ಸನಾತನ ಪರಂಪರೆಯ ಪ್ರಕಾರ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ತಾತ್ವಿಕ ಮಹತ್ವವಿದೆ. ಅದೇ ರೀತಿ ಮಾಸಕ್ಕನುಗುಣವಾಗಿ ಹಬ್ಬಗಳು ಬರುತ್ತವೆ. ಅದರಲ್ಲಿ ಮಾಸದ ವೈಶಿಷ್ಟ್ಯವೂ ಇರುತ್ತದೆ. ಅಂತಹ ಹಬ್ಬಗಳಲ್ಲಿ ಒಂದಾದ ಶಿವರಾತ್ರಿಯ ಬಗ್ಗೆ ಚಿಂತನೆ ಮಾಡೋಣ. ಮಾಘಮಾಸದ ಕೃಷ್ಣದ ಪಕ್ಷದ ತ್ರಯೋದಶಿ ತಿಥಿಯ ರಾತ್ರಿ ಕಾಲವನ್ನು ಶಿವರಾತ್ರಿ ಎಂದು ಕರೆಯುತ್ತಾರೆ. ಇದು ಅಪುರೂಪಕ್ಕೆ ಚತುರ್ದಶಿಯಂದೂ ಬರುವ ಸಾಧ್ಯತೆಯಿದೆ. ಕಾರಣವೇನೆಂದರೆ ರಾತ್ರಿಕಾಲದಲ್ಲಿ ಚತುರ್ದಶಿ ಇರಬೇಕು ಶಿವರಾತ್ರಿಯ ಆಚರಣೆಗೆ. ಆದಕಾರಣ ಮಿತಿ / ತಿಥಿಗಳು ಕೆಲವು ಸಲ ಮುಂದೆ ಸಾಗುವ ಕ್ರಮವಿರುವುದರಿಂದ ದಿನಗಳಲ್ಲಿ ವೆತ್ಯಾಸ ಕಂಡುಬರುತ್ತದೆ.
ಶಿವ ಎಂಬ ಶಬ್ದದ ಅರ್ಥ ಮಂಗಲ ಎಂದು. ರಾತ್ರಿ ಅಂದರೆ ಕತ್ತಲು ಎಂದರ್ಥ. ಅರ್ಥಾತ್ ಒಟ್ಟಾರೆ ತಾತ್ಪರ್ಯ ಮಂಗಲಮಯವಾದ ರಾತ್ರಿ ಎಂದು. ಯಾಕೆ ಹೀಗೆ ಎಂದು ಸಂದೇಹ ಬರಬಹುದು. ಇಡೀ ಜಗತ್ತಿನ ದುಃಖ ನಾಶಮಾಡುವ ಶಕ್ತಿ ಶಿವನಿಗಿರುವುದು. ಅಂತಹ ಶಿವ ಪಾರ್ವತಿಯೊಂದಿಗೆ ಜಗತ್ತಿನ ಎಲ್ಲಾ ಚರಾಚರ ವಸ್ತುಗಳಲ್ಲಿ ಈ ರಾತ್ರಿಯಂದು ವಿಹರಿಸುತ್ತಾನೆ ಎಂಬುದು ಪುರಾಣದ ಮಾತು. ಈ ಮಾತಿನ ಮೇಲಿನ ನಂಬಿಕೆಯಿಂದ ಮಾಘ ಮಾಸದ ತ್ರಯೋದಶಿಯ ರಾತ್ರಿ ಶಿವಭಕ್ತರೆಲ್ಲರೂ ಅವನ ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುತ್ತಾರೆ.
ಶಾಸ್ತ್ರದ ಪ್ರಕಾರ ಶಿವ ಅಂದರೆ ಪುರುಷ. ಶಕ್ತಿಯೆಂದರೆ ಪಾರ್ವತಿ ಅರ್ಥಾತ್ ಸ್ತ್ರೀ. ಅದುವೇ ಪ್ರಕೃತಿ. ಪುರುಷ ಮತ್ತು ಪ್ರಕೃತಿಯ ಸಂಯೋಗ ಈ ರಾತ್ರಿ ನಡೆಯುತ್ತದೆ. ಇದೊಂದು ಅಲೌಕಿಕ ಕ್ಷಣ. ಅದನ್ನೇ ಶಾಸ್ತ್ರದಲ್ಲಿ ಹೀಗೆನ್ನುತ್ತಾರೆ ಶಿವಃ ಶಕ್ತ್ಯಾ ಯುಕ್ತಃ ಯದಿ ಭವತಿ ಶಕ್ತಃ ಅರ್ಥ ಹೀಗಿದೆ ಶಿವನು ಶಕ್ತಿ (ಪಾರ್ವತಿ)ಯೊಂದಿಗೆ ಜೊತೆಯಾಗಿರುವ ಸ್ಥಿತಿ ಯಾವಾಗ ಆಗುತ್ತದೋ ಆಗ ಜಗತ್ತು ಅತ್ಯಂತ ಪ್ರಭಾವವುಳ್ಳದ್ದಾಗುವುದು. ಅಂದರೆ ಅರ್ಧನಾರೀಶ್ವರ ಸ್ಥಿತಿಯಲ್ಲಿರುವಾಗ ಅಥವಾ ಪ್ರಕೃತಿ ಪುರುಷ ಸಂಯೋಗವಾದಾಗ ಅತ್ಯಂತ ಪುಣ್ಯಕಾಲ. ಆರಾತ್ರಿ ಶುಭಕರವಾದ ರಾತ್ರಿ ಅರ್ಥಾತ್ ಮಂಗಲರಾತ್ರಿ. ಅದನ್ನೇ ಶಿವರಾತ್ರಿ ಎನ್ನುವರು.
ಇದನ್ನೂ ಓದಿ: Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ
ಈ ಮೇಲಿನ ಕಾರಣದಿಂದಲೇ ಈ ರಾತ್ರಿಯಂದು ಒಣಗಿಸಿದ ಸಗಣಿಯನ್ನು ಉರಿಸಿ ಭಸ್ಮ ತಯಾರಿಸುವರು. ತಾತ್ಪರ್ಯ ಇಷ್ಟೇ ಪಂಚಭೂತಗಳ ಅನುಕೂಲದಿಂದ ಬದುಕುತ್ತಿರುವ ನಾವುಗಳು ನಾಳೆಯ ದಿನೇ ಇದೇ ರೀತಿ ಭಸ್ಮವಾಗುವೆವು. ಆದ ಕಾರಣ ಪಂಚಬ್ರಹ್ಮ ಸ್ವರೂಪನಾದ ಶಿವನ ಆರಾಧನೆ ಮಾಡಿರಿ ಎಂಬುದನ್ನು ನೆನಪಿಸುವುದರ ಸಲುವಾಗಿ ಮತ್ತು ತಾನೆಂಬ ಅಹಂಕಾರದ ನಾಶವಾಗಬೇಕು ಎಂಬ ಭಾವದ ಉದಯಕ್ಕಾಗಿ ಈ ಆಚರಣೆ ಅನೂಚಾನವಾಗಿ ಬಂದಿದೆ. ಅಲ್ಲದೇ ಗೋಮಯದಲ್ಲಿ ಬಹಿರಂಗದೊಂದಿಗೆ ಅಂತರಂಗ ಶುದ್ಧಿ ಮಾಡುವ ಶಕ್ತಿಯೂ ಇದೆ.
ಪ್ರತೀ ಹಬ್ಬಕ್ಕೂ ಒಂದು ಪುಣ್ಯಕಾಲವೆಂದು ಇರುತ್ತದೆ. ಶಿವರಾತ್ರಿ ಎಂಬ ಶಬ್ದವೇ ಹೇಳುವಂತೆ ರಾತ್ರಿ ವಿಶೇಷ ಎಂಬುದು ನಿಶ್ಚಯ. ಅದರಲ್ಲೂ ಪುಣ್ಯಕಾಲ ಯಾವುದು ಎಂದರೆ ನಿಶೀಥಕಾಲ” ಎನ್ನುವರು. ಅಂದಾಜು ಇದು ರಾತ್ರಿಯ ಎರಡನೇ ಯಾಮದಲ್ಲಿ ಬರುತ್ತದೆ. ಈ ಸಲದ ನಿಶೀಥ ಕಾಲ ರಾತ್ರಿ 12.18 ರಿಂದ 1.07 ರವರೆಗೆ. ಈ ಕಾಲದಲ್ಲಿ ಮಾಡುವ ಭಗವನ್ನಾಮ ಸ್ಮರಣೆ ಅತ್ಯಂತ ಫಲದಾಯಕ. ಈ ಸಮಯದ ಆರಾಧನೆ ಸರ್ವಕಾರ್ಯಗಳಲ್ಲೂ ಜಯ ತಂದುಕೊಡುವುದು.
ತ್ರಯೋದಶಿಯ ದಿನ ಅಂದರೆ ಶಿವರಾತ್ರಿಯಂದು ಹಗಲಿಗೆ ಪೂರ್ಣ ಉಪವಾಸವಿದ್ದರೆ ಉತ್ತಮ. ಫಲಹಾರ ಅಥವಾ ಒಂದು ಊಟ ಮಾಡಬಹುದು. ಇಷ್ಟು ಮಾಡಿಕೊಂಡು ಸಂಜೆ ಸೂರ್ಯಾಸ್ತದ ಮೊದಲು ಸ್ನಾನ ಮುಗಿಸಿ ಭಸ್ಮಧಾರಣೆ ಮಾಡಿಕೊಂಡು ಸಾಧ್ಯವಿದ್ದಲ್ಲಿ ಶಿವಾಲಯಕ್ಕೆ ತೆರಳಿ ಜಾಗರಣೆ ಮಾಡುವುದು. ಇಲ್ಲವಾದಲ್ಲಿ ಮನೆಯಲ್ಲಿಯೇ ರುದ್ರಮಂತ್ರ ಪಠಣ, ಶಿವಪಂಚಾಕ್ಷರಿ ಜಪ, ಶಿವಸ್ತುತಿ, ಭಜನೆ ಇತ್ಯಾದಿಗಳ ಮೂಲಕ ಶಿವನನ್ನು ಪೂಜಿಸಿ. ನಿಶೀಥ ಕಾಲದಲ್ಲಿ ವಿಶೇಷ ಪೂಜೆಯನ್ನು ಮಾಡಿರಿ ಮತ್ತು ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ಪುನಃ ಸ್ನಾನ ಮಾಡಿ ವಿಶೇಷ ಭಕ್ಷ್ಯಗಳನ್ನು ಮಾಡಿಕೊಂಡು ಮಹಾದೇವನಿಗೆ ನೈವೇದ್ಯ ಮಾಡಿದ ನಂತರ ಶಿವರಾತ್ರಿವ್ರತದ ವಿಸರ್ಜನೆ ಮಾಡುವುದಾಗಿ ಸಂಕಲ್ಪಿಸಿ ಪ್ರಸಾದ ತೆಗೆದುಕೊಂಡ ನಂತರ ಪಾರಣೆ ಮಾಡುವುದು ಅರ್ಥಾತ್ ಊಟಮಾಡುವುದು. ಇದು ಶಿವರಾತ್ರಿಯ ಸಾಮಾನ್ಯ ಆಚರಣೆಯ ಕ್ರಮ.
ಶಿವರಾತ್ರಿಯಂದು ರುದ್ರಮಂತ್ರ ಪಠಣ / ಶ್ರವಣ ಮಾಡುವುದರಿಂದ ಅತ್ಯಂತ ಶುಭಫಲ ಪ್ರಾಪ್ತವಾಗುವುದು. ಮನುಷ್ಯ ದುಃಖ ಶಮನ ಮಾಡುವ ಶಕ್ತಿ ಈ ಮಂತ್ರಕ್ಕಿದೆ. ಈ ಸಲದ ಶಿವರಾತ್ರಿ 18/02/23 ರ ರಾತ್ರಿ. ಉಪವಾಸಾದಿಗಳ ಆರಂಭ ಅಂದು ಬೆಳಗ್ಗೆ ಸೂರ್ಯೋದಯಕ್ಕೆ.ವಿಸರ್ಜನೆ 19 ರ ಬೆಳಗ್ಗೆ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು