
ಪ್ರತಿ ಮನೆಯಲ್ಲೂ ಬೀರು ಅಥವಾ ಕಪಾಟು ಇದ್ದೇ ಇರುತ್ತದೆ. ದಿನನಿತ್ಯ ಬಳಸುವ ಬಟ್ಟೆ, ಹಣ, ದಾಖಲೆಗಳು ಸೇರಿದಂತೆ ಅನೇಕ ವಸ್ತುಗಳನ್ನು ಅದರಲ್ಲಿ ಇಡಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಬೀರುವಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಯಾವುವನ್ನು ಇಡಬಾರದು ಎಂಬುದು ಮನೆಯ ಸಕಾರಾತ್ಮಕತೆ ಮತ್ತು ಆರ್ಥಿಕ ಸ್ಥಿತಿಗೆ ನೇರವಾಗಿ ಸಂಬಂಧಿಸಿದೆ. ಕೆಲವು ವಸ್ತುಗಳು ಶುಭ ಶಕ್ತಿಯನ್ನು ಆಕರ್ಷಿಸುತ್ತವೆ ಎಂದರೆ, ಇನ್ನೂ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹರಡಬಹುದು. ಅದಕ್ಕಾಗಿ ಬೀರುವಿನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯವೆಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ವಾಸ್ತು ಪ್ರಕಾರ, ಸುಗಂಧ ದ್ರವ್ಯಗಳು ಅಥವಾ ಪರಿಮಳಯುಕ್ತ ವಸ್ತುಗಳನ್ನು ಬೀರು ಅಥವಾ ಕಪಾಟಿನಲ್ಲಿ ಇಡುವುದು ಒಳ್ಳೆಯದಲ್ಲ. ಇವುಗಳನ್ನು ತಪ್ಪಾಗಿ ಇಡುವುದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ನಂಬಲಾಗಿದೆ. ಕಪಾಟಿನಲ್ಲಿ ಸುಗಂಧ ದ್ರವ್ಯಗಳನ್ನು ಹೆಚ್ಚು ದಿನ ಇಡುವುದರಿಂದ ಹಣಕಾಸಿನ ನಷ್ಟ, ಅನಗತ್ಯ ಖರ್ಚು ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಅದೇ ರೀತಿ, ಬೀರು ಅಥವಾ ವಾರ್ಡ್ರೋಬ್ ಮೇಲೆ ಕನ್ನಡಿ ಇರುವುದೂ ಶುಭವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಮಲಗುವ ಕೋಣೆಯಲ್ಲಿರುವ ಬೀರುವಿನ ಮೇಲೆ ಕನ್ನಡಿ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಿ ಆರ್ಥಿಕ ಅಸ್ಥಿರತೆ, ಮನಸ್ಸಿನ ಅಶಾಂತಿ ಮತ್ತು ಕುಟುಂಬದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ.
ಬೀರುವಿನಲ್ಲಿ ಹರಿದ, ಹಳೆಯ ಅಥವಾ ವ್ಯರ್ಥವಾದ ಕಾಗದಗಳನ್ನು ಸಂಗ್ರಹಿಸುವ ಅಭ್ಯಾಸವನ್ನೂ ಬಿಟ್ಟುಬಿಡುವುದು ಉತ್ತಮ. ವಾಸ್ತು ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿಯು ಬೀರು ಅಥವಾ ತಿಜೋರಿಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ಅಲ್ಲಿ ಅಶುದ್ಧತೆ ಅಥವಾ ವ್ಯರ್ಥ ವಸ್ತುಗಳಿದ್ದರೆ ಲಕ್ಷ್ಮಿ ದೇವಿಯ ಕೃಪೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರ ಪರಿಣಾಮವಾಗಿ ಹಣಕಾಸಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಇನ್ನೊಂದು ಪ್ರಮುಖ ವಿಷಯವೆಂದರೆ ಕಪ್ಪು ಬಟ್ಟೆಗಳು ಮತ್ತು ಕಪ್ಪು ವಸ್ತುಗಳು. ವಾಸ್ತು ಪ್ರಕಾರ, ಕಪ್ಪು ಬಟ್ಟೆ, ಕಪ್ಪು ಪರ್ಸ್ ಅಥವಾ ಕಪ್ಪು ಚೀಲಗಳನ್ನು ಬೀರುವಿನಲ್ಲಿ ಇಡುವುದು ಶುಭವಲ್ಲ. ವಿಶೇಷವಾಗಿ ಹಣವನ್ನು ಕಪ್ಪು ಬಟ್ಟೆಯಲ್ಲಿ ಇಡುವುದರಿಂದ ಸಂಪತ್ತಿನ ನಷ್ಟ ಮತ್ತು ಸಂತೋಷದ ಹರಿವಿಗೆ ಅಡ್ಡಿ ಉಂಟಾಗುತ್ತದೆ ಎಂದು ನಂಬಲಾಗಿದೆ.
ಹೀಗಾಗಿ, ಬೀರುವಿನಲ್ಲಿ ಸದಾ ಸ್ವಚ್ಛತೆ, ಶಿಸ್ತು ಮತ್ತು ಶುಭ ವಸ್ತುಗಳನ್ನು ಮಾತ್ರ ಇಡುವ ಅಭ್ಯಾಸವನ್ನು ಬೆಳೆಸಿದರೆ, ಅದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ