ನಿದ್ರಾವಸ್ಥೆಯಲ್ಲಿ ತ್ರಿಕರಣ ಮಲಗಿರುವಾಗ ನಿದ್ರಾ ಸ್ಥಿತಿ ಅನುಭವಿಸುವವರು ಯಾರು? ಉಸಿರಾಟ ನಡೆಸುವವರು ಯಾರು?

| Updated By: ಸಾಧು ಶ್ರೀನಾಥ್​

Updated on: Nov 11, 2022 | 6:06 AM

Sleeping: ಎಚ್ಚರ-ಕನಸು-ನಿದ್ರೆ ಈ ಮೂರು ಅವಸ್ಥೆಗಳಲ್ಲಿ ನಿರಂತರ ಉಸಿರಾಟ, ಹೃದಯ ಬಡಿತ ಮಾತ್ರವಲ್ಲ, ಪ್ರತಿಯೊಂದು ಕ್ರಿಯೆಯನ್ನೂ ಭಗವಂತನೇ ಮಾಡಿಸುವುದು. ಆದರೆ "ನಾನು" ಎಂಬ ಭ್ರಮಾತ್ಮಕ ವಿಭಕ್ತಿ ಎಲ್ಲವುದಕ್ಕೂ ಅಡ್ಡಿ ಬರುತ್ತದೆ. ಎಲ್ಲಾ ಶಿವ ಸಂಕಲ್ಪ!

ನಿದ್ರಾವಸ್ಥೆಯಲ್ಲಿ ತ್ರಿಕರಣ ಮಲಗಿರುವಾಗ ನಿದ್ರಾ ಸ್ಥಿತಿ ಅನುಭವಿಸುವವರು ಯಾರು? ಉಸಿರಾಟ ನಡೆಸುವವರು ಯಾರು?
ಮಾನಸಿಕ ಒತ್ತಡ, ಚಿಂತೆ, ನಾನಾ ರೀತಿಯ ಆರೋಗ್ಯ ಸಮಸ್ಯೆಗಳು, ಔಷಧಿಗಳ ಅಡ್ಡಪರಿಣಾಮಗಳಿಂದಾಗಿ ಸರಿಯಾಗಿ ನಿದ್ರೆ ಬಾರದಿರುವುದು, ಬೆಳಗ್ಗೆ ಬೇಗನೆ ಎಚ್ಚರಗೊಳ್ಳುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ದೇಹಕ್ಕೆ ಮತ್ತಷ್ಟು ಸುಸ್ತಾಗುತ್ತದೆ. ಮನುಷ್ಯನಿಗೆ ದಿನನಿತ್ಯ 7ರಿಂದ 8 ಗಂಟೆಗಳ ನಿದ್ರೆ ಅವಶ್ಯಕ.
Image Credit source: netmeds.com
Follow us on

ತ್ರಿದಶ ಎಂದರೆ ಮೂರು ಅವಸ್ಥೆಗಳು – (ಎಚ್ಚರ-ಕನಸು-ನಿದ್ರೆ) ಈ ಮೂರು ಅವಸ್ಥೆಗಳಲ್ಲಿ ನಿರಂತರ ಉಸಿರಾಟ, ಹೃದಯ ಬಡಿತ ಮಾತ್ರವಲ್ಲ, ಪ್ರತಿಯೊಂದು ಕ್ರಿಯೆಯನ್ನೂ ಭಗವಂತನೇ ಮಾಡಿಸುವುದು. ಆದರೆ “ನಾನು” ಎಂಬ ಭ್ರಮಾತ್ಮಕ ವಿಭಕ್ತಿ ಎಲ್ಲವುದಕ್ಕೂ ಅಡ್ಡಿ ಬರುತ್ತದೆ. ಇದೇ ‘ಓಂ (ಅ, ಉ, ಮ್ -ॐ). ಅ’ ಅಂದರೆ ಆಪ್ತಿ, ಹೊರಗಿನ ಪ್ರಪಂಚದೊಂದಿಗೆ ನಮಗಿರುವ ಸಂಬಂಧ. ಇದಿರುವುದು ಎಚ್ಚರದಲ್ಲಿ ಮಾತ್ರ. ‘ಉ’ ಅಂದರೆ ಉತ್ಕರ್ಷ, ಹೊರಗಿನ ಪ್ರಪಂಚದ ಸಂಪರ್ಕ ಕಡಿದುಕೊಂಡು, ಒಳ ಪ್ರಪಂಚದಲ್ಲಿ ಕಾಣುವ ಕನಸಿನ ಪ್ರಪಂಚ. ‘ಮ್’ ಅಂದರೆ ಭಗವಂತನಲ್ಲಿ ಅಂತರ್ಗತನಾಗಿ ಒಳ-ಹೊರ ಪ್ರಪಂಚದ ಅರಿವಿಲ್ಲದೆ, ಇರುವ ನಿದ್ರಾಸ್ಥಿತಿ (spiritual).

ಕರಣತ್ರಯ: ಕರಣ ಎಂದರೆ ಸಾಧನ. ಶಾಸ್ತ್ರ್ರಗಳಲ್ಲಿ ಮನಸ್ಸು, ವಾಕ್ ಮತ್ತು ಕಾಯ (ಶರೀರ)ಗಳನ್ನು ತ್ರಿಕರಣಗಳೆಂದು ಹೇಳಿದೆ. ಜೀವ ಈ ಮೂರು ಕರಣಗಳಿಂದ ಸುಖದುಃಖಾತ್ಮಕವಾದ ವಿಷಯಗಳನ್ನು ಅನುಭವಿಸುತ್ತಾನೆ. ಕರಣಗಳು ಅಂತಃಕರಣ ಮತ್ತು ಬಾಹ್ಯಕರಣ ಎಂದು ಎರಡು ಬಗೆಯಾಗಿವೆ. ಶರೀರದ ಒಳಗಿರುವುದು ಅಂತಃಕರಣ. ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂಕಾರಗಳನ್ನು ಅಂತಃಕರಣ ಚತುಷ್ಟಯ ಎಂದು ಕರೆಯಲಾಗಿದೆ.

ಈ ನಾಲ್ಕೂ ಮನಸ್ಸಿನ ಪ್ರಭೇದಗಳು. ಅವುಗಳಲ್ಲಿ ಸಂಕಲ್ಪಾತ್ಮಕ ಅಥವಾ ವಿಕಲ್ಪಾತ್ಮಕವಾದದ್ದು ಮನಸ್ಸು. ಅದೇ ಚಿಂತನರೂಪವಾಗಿದ್ದರೆ ಚಿತ್ತವೆಂದೂ ಯುಕ್ತಾಯುಕ್ತ ವಿವೇಕರೂಪವಾಗಿದ್ದರೆ ಬುದ್ಧಿಯೆಂದೂ ನಾನು (ಅಹಂಕಾರ), ನನ್ನದು (ಮಮಕಾರ), ರೂಪ ಅಥವಾ ಅಭಿಮಾನವುಳ್ಳದ್ದು ಅಹಂಕಾರವೆಂದೂ ಕರೆಯಲ್ಪಡುತ್ತದೆ. ಬಾಹ್ಯಕರಣಗಳು ವಾಕ್ ಮತ್ತು ಕಾಯಗಳಿಗೆ ಸಂಬಂಧಿಸಿದ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳು.

ಈ ಮೂರೂ ದಶಗಳಲ್ಲಿ ನಾವು ಸ್ವತಂತ್ರರಲ್ಲ, ಮೂರು ದಶಗಳೊಂದಿಗೆ ನಿರಂತರ ನಮ್ಮನ್ನು ನಡೆಸುವ ಪ್ರಾಜ್ಞ ರೂಪದಲ್ಲಿದ್ದ ಭಗವಂತ ತ್ರಿದಶಾಧ್ಯಕ್ಷಃ. ಅಂತರ್ಮುಖ ಸಮಾರಾಧ್ಯ ಬಹಿರ್ಮುಖ ಸುದುರ್ಲಭಾ … ಇದು ಅರಿವಿಲ್ಲದ ಭಗವಂತನ ಸಾಮೀಪ್ಯ. ನಿದ್ರಾವಸ್ಥೆಯಲ್ಲಿ ನಮ್ಮ ಹೊರಗಣ್ಣು ಮುಚ್ಚಿದ್ದು, ಒಳಗಣ್ಣು ತೆರೆದಿರುತ್ತದೆ. ಮನಸ್ಸು ಅಂತರ್ಮುಖಿಯಾಗಿರುತ್ತದೆ.

‘ರಾತ್ರಿ ಮಲಗಿದವನಿಗೆ ಬೆಳಗಿನ ತನಕ’ ಎಂಬುದು ಗೊತ್ತಿದೆ. ‘ನಾನು’ ಅನ್ನುವುದು ಗೊತ್ತಿದೆ. ಗೊತ್ತಿದೆ ಅನ್ನುವುದು ಗೊತ್ತಿಲ್ಲ ಎಚ್ಚರವಾದ ಮೇಲೆ ಗೊತ್ತಾಗುವುದು. ನಿದ್ರೆಯಲ್ಲಿ ಕಾಲ ಗೊತ್ತಿದೆ, ಗೊತ್ತಿದೆ ಅನ್ನುವುದು ಗೊತ್ತಿಲ್ಲ. ಎಚ್ಚರವಾದ ಮೇಲೆ ಗೊತ್ತಾಗುವುದು.

ನಿದ್ದೆಯಲ್ಲಿ ಆನಂದವಿದೆ ಅನ್ನುವುದು ಗೊತ್ತಿದೆ, ಗೊತ್ತಿದೆ ಅನ್ನುವುದು ಗೊತ್ತಿಲ್ಲ ಎಚ್ಚರವಾದ ಮೇಲೆ ಗೊತ್ತಾಗುವುದು. ಎಚ್ಚರದಲ್ಲಿ ಈ ಅರಿವು ಬಂದರೆ ಎಷ್ಟು ಸುಂದರ ಅಲ್ಲವೇ? ನಿಜವಾಗಿಯೂ ನಮಗೆ ಏನೂ ಗೊತ್ತಿಲ್ಲ, ಆದರೆ ಎಲ್ಲ ಗೊತ್ತಿದೆ ಅಂತ ಹಾರಾಡುತ್ತೇವೆ.

ನಿದ್ರೆಯಲ್ಲಿ ಹಾಗಾದರೆ ಆನಂದ ಯಾಕೆ ಬಂತು? ಮನುಷ್ಯನಿಗೆ ದುಖವಿಲ್ಲದ ಆನಂದ ಅಂತ ಇರುವುದು ನಿದ್ರೆಯಲ್ಲಿ ಮಾತ್ರ. ಕನಸಿನಲ್ಲಿಯೂ ಇಲ್ಲ. ಕನಸಿನಲ್ಲಿ ಕೆಟ್ಟ ಕನಸು, ಭಯಾನಕ ಕನಸು ಎಲ್ಲಾ ಇರುತ್ತದೆ. ಆದರೆ ನಿದ್ರೆಯಲ್ಲಿ ದು:ಖ ಎನ್ನುವುದು ಯಾರಿಗೂ ಆಗೋದಿಲ್ಲ. ರೋಗಿಗೆ ಕೂಡ ರೋಗದ ವೇದನೆ ನಿದ್ರೆಯಲ್ಲಿಲ್ಲ. ದುಖವಾಗಿ ನಿದ್ರೆ ಬಂತು ಎಂದು ಯಾರೂ ಹೇಳೋಲ್ಲ ಸರಿ ತಾನೆ?

ಅದಕ್ಕೆ ಶಾಸ್ತ್ರಕಾರರು ಹೇಳ್ತಾರೆ ‘ಅಪ್ಪಾ ನಿದ್ರೆಯಲ್ಲಿ ದು:ಖವಿಲ್ಲದ ಯಾವುದೋ ಒಂದು ಇದೆ” ಎಂದು ಗೊತ್ತಾಯಿತಲ್ಲ. ಅದು ಎಚ್ಚರದಲ್ಲಿಯೂ ಶಾಶ್ವತ ಆಗಬೇಕು ಅನ್ನುವುದೇ ಮೋಕ್ಷದ ಬಯಕೆ. ಹಾಗಾದರೆ ನಿದ್ರೆಯಲ್ಲಿ ಯಾಕೆ ದುಃಖ ಆಗಲಿಲ್ಲ. ಯಾಕೆಂದರೆ ನಿದ್ರೆಯಲ್ಲಿ ನೀನು ಭಗವಂತನ ಜೊತೆಗೆ ಇದ್ದೆ. ಭಗವಂತನ ಜೊತೆಗೆ ಇದ್ದೆ ಅನ್ನುವುದು ಗೊತ್ತಿಲ್ಲದೇ ಪುನಃ ಎಚ್ಚರವಾದಾಗ ಈ ದುಃಖಕ್ಕೆ ಒಳಗಾದೆ. ಅಂದರೆ ಭಗವಂತನ ಜೊತೆಗೆ ಇದ್ದು ಬಿಡುವುದು ಆನಂದಮಯ ಸ್ಥಿತಿ.

ಅದಕ್ಕೆ ಭಗವಂತನ ತಿಳಿದುಕೋ, ಇದೆಲ್ಲ ‘ಮ’ ದಲ್ಲಿ ತಿಳಿದುಕೊಳ್ಳುವಂತಹುದು. – ಅದು ಮಾತ್ರವಲ್ಲ ಎಚ್ಚರವಾದಾಗ ದುಃಖವಾಗಲಿಕ್ಕೆ ಇನ್ನೊಂದು ಬಹಳ ಮುಖ್ಯ ಕಾರಣವೆಂದರೆ ಎಚ್ಚರದಲ್ಲಿ ‘ನಾನು’ ಎಂಬುದಿದೆ. ನಿದ್ದೆಯಲ್ಲೂ ಇದೆ. ಆದರೆ ನಿದ್ದೆಯಲ್ಲಿ ‘ನಾನು’ ಎಂಬುದಕ್ಕೆ ವಿಭಕ್ತೀಯೇ ಇಲ್ಲ. ಎಲ್ಲಾ ಶಿವ ಸಂಕಲ್ಪ!

ಯಜ್ಜಾಗ್ರತೋ ದೂರಮುದೈತಿ ದೈವಂ
ತದುಸುಪ್ತಸ್ಯ ತಥೈವೇತಿ
ದೂರಂಗಮಂ ಜ್ಯೋತಿಷಾಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು.

ರಾತ್ರಿ ಮಲಗುವಾಗ ಮಾಡಿದ ಸಂಕಲ್ಪಗಳು ಬೀಜ ರೂಪದಲ್ಲಿದ್ದು ಬೆಳಗ್ಗೆ ಎದ್ದೊಡನೆ ಪುಟಿದೇಳುತ್ತವೆ. ಹೀಗೆ ಬೆಳಗ್ಗೆ ಮಾಡಿದ ಶುಭಕಾಮನೆಗಳು ಸಲ್ಲಿಸಿದ ಪ್ರಾರ್ಥನೆಗಳು ದಿನವಿಡೀ ನಮ್ಮನ್ನು ಸಲಹುತ್ತಿರುತ್ತವೆ. (ಲೇಖನ- ವಿವಿಧ ಮೂಲಗಳಿಂದ)