Pradosh Vrat 2023: ಪ್ರದೋಷ ವ್ರತ ಆಚರಣೆಯ ಮಹತ್ವವೇನು? ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 14, 2023 | 10:47 AM

ಈ ಭಾರಿಯ ಶನಿ ಪ್ರದೋಷ ವ್ರತದ ಬಗ್ಗೆ ತಿಳಿದಿದೆಯಾ? ಹೇಗೆ ಆಚರಣೆ ಮಾಡಲಾಗುತ್ತದೆ? ಪೂಜಾ ಸಮಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Pradosh Vrat 2023: ಪ್ರದೋಷ ವ್ರತ ಆಚರಣೆಯ ಮಹತ್ವವೇನು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಪ್ರದೋಷ ವ್ರತ ಅಥವಾ ಪ್ರದೋಷವು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ಜನಪ್ರಿಯ ಹಿಂದೂ ವ್ರತ. ಪ್ರದೋಷ ವ್ರತವನ್ನು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ತ್ರಯೋದಶಿ ತಿಥಿಯಲ್ಲಿ (13 ನೇ ದಿನ) ಆಚರಿಸಲಾಗುತ್ತದೆ. ಆದ್ದರಿಂದ, ಇದು ಹಿಂದೂ ಕ್ಯಾಲೆಂಡರ್​​ನಲ್ಲಿ ಪ್ರತಿ ತಿಂಗಳು ಎರಡು ಬಾರಿ ಬರುತ್ತದೆ. ಈ ಭಾರಿಯ ಪ್ರದೋಷ ವ್ರತ ಜುಲೈ 15, ಶನಿವಾರದಂದು ಬಂದಿದೆ. ಮುಂದಿನ ಪ್ರದೋಷ ವ್ರತವನ್ನು ಜುಲೈ 30ರ ಭಾನುವಾರದಂದು ಆಚರಣೆ ಮಾಡಲಾಗುತ್ತದೆ.

ಜುಲೈ 15, ಶನಿವಾರದಂದು ಪ್ರದೋಷ ವ್ರತ ತಿಥಿ ಮತ್ತು ಪೂಜಾ ಸಮಯ:

ಸೂರ್ಯೋದಯ 05:54 AM, ಸೂರ್ಯಾಸ್ತ 07:11 PM, ತ್ರಯೋದಶಿ ತಿಥಿ ಪ್ರಾರಂಭ 14 ಜುಲೈ 07:17 PM, ತ್ರಯೋದಶಿ ತಿಥಿ ಅಂತ್ಯ 15 ಜುಲೈ, 08:33 PM, ಪ್ರದೋಷ ವ್ರತದ ಪೂಜಾ ಸಮಯ ಜುಲೈ 15ರ ಸಂಜೆ 7:11 ರಿಂದ ರಾತ್ರಿ 9:20ರ ವರೆಗೆ. ಪ್ರದೋಷ ವ್ರತವನ್ನು ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರೂ ಆಚರಿಸಬಹುದು. ದೇಶದ ವಿವಿಧ ಭಾಗಗಳಲ್ಲಿನ ಜನರು ಈ ವ್ರತವನ್ನು ಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಆಚರಿಸುತ್ತಾರೆ. ಈ ವ್ರತವನ್ನು ಶಿವ ಮತ್ತು ದೇವಿ ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಕೆಲವು ಭಾಗಗಳಲ್ಲಿ, ನೃತ್ಯ ಕಲಿತ ಪಾರಂಗತರು ಈ ದಿನದಂದು ಶಿವನ ನಟರಾಜ ರೂಪವನ್ನು ಪೂಜಿಸುತ್ತಾರೆ. ಸ್ಕಂದ ಪುರಾಣದ ಪ್ರಕಾರ ಪ್ರದೋಷ ವ್ರತದಲ್ಲಿ ಉಪವಾಸ ಮಾಡಲು ಎರಡು ವಿಭಿನ್ನ ವಿಧಾನಗಳಿವೆ. ಮೊದಲ ವಿಧಾನದಲ್ಲಿ, ಭಕ್ತರು ಇಡೀ ಹಗಲು ಮತ್ತು ರಾತ್ರಿ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ, ಅಂದರೆ 24 ಗಂಟೆಗಳ ಕಾಲ ಮತ್ತು ರಾತ್ರಿ ಸಮಯದಲ್ಲಿ ಜಾಗರಣೆ ಮಾಡುವುದನ್ನು ಸಹ ಒಳಗೊಂಡಿದೆ. ಎರಡನೆಯ ವಿಧಾನದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸಲಾಗುತ್ತದೆ, ಮತ್ತು ಸಂಜೆ ಶಿವನನ್ನು ಪೂಜಿಸಿದ ನಂತರ ಉಪವಾಸವನ್ನು ಮುರಿಯಲಾಗುತ್ತದೆ.

ಪ್ರದೋಷ ವ್ರತ ಎಂದರೇನು?

ಹಿಂದಿಯಲ್ಲಿ ‘ಪ್ರದೋಷ’ ಎಂಬ ಪದದ ಅರ್ಥ ‘ಸಂಜೆಗೆ ಸೇರುವುದು ಅಥವಾ ಸಂಬಂಧಿಸುವುದು’ ಅಥವಾ ‘ರಾತ್ರಿಯ ಮೊದಲ ಭಾಗ’ ಎಂಬುದಾಗಿದೆ. ಹಾಗಾಗಿ ಈ ಪವಿತ್ರ ವ್ರತವನ್ನು ಸಂಧ್ಯಾಕಾಲದ ಸಮಯದಲ್ಲಿ ಅಂದರೆ ಸಂಜೆಯ ಸಮಯದಲ್ಲಿ ಆಚರಿಸಲಾಗುವುದರಿಂದ, ಇದನ್ನು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ಪ್ರದೋಷದ ಶುಭ ದಿನದಂದು, ಶಿವನು ಪಾರ್ವತಿ ದೇವಿಯೊಂದಿಗೆ ಅತ್ಯಂತ ಸಂತೋಷ ಸಮಯವನ್ನು ಕಳೆಯುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಶಿವನ ಅನುಯಾಯಿಗಳು ಈ ಉಪವಾಸವನ್ನು ಆಚರಿಸುತ್ತಾರೆ ಮತ್ತು ದೈವಿಕ ಆಶೀರ್ವಾದವನ್ನು ಪಡೆಯಲು, ಈ ಶುಭದಿನದಂದು ದೇವರನ್ನು ಪೂಜಿಸುತ್ತಾರೆ.

ಪ್ರದೋಷ ವ್ರತ ಆಚರಣೆಗಳು ಮತ್ತು ಪೂಜೆ:

ಪ್ರದೋಷದ ದಿನದಂದು, ಸಂಧ್ಯಾಕಾಲದಲ್ಲಿ ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸ್ವಲ್ಪ ಮುಂಚಿನ ಸಮಯವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಪ್ರಾರ್ಥನೆಗಳು ಮತ್ತು ಪೂಜೆಗಳನ್ನು ಈ ಸಮಯದಲ್ಲಿ ಮಾಡಲಾಗುತ್ತದೆ. ಸೂರ್ಯಾಸ್ತಕ್ಕೆ ಒಂದು ಗಂಟೆ ಮುಂಚಿತವಾಗಿ, ಭಕ್ತರು ಸ್ನಾನ ಮಾಡಿ ಪೂಜೆಗೆ ಸಿದ್ಧರಾಗುತ್ತಾರೆ. ಬಳಿಕ ಪೂಜೆಯನ್ನು ನಡೆಸಲಾಗುತ್ತದೆ, ಅಲ್ಲಿ ಶಿವನನ್ನು ಪಾರ್ವತಿ, ಗಣೇಶ, ಕಾರ್ತಿಕ ಮತ್ತು ನಂದಿಯನ್ನು ಪೂಜಿಸಲಾಗುತ್ತದೆ. ಕೆಲವರು ಶಿವನನ್ನು ಪವಿತ್ರ ‘ಕಲಶ’ದಲ್ಲಿ ಪೂಜಿಸುತ್ತಾರೆ. ಈ ಕಲಶವನ್ನು ದರ್ಬೆ ಹುಲ್ಲಿನ ಮೇಲೆ ಇರಿಸಲಾಗುತ್ತದೆ, ಅದರ ಮೇಲೆ ಕಮಲದ ಹೂ ಇಟ್ಟು ಅದನ್ನು ನೀರಿನಿಂದ ತುಂಬಿ ಪೂಜೆ ಮಾಡಲಾಗುತ್ತದೆ. ಇನ್ನು ಕೆಲವು ಸ್ಥಳಗಳಲ್ಲಿ, ಶಿವಲಿಂಗದ ಪೂಜೆಯನ್ನು ಸಹ ನಡೆಸಲಾಗುತ್ತದೆ. ಶಿವಲಿಂಗಕ್ಕೆ ಹಾಲು, ಮೊಸರು ಮತ್ತು ತುಪ್ಪದಿಂದ ನೈವೇದ್ಯ ಮಾಡಲಾಗುತ್ತದೆ. ಬಳಿಕ ಪೂಜೆ ನಡೆಸಲಾಗುತ್ತದೆ. ಭಕ್ತರು ಶಿವಲಿಂಗದ ಮೇಲೆ ಬಿಲ್ವ ಪತ್ರೆಯನಿಟ್ಟು ಅರ್ಪಿಸುತ್ತಾರೆ. ಕೆಲವರು ಶಿವನ ಚಿತ್ರಕ್ಕೂ ಪೂಜೆ ಮಾಡುತ್ತಾರೆ. ಪ್ರದೋಷ ವ್ರತದ ದಿನದಂದು ಬಿಲ್ವ ಎಲೆಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಈ ಆಚರಣೆಯ ನಂತರ, ಭಕ್ತರು ಪ್ರದೋಷ ವ್ರತ ಕಥೆಯನ್ನು ಕೇಳುತ್ತಾರೆ ಅಥವಾ ಶಿವ ಪುರಾಣದ ಕಥೆಗಳನ್ನು ಓದುತ್ತಾರೆ. ಇಲ್ಲವಾದಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಮಂತ್ರ ಪಠಣ ಮಾಡಬಹುದು. ಪೂಜೆಯ ನಂತರ, ಹೆಚ್ಚಿನ ಭಕ್ತರು ಶಿವನ ದೇವಾಲಯಗಳಿಗೆ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಅದಲ್ಲದೆ ಪ್ರದೋಷದ ದಿನದಂದು ಒಂದೇ ಒಂದು ದೀಪವನ್ನು ಬೆಳಗಿಸುವುದು ತುಂಬಾ ಲಾಭದಾಯಕ ಎಂದು ನಂಬಲಾಗಿದೆ.

ಇದನ್ನೂ ಓದಿ: ಪ್ರತಿ ತಿಂಗಳು ಆಚರಿಸಲಾಗುವ ಪ್ರದೋಷ ವ್ರತದ ಮಹತ್ವ, ಪೂಜಾ ವಿಧಿವಿಧಾನ ಹೇಗೆ?

ಪ್ರದೋಷ ವ್ರತದ ಮಹತ್ವ:

ಪ್ರದೋಷ ವ್ರತದ ಪ್ರಯೋಜನಗಳನ್ನು ಸ್ಕಂದ ಪುರಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಉಪವಾಸವನ್ನು ಭಕ್ತಿ ಮತ್ತು ನಂಬಿಕೆಯಿಂದ ಆಚರಿಸುವವನು ಸಂತೃಪ್ತಿ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ಉನ್ನತಿಗಾಗಿ ಮತ್ತು ಆಸೆಗಳ ಈಡೇರಿಕೆಗಾಗಿ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಹಿಂದೂ ಧರ್ಮಗ್ರಂಥಗಳು ಬಹಳವಾಗಿ ಶ್ಲಾಘಿಸಿವೆ ಮತ್ತು ಶಿವನ ಅನುಯಾಯಿಗಳು ಇದನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಶುಭ ದಿನದಂದು ದೇವರ ಕೃಪೆಗೆ ಪಾತ್ರರಾದರೆ ನಿಮ್ಮ ಎಲ್ಲಾ ಪಾಪಗಳಿಂದ ಮುಕ್ತಿ ದೊರೆತು. ಸಮೃದ್ಧ ಆಶೀರ್ವಾದ, ಅದೃಷ್ಟ ನಿಮ್ಮ ಪಾಲಾಗುವುದು ನಿಶ್ಚಿತ.

ಪ್ರದೋಷ ವ್ರತದ ಪ್ರಯೋಜನಗಳು ಅದು ಬರುವ ವಾರಕ್ಕೆ ಅನುಗುಣವಾಗಿ ಬದಲಾಗುತ್ತವೆ. ಪ್ರದೋಷ ವ್ರತದ ವಿವಿಧ ಹೆಸರುಗಳು ಮತ್ತು ಸಂಬಂಧಿತ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೋಮ ಪ್ರದೋಷ ವ್ರತ: ಇದು ಸೋಮವಾರದಂದು ಬರುತ್ತದೆ ಹಾಗಾಗಿ ಇದನ್ನು ‘ಸೋಮ ಪ್ರದೋಷ’ ಎಂದು ಕರೆಯಲಾಗುತ್ತದೆ. ಈ ದಿನದಂದು ವ್ರತವನ್ನು ಆಚರಿಸುವುದರಿಂದ ಭಕ್ತರು ಸಕಾರಾತ್ಮಕ ಚಿಂತಕರಾಗುತ್ತಾರೆ ಮತ್ತು ಅವರ ಎಲ್ಲಾ ಆಸೆಗಳು ಈಡೇರುತ್ತವೆ.

ಭೌಮ್ ಪ್ರದೋಷ ವ್ರತ: ಮಂಗಳವಾರದಂದು ಪ್ರದೋಷ ಬಂದಾಗ ಅದನ್ನು ‘ಭೌಮ್ ಪ್ರದೋಷ’ ಎಂದು ಕರೆಯಲಾಗುತ್ತದೆ. ಈ ದಿನ ವ್ರತ ಮಾಡುವುದರಿಂದ ಭಕ್ತರು ತಮ್ಮ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾರೆ ಮತ್ತು ಅವರ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಭೌಮ್ ಪ್ರದೋಷ ವ್ರತವು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಸೌಮ್ಯ ವಾರ ಪ್ರದೋಷ ವ್ರತ: ಸೌಮ್ಯ ವಾರಾ ಪ್ರದೋಷ ಅಂದರೆ ಬುಧವಾರದಂದು ಬರುತ್ತದೆ. ಈ ಶುಭ ದಿನದಂದು ಭಕ್ತರು ತಮ್ಮ ಆಸೆಗಳ ಈಡೇರಿಕೆಗಾಗಿ ವ್ರತ ಆಚರಿಸುತ್ತಾರೆ. ಇದರ ಜೊತೆಗೆ ಹೆಚ್ಚು ಜ್ಞಾನ ಮತ್ತು ಬುದ್ಧಿವಂತಿಕೆ ಸಂಪಾದನೆ ಮಾಡಬೇಕು ಎಂದಿರುವವರು ಈ ದಿನ ವ್ರತ ಆಚರಣೆ ಮಾಡಬಹುದು.

ಗುರುವಾರ ಪ್ರದೋಷ ವ್ರತ: ಇದು ಗುರುವಾರ ಬರುತ್ತದೆ ಮತ್ತು ಈ ಉಪವಾಸವನ್ನು ಆಚರಿಸುವ ಮೂಲಕ, ಭಕ್ತರು ತಮಗೆ ಬರುವ ಎಲ್ಲಾ ಅಪಾಯಗಳು ಬರದಿರುವಂತೆ ದೇವರಲ್ಲಿ ಮೊರೆ ಹೋಗುತ್ತಾರೆ. ಇದಲ್ಲದೆ ಗುರುವಾರ ಪ್ರದೋಷ ವ್ರತವು ಪಿತೃ ಅಥವಾ ಪೂರ್ವಜರ ಆಶೀರ್ವಾದ ಲಭ್ಯವಾಗುತ್ತದೆ.

ಭೃಗು ವಾರ ಪ್ರದೋಷ ವ್ರತ: ಶುಕ್ರವಾರದಂದು ಪ್ರದೋಷ ವ್ರತವನ್ನು ಆಚರಿಸಿವುದನ್ನು, ‘ಭೃಗು ವಾರ ಪ್ರದೋಷ ವ್ರತ’ ಎಂದು ಕರೆಯಲಾಗುತ್ತದೆ. ಈ ವ್ರತವು ನಿಮ್ಮ ಜೀವನದಿಂದ ನಕಾರಾತ್ಮಕತೆಗಳನ್ನು ತೆಗೆದು ಹಾಕುವ ಮೂಲಕ ನಿಮ್ಮ ಬದುಕಿನ ಕೊನೆವರೆಗೆ ಸಂತೃಪ್ತಿ ಮತ್ತು ಯಶಸ್ಸನ್ನು ತರುತ್ತದೆ.

ಶನಿ ಪ್ರದೋಷ ವ್ರತ: ಶನಿವಾರದಂದು ಬರುವ ಶನಿ ಪ್ರದೋಷ ವ್ರತವನ್ನು ಎಲ್ಲಾ ಪ್ರದೋಷ ವ್ರತಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ವ್ರತವನ್ನು ಆಚರಿಸುವ ವ್ಯಕ್ತಿಯು ತನ್ನ ಕಳೆದುಹೋದ ಸಂಪತ್ತನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ ಜೊತೆಗೆ ಉದ್ಯೋಗದಲ್ಲಿ ಬಡ್ತಿಯನ್ನು ಪಡೆಯುತ್ತಾನೆ.

ಭಾನು ವಾರ ಪ್ರದೋಷ ವ್ರತ: ಇದು ಭಾನುವಾರದಂದು ಬರುತ್ತದೆ ಮತ್ತು ಭಾನು ವಾರದ ಪ್ರದೋಷ ವ್ರತದ ಪ್ರಯೋಜನವೆಂದರೆ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ದೀರ್ಘಾಯುಷ್ಯ ಮತ್ತು ಮನಸ್ಸಿಗೆ ಶಾಂತಿಯನ್ನು ಪಡೆಯುತ್ತಾರೆ.

ಮತ್ತಷ್ಟು ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.