿಳಿನ ಪೆರಿಯಪುರಾಣದಲ್ಲೂ, ಕನ್ನಡದಲ್ಲಿ ಹರಿಹರನ ರಗಳೆಗಳಲ್ಲೂ, ಷಡಕ್ಷರಿಯ ವೃಷಭೇಂದ್ರ ವಿಜಯದಲ್ಲೂ ಬೇಡರ ಕಣ್ಣಪ್ಪನ ಕಥೆ ಕಾಣಬಹುದು. ಈ ಕಥೆಯನ್ನು ಆದರಿಸಿ ಸಿನಿಮಾ ಕೂಡ ಮಾಡಲಾಗಿದೆ. ಈ ಕಥೆಯ ಪ್ರಕಾರ, ಒಂದು ಸಂಜೆ ಮರದಡಿಯಲ್ಲಿ ಮಲಗಿದ್ದಾಗ ಕಣ್ಣಪ್ಪನ ಕನಸಿನಲ್ಲಿ ಶಿವ ಕಾಣಿಸಿಕೊಂಡು ಕಾಡಿನಲ್ಲಿ ಶಿವಲಿಂಗವಿರುವುದನ್ನು ತಿಳಿಸಿ ಅದನ್ನು ಪೂಜಿಸಬೇಕೆಂದು ಹೇಳುತ್ತಾನೆ. ಇದೇ ವೇಳೆ ಬೇಟೆಗೆಂದು ಬಂದ ಕಣ್ಣಪ್ಪನು ರಾತ್ರಿ ಆಗುವುದನ್ನು ಗಮನಿಸಿ ಕಾಡಿನಲ್ಲಿಯೇ ಕಾಲ ಕಳೆಯುತ್ತಾನೆ. ನಾನಾ ಪ್ರಾಣಿಗಳಿಗೆ ಹೆದರಿ ಅಲ್ಲಿಯೇ ಹತ್ತಿರದಲ್ಲಿದ್ದ ಮರವನ್ನು ಏರಿ ಕುಳಿತು ಬಿಡುತ್ತಾನೆ. ದೈವ ಲಿಖಿತದಿಂದ ಆ ಮರವು ಬಿಲ್ವಪತ್ರೆಯ ಮರವಾಗಿರುತ್ತದೆ. ರಾತ್ರಿ ಆಗುತ್ತಿದ್ದಂತೆ ನಿದ್ರಾ ದೇವಿ ಆತನನ್ನು ಆವರಿಸುತ್ತಾಳೆ. ಆದ್ದರಿಂದ ಆ ನಿದ್ದೆಯಿಂದ ಪಾರಾಗಲು ಮರದಲ್ಲಿದ್ದ ಎಲೆಗಳನ್ನು ಆತ ಕಿತ್ತು ನೆಲದ ಮೇಲೆ ಎಸೆಯುತ್ತಾನೆ. ಅದು ಕೆಲಗಿದ್ದ ಶಿವಲಿಂಗದ ಮೇಲೆ ಬೀಳುತ್ತದೆ. ಮುಂಜಾನೆ ಎದ್ದು ನೋಡಿದಾಗ ಕನಸು ನಿಜವೆನ್ನುವಂತೆ ಶಿವಲಿಂಗ ಕಾಣುತ್ತದೆ. ಅದನ್ನು ನೋಡಿದ ಕಣ್ಣಪ್ಪ ಆನಂದಭರಿತನಾಗಿ ಮುಗ್ಧಮನಸ್ಸಿನಿಂದ ಶಿವಲಿಂಗವನ್ನು ಅಪ್ಪಿ ಎಳೆಯ ಮಕ್ಕಳನ್ನು ಮುದ್ದಾಡುವಂತೆ ತಪ್ಪಿ ಮುದ್ದಾಡಿ ಮಾತನಾಡಿಸಿ ಪೂಜಾಕೈಂಕರ್ಯವನ್ನರ್ಪಿಸುತ್ತಾನೆ.

ಶಿವನಿಗೆ ಆಹಾರವಾಗಿ ಜಿಂಕೆಯ ಮಾಂಸವನ್ನು ಬೇಯಿಸಿ ತಂದು, ರುಚಿ ನೋಡಿ ಎಂಜಲು ಮಾಡಿದ ಮಾಂಸವನ್ನೇ ಶಿವನ ಪಾದದಡಿಯಿಡುತ್ತಾನೆ. ಲಿಂಗದ ತಲೆಯ ಮೇಲಿದ್ದ ಹೂವುಗಳನ್ನು ತನ್ನ ಕಾಲಿನಿಂದಲೇ ನೂಕಿ ತನ್ನ ಬಾಯಲ್ಲಿ ನೀರನ್ನು ತುಂಬಿ ತಂದು ಲಿಂಗಕ್ಕೆ ಅಭಿಷೇಕ ಮಾಡಿ ತಾನು ಮುಡಿದಿದ್ದ ಹೂಗಳನ್ನೇ ಹಾಕಿ ಮಾಂಸವನ್ನು ನೈವೇದ್ಯ ಮಾಡುತ್ತಾನೆ. ಕಣ್ಣಪ್ಪನ ನಿಸ್ವಾರ್ಥ ಭಕ್ತಿಯಿಂದ ಮಾಡಿದ ಈ ಪೂಜೆಯಿಂದ ಶಿವ ಸಂಪ್ರೀತನಾಗುತ್ತಾನೆ. ಅಷ್ಟೇ ಅಲ್ಲ ಬೇಡರ ಕಣ್ಣಪ್ಪನ ಪೂಜೆ ನೋಡಿದ ದೇವಸ್ಥಾನದ ಅರ್ಚಕ ಕಣ್ಣಪ್ಪನನ್ನು ಶಿಕ್ಷಿಸಲು ಮುಂದಾಗುತ್ತಾನೆ. ಆಗ ಶಿವಲಿಂಗದ ಒಂದು ಕಣ್ಣಿನಿಂದ ನೀರು ಹರಿಯುತ್ತೆ. ಶಿವನ ದುಃಖಕ್ಕೆ ಕಾರಣವನ್ನು ತಿಳಿಯದ ಕಣ್ಣಪ್ಪ ಪೇಚಾಡಿ ಇದು ಏನೋ ಕಣ್ಣಿನ ರೋಗವಿರಬೇಕೆಂದು ತನ್ನ ಕಣ್ಣನ್ನು ಬಾಣದ ಕೊನೆಯಿಂದ ಕಿತ್ತು ನೀರೊಸರುತ್ತಿದ್ದ ಶಿವನ ಕಣ್ಣಿದ್ದ ಕಡೆ ಇಡುತ್ತಾನೆ. ಕ್ಷಣದಲ್ಲಿ ಕಣ್ಣೀರು ನಿಲ್ಲುತ್ತದೆ. ಆದರೆ ಶಿವನ ಇನ್ನೊಂದು ಕಣ್ಣಿನಿಂದ ನೀರು ಬರಲು ಪ್ರಾರಂಭವಾಗುತ್ತದೆ. ಆಗ ಕಣ್ಣಪ್ಪ ತನ್ನ ಕಾಲಿನ ಉಂಗುಷ್ಠವನ್ನು ಗುರುತಿಗಾಗಿ ಶಿವನ ಕಣ್ಣಿನ ಬಳಿಯಿಟ್ಟುಕೊಂಡು ತನ್ನ ಇನ್ನೊಂದು ಕಣ್ಣನ್ನೂ ಕೀಳಲು ಉದ್ಯುಕ್ತನಾಗುತ್ತಾನೆ. ಮುಗ್ಧ ಭಕ್ತನ ಅದ್ವಿತೀಯ ತ್ಯಾಗಕ್ಕೆ ಶಿವ ಪ್ರಸನ್ನನಾಗುತ್ತಾನೆ. ಕಣ್ಣಪ್ಪ ಕಳೆದುಕೊಂಡಿದ್ದ ಕಣ್ಣುಗಳನ್ನು ಮರಳಿ ನೀಡುತ್ತಾನೆ. ಈ ಕಥೆಯ ಮೂಲಕ ತಿಳಿಯುವುದೇನೆಂದರೆ ಶಿವನಿಗೆ ನೈವೇದ್ಯ ನೀಡಲು ಯಾವುದೇ ಕಟ್ಟು ಪಾಡುಗಳಿಲ್ಲ. ಭಕ್ತಿಯಿಂದ ಏನನ್ನು ನೀಡಿದರೂ ಶಿವ ಸ್ವೀಕರಿಸುತ್ತಾನೆ.

ಬೇಡರ ಕಣ್ಣಪ್ಪಮಧ್ಯಪ್ರದೇಶದ ಉಜ್ಜಯಿನಿ ಕಾಲ ಭೈರವ ದೇವಾಲಯ, ದೆಹಲಿಯ ಕಾಳಿ ಮಾತಾ ದೇವಾಲಯ, ಪಂಜಾಬ್​ನ ಪಟಿಯಾಲ ಕಾಳಿ ದೇವಸ್ಥಾನ, ಅಸ್ಸಾಂನ ಕಾಮಾಖ್ಯ ದೇವಾಲಯ, ಗೋವಾದ ಕಮಲೇಶ್ವರ ಮಹಾದೇವ ದೇವಸ್ಥಾನ ಸೇರಿದಂತೆ ದೇಶಾದ್ಯಂತ ಹತ್ತಾರು ಶಿವ-ಪಾರ್ವತಿಯ ದೇವಾಲಯಗಳಲ್ಲಿ ಮಾಂಸ ನೈವೇದ್ಯ ಇಡಲಾಗುತ್ತೆ. ಶಿವನ ಎಲ್ಲವನ್ನೂ ಸ್ವೀಕರಿಸಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ. ಅದೇ ರೀತಿ ಪಾರ್ವತಿ ಕೂಡ ಶಿವನ ಸ್ವಭಾವಗಳನ್ನೇ ಹೊಂದಿದ್ದು ಪಾರ್ವತಿಯ ಇತರೆ ರೂಪಗಳಾದ ಕಾಳಿ, ಮಾರಮ್ಮ ದೇವಸ್ಥಾನಗಳಲ್ಲೂ ಬಲಿ ಕೊಡುವ ಪದ್ಧತಿ ಇದೆ.

ಪಾರ್ವತಿಯನ್ನು ಪರೀಕ್ಷಿಸಲು ಅಘೋರಿ ವೇಶದಲ್ಲಿ ಬಂದ ಶಿವ ಮಾಂಸ ನೈವೇದ್ಯವಿಟ್ಟಿದ್ದ

ಸತಿ ಮರಣದ ನಂತರ ಪರ್ವತ ರಾಜನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ. ಬಾಲ್ಯದಿಂದಲೇ ಶಿವ ಅಂದ್ರೆ ಬಲು ಪ್ರೀತಿ. ಶಿವನನ್ನು ಒರಿಸಲು ಕಠಿಣ ತಪ್ಪಸ್ಸುಗಳನ್ನೆಲ್ಲ ಮಾಡಿದ್ದಾಳೆ ಎಂಬ ಬಗ್ಗೆ ನಾವು ಪುರಾಣಗಳಲ್ಲಿ ಓದಿದ್ದೇವೆ. ಇದೇ ರೀತಿ ಮತ್ತೊಂದು ಕಥೆ ಇದೆ. ಹೀಗೊಮ್ಮೆ ಶಿವ ಪಾರ್ವತಿಯನ್ನು ಪರೀಕ್ಷಿಸಲು ಸಪ್ತಋಷಿಗಳೊಂದಿಗೆ ಅಘೋರಿ ವೇಷ ಧರಿಸಿ ಬಂದಿದ್ದ. ಈ ವೇಳೆ ಪಾರ್ವತಿ ಶಿವಲಿಂಗಕ್ಕೆ ಪೂಜೆ ಮಾಡಲು ಸನ್ನಧಳಾಗಿರುತ್ತಾಳೆ.

ಸಪ್ತಋಷಿಗಳು ಪಾರ್ವತಿ ಪೂಜೆ ಮಾಡುತ್ತಿರುವ ಶಿವಲಿಂಗದ ಜೊತೆ ತಾವು ಕೂಡ ಪೂಜೆ ಮಾಡುವುದಾಗಿ ತಿಳಿಸುತ್ತಾರೆ. ಬಳಿಕ ಈ ಶಿವಲಿಂಗ ನನ್ನದು, ನೀವು ನಿಮ್ಮ ಶಿವಲಿಂಗಗಳ ಜೊತೆ ಪೂಜೆ ಮಾಡಿ ಎನ್ನುತ್ತಾಳೆ. ಶಿವ ಅಥವಾ ಶಿವಲಿಂಗದ ಮೇಲೆ ಯಾರಿಗೂ ಹಕ್ಕಿಲ್ಲ ಎಂದು ವೇಷಧಾರಿ ಶಿವ ಹೇಳುತ್ತಾನೆ. ಶಿವ ಎಲ್ಲರಿಗೂ ಸೇರಿದವನು ಎಂದು ಹೇಳುತ್ತ ಶಿವಲಿಂಗದ ಪೂಜೆಯನ್ನು ಮುಂದುವರೆಸುತ್ತಾನೆ. ಈ ವೇಳೆ ತನ್ನ ಚೀಲದಿಂದ ಹಸಿ ಮಾಂಸವನ್ನು ತೆಗೆದು ಶಿವಲಿಂಗದ ಮೇಲೆ ಇಟ್ಟು, ಶಿವಾ ನಾನು ನಿನಗಾಗಿ ತಾಜಾ ಹಸಿ ಮಾಂಸವನ್ನು ತಂದಿದ್ದೇನೆ. ಅದನ್ನು ಸ್ವೀಕರಿಸಿ ಎನ್ನುತ್ತಾನೆ. ಇದು ಪಾರ್ವತಿಗೆ ಕೋಪ ತರಿಸುತ್ತದೆ. ಶಿವನು ಮಾಂಸವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾಳೆ. ನೀನು ಶಿವಭಕ್ತ ಎಂದು ಕರೆದುಕೊಳ್ಳುವುದನ್ನು ಈಗಿನಿಂದಲೇ ನಿಲ್ಲಿಸಬೇಕು ಎನ್ನುತ್ತಾಳೆ. ಆಗ ಅಘೋರಿ ಪಾರ್ವತಿಗೆ ಎದುರು ನುಡಿದು ನೀನು ಕೇವಲ ಶಿವಲಿಂಗದಲ್ಲಿ ಶಿವನನ್ನು ನೋಡುತ್ತಿದ್ದೀಯಾ. ಶಿವನೇ ಈ ನನ್ನ ಮಾಂಸ ನೈವೇದ್ಯವನ್ನು ಸ್ವೀಕರಿಸಿ ನನ್ನ ಭಕ್ತಿಯನ್ನು ತೋರಿಸು ಎಂದು ಶಿವಲಿಂಗಕ್ಕೆ ಬೇಡುತ್ತಾನೆ. ಆಗ ಮಾಂಸ ಮಾಯವಾಗುತ್ತೆ. ಈ ಮೂಲಕ ಪಾರ್ವತಿಗೆ ಭಕ್ತಿಯ ನಿಜವಾದ ರೂಪ ತಿಳಿಯುತ್ತೆ.

ಸ್ಮಶಾನವಾಸಿ ಶಿವನಿಗೆ ಸುಟ್ಟ ಶವದ ಬೂದಿ ಪ್ರಿಯ

 

ಶಿವ ಸ್ಮಶಾನ ವಾಸಿ. ಸತ್ತವರನ್ನು ಸುಡುವ ಈ ಜಾಗಕ್ಕೂ, ಶಿವನಿಗೂ ಆವಿನಾಭಾವ ಸಂಬಂಧವಿದೆ. ಇಂಥ ಸತ್ತವರ ಬೂದಿಯೇ ಶಿವನಿಗೆ ಪ್ರಿಯವಾದ ಭಸ್ಮ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಜ್ಯೋತಿರ್ಲಿಂಗಕ್ಕೆ ಆಗಷ್ಟೇ ಬೆಂಕಿ ಇಟ್ಟು ಸುಟ್ಟ ಶವದ ಭಸ್ಮವನ್ನೂ ತೆಗೆದುಕೊಂಡು ಹೋಗಿ ಅಭಿಷೇಕವನ್ನು ನಾಗಸಾಧುಗಳು ಮಾಡುತ್ತಾರೆ.

ಶಿವನು ಗ್ರಹಸ್ಥನಾದರೂ ಸ್ಮಶಾನದಲ್ಲೇ ಹೆಚ್ಚಾಗು ವಾಸಿಸೋದು. ಕೈಲಾಸ ಬಿಟ್ಟರೆ ಸ್ಮಶಾನವೇ ಅವನ ಪ್ರಿಯವಾದ ಜಾಗ. ಇಡೀ ಜಗತ್ತು ಅಥವಾ ಕುಟುಂಬ ಭ್ರಮೆಯ ಸಂಕೇತ. ಆದರೆ, ಸ್ಮಶಾನವನ್ನು ಶಾಂತತೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸ್ಮಶಾನವು ಜೀವನದ ಜಂಜಾಟ ಮತ್ತು ಗದ್ದಲದ ಅಂತ್ಯ ಎನ್ನಲಾಗುತ್ತೆ. ಸನಾತನ ಧರ್ಮದಲ್ಲಿ, ಈ ಚಿಂತನೆಯನ್ನು ಕ್ಷಣಿಕ ನಿರಾಸಕ್ತಿ ಎಂದು ಕರೆಯಲಾಗುತ್ತದೆ. ಭಗವಾನ್ ಶಿವನು ಸ್ಮಶಾನದಲ್ಲಿ ಉಳಿಯುವುದರ ಹಿಂದೆ ಪ್ರತಿಯೊಂದು ಜೀವಿಯ ಜೀವನ ನಿರ್ವಹಣೆಯ ಸೂತ್ರವು ಅಡಗಿದೆ.

ಬ್ರಹ್ಮ ಜಗತ್ತನ್ನು ಸೃಷ್ಟಿಸುತ್ತಾನೆ. ಭಗವಾನ್ ವಿಷ್ಣು ಜಗತ್ತನ್ನು ನಿರ್ವಹಿಸುತ್ತಾನೆ. ಆದರೆ, ಶಿವನು ಕಲಿಯುಗದ ಕೊನೆಯಲ್ಲಿ ಬ್ರಹ್ಮಾಂಡವನ್ನು ನಾಶಪಡಿಸುತ್ತಾನೆ. ಅದೇ ಸಮಯದಲ್ಲಿ, ಜೀವನವು ಸ್ಮಶಾನದಲ್ಲಿ ಕೊನೆಗೊಳ್ಳುತ್ತದೆ. ಶಿವನು ವಾಸಿಸುವ ಸ್ಮಶಾನದಲ್ಲಿ, ಮಾನವ ದೇಹ, ಆ ದೇಹಕ್ಕೆ ಸಂಬಂಧಿಸಿದ ಎಲ್ಲಾ ಸಂಬಂಧಗಳು, ಪ್ರತಿ ಬಾಂಧವ್ಯ ಮತ್ತು ಎಲ್ಲಾ ರೀತಿಯ ಬಂಧಗಳು ಕೊನೆಗೊಳ್ಳುತ್ತವೆ. ಜೀವಿಗಳ ಮರಣದ ನಂತರ, ಆತ್ಮವು ಶಿವನಲ್ಲಿ ಮಾತ್ರ ವಿಲೀನಗೊಳ್ಳುತ್ತದೆ. ಅದಕ್ಕಾಗಿಯೇ ಶಿವನು ಸ್ಮಶಾನದಲ್ಲಿ ನೆಲೆಸಿದ್ದಾನೆ.

ಇನ್ನು ಸಾವಿನ ಅಧಿಪತಿ ಶಿವನ ಪ್ರಕಾರ, ದೇಹವು ನಶ್ವರ. ಈ ದೇಹ ಒಂದಲ್ಲಾ ಒಂದು ದಿನ ಸುಟ್ಟ ಬೂದಿಯಾಗುವಂತಹದ್ದು. ಜೀವನದ ಈ ಹಂತವನ್ನು ಗೌರವಿಸಬೇಕು. ಹೀಗಾಗಿ ತನ್ನ ದೇಹದ ಮೇಲೆ ಬೂದಿಯನ್ನು ಲೇಪಿಸುವ ಮೂಲಕ ಗೌರವವನ್ನು ತೋರಿಸುತ್ತಾನೆ. ಈ ನಶ್ವರ ದೇಹದ ಬಗ್ಗೆ ಎಂದಿಗೂ ಹೆಮ್ಮೆ ಪಡಬಾರದು ಎನ್ನುವ ಸಂದೇಶವನ್ನು ಇಲ್ಲಿ ನೀಡಲಾಗಿದೆ. ಶಿವನು ಚಿತಾಭಸ್ಮವನ್ನು ಅನ್ವಯಿಸುವ ಮೂಲಕ ಅದರ ಶುದ್ಧತೆಯನ್ನು ಗೌರವಿಸುತ್ತಾನೆ. ಮೃತದೇಹವನ್ನು ಸುಟ್ಟ ನಂತರ ಉಳಿದ ಬೂದಿಯಲ್ಲಿ ಅದರ ದುಃಖ, ಸುಖ, ಕೆಡುಕು, ಒಳ್ಳೆಯತನ ಸುಟ್ಟು ಹೋಗುತ್ತವೆ. ಅದಕ್ಕಾಗಿಯೇ ಶಿವನು ಚಿತೆಯ ಭಸ್ಮವನ್ನು ಪವಿತ್ರವೆಂದು ಧರಿಸುತ್ತಾನೆ ಎಂದು ಶ್ರೀ ವೆಂಕಟರಮಣ ಸ್ವಾಮಿಗಳು ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್ ಗೆ ತಿಳಿಸಿದ್ದಾರೆ.

ಶಿವನನ್ನು ಆರಾಧಿಸುವ ಅಘೋರಿಗಳ ಬದುಕು ನಿಗೂಢ

ಶ್ವೇತಾಶ್ವತರೋಪನಿಷತ್ತಿನಲ್ಲಿ ಶಿವನನ್ನು ಅಘೋರನಾಥ ಎಂದು ಕರೆಯಲಾಗಿದೆ. ಅಘೋರಿ ಬಾಬಾ ಕೂಡ ಶಿವನ ಈ ರೂಪವನ್ನು ಪೂಜಿಸುತ್ತಾರೆ. ಬಾಬಾ ಭೈರವನಾಥನನ್ನು ಅಘೋರಿಗಳು ಪೂಜಿಸುತ್ತಾರೆ. ಅಘೋರಿಗಳು ಹಸಿ ಮಾಂಸವನ್ನು ತಿನ್ನುತ್ತಾರೆ, ಸ್ಮಶಾನಗಳಲ್ಲಿ ವಾಸಿಸುತ್ತಾರೆ. ಮೃತದೇಹದ ಬಳಿ ಕುಳಿತು ಸಾಧನೆಯನ್ನೂ ಮಾಡುತ್ತಾರೆ. ಅವರ ಪ್ರಕಾರ ಈ ಮೃತ ದೇಹ ಶಿವಪ್ರಾಪ್ತಿಗೆ ದಾರಿ ಎನ್ನಲಾಗುತ್ತೆ. ಅವರು ತಮ್ಮ ಧ್ಯಾನದಲ್ಲಿ ಶಿವನಿಗೆ ಮೃತದೇಹದ ಮಾಂಸ ಮತ್ತು ಮದ್ಯವನ್ನು ಅರ್ಪಿಸುತ್ತಾರೆ. ಒಂದೇ ಕಾಲಿನ ಮೇಲೆ ನಿಂತು, ಶಿವನನ್ನು ಪೂಜಿಸುತ್ತಾರೆ. ಸತ್ತ ದೇಹದ ತಲೆ ಬುರುಡೆಗಳನ್ನು ಪಾತ್ರೆಗಳಾಗಿ ಬಳಸುತ್ತಾರೆ.

Published On - 12:17 pm, Mon, 8 April 24