
ಮುಂದಿನ ವರ್ಷ ನಡೆಯಲ್ಲಿರುವ ಅಂದರೆ 2025 ರ ಜನವರಿಯಲ್ಲಿ ನಡೆಯಲ್ಲಿರುವ PWR (ಪಿಕಲ್‌ಬಾಲ್ ವಿಶ್ವ ಶ್ರೇಯಾಂಕ) DUPR ಇಂಡಿಯನ್ ಟೂರ್ ಮತ್ತು ಲೀಗ್ ಅನ್ನು ಉದ್ಘಾಟಿಸುವ ಸಲುವಾಗಿ ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ ಲೆಜೆಂಡ್ ಆಂಡ್ರೆ ಅಗಾಸ್ಸಿ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದಲ್ಲಿ ಪಿಕಲ್‌ಬಾಲ್ ಲೀಗ್ ಅನ್ನು ಜನಪ್ರಿಯಗೊಳಿಸುವುದು ಈ ಪಂದ್ಯಾವಳಿಯ ಉದ್ದೇಶವಾಗಿದೆ. ಇತ್ತೀಚೆಗಷ್ಟೇ ಈ ಲೀಗ್ನಲ್ಲಿ ಹೊಸ ಶ್ರೇಯಾಂಕ ರಚನೆಯನ್ನು ಪರಿಚಯಿಸಿದ್ದು, ಲೀಗ್ ಅನ್ನು ಅದರ ಪ್ರಕಾರ ನಡೆಸಲಾಗುತ್ತದೆ.
ಈ ಲೀಗ್ನ ಉದ್ಘಾಟನೆಗಾಗಿ ಭಾರತಕ್ಕೆ ಬರುತ್ತಿರುವ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿರುವ ಎಂಟು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಅಗಾಸ್ಸಿ, ‘ಭಾರತಕ್ಕೆ ಭೇಟಿ ನೀಡಲು ಮತ್ತು ಪಿಕಲ್‌ಬಾಲ್ ಅಭಿಮಾನಿಗಳನ್ನು ಥ್ರಿಲ್ ಮಾಡಲು ಉತ್ಸುಕನಾಗಿದ್ದೇನೆ. ನಾನು PWR DUPR ಇಂಡಿಯನ್ ಟೂರ್ ಮತ್ತು ಲೀಗ್‌ಗಾಗಿ ಎದುರು ನೋಡುತ್ತಿದ್ದೇನೆ. ಈ ಲೀಗ್ ಭಾರತದಲ್ಲೆ ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ಭಾವಿಸುತ್ತೇನೆ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಒಂದು ಕಾಲದ ಟೆನಿಸ್ ಲೆಜೆಂಡ್ ಆಂಡ್ರೆ ಅಗಾಸ್ಸಿ, ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜೊತೆಗೆ, ಎರಡು ಬಾರಿ ಯುಎಸ್ ಓಪನ್ ಮತ್ತು ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಅನ್ನು ತಲಾ ಒಮ್ಮೆ ಗೆದ್ದಿದ್ದಾರೆ. ಇದಲ್ಲದೆ 1996 ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಇನ್ನು ಟೆನಿಸ್ ಲೆಜೆಂಡ್ ಆಂಡ್ರೆ ಅಗಾಸ್ಸಿ ಅವರ ಆಗಮನದ ಬಗ್ಗೆ ಮಾತನಾಡಿರುವ PWR ನ ಸಿಇಒ ಮತ್ತು ಸಂಸ್ಥಾಪಕ ಪ್ರಣವ್ ಕೊಹ್ಲಿ, ಆಂಡ್ರೆ ಅಗಾಸ್ಸಿ ಅವರನ್ನು ಭಾರತಕ್ಕೆ ಸ್ವಾಗತಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಭಾಗವಹಿಸುವಿಕೆಯು ಭಾರತದಲ್ಲಿ ಪಿಕಲ್‌ಬಾಲ್ ಲೀಗ್ನ ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಒಂದು ದೊಡ್ಡ ಉತ್ತೇಜನವನ್ನು ನೀಡಿದೆ ಎಂದರು.
ಹಾಗೆಯೇ ಟೈಮ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಮಾತನಾಡಿ, ‘ಆಟದ ಮೇಲೆ ಅಗಾಸ್ಸಿಯವರಿಗಿರುವ ಉತ್ಸಾಹ ಮತ್ತು ಕ್ರೀಡಾ ಜಗತ್ತಿನಲ್ಲಿ ಅವರಿಗಿರುವ ಸ್ಥಾನಮಾನ ಖಂಡಿತವಾಗಿಯೂ ನಮಗೆ ಸ್ಫೂರ್ತಿ ನೀಡುತ್ತದೆ. ಆಂಡ್ರೆ ಅಗಾಸ್ಸಿಯವರ ಉಪಸ್ಥಿತಿಯನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.
ಪಿಕಲ್‌ಬಾಲ್ ಆಟ, ಟೆನಿಸ್ ಮತ್ತು ಬ್ಯಾಡ್ಮಿಂಟನ್‌ನ ಮಿಶ್ರ ರೂಪವಾಗಿದೆ. ಈ ಆಟವನ್ನು ಸಣ್ಣ ಸಣ್ಣ ರಂಧ್ರಗಳಿರುವ ಪ್ಲಾಸ್ಟಿಕ್ ಬಾಲ್ ಮತ್ತು ರಾಕೆಟ್‌ನ ಸಹಾಯದಿಂದ ಆಡಲಾಗುತ್ತದೆ. ಹಾಗೆಯೇ ಈ ಆಟವನ್ನು 44*20 ಚದರ ಅಡಿಗಳ ಅಂಕಣದಲ್ಲಿ ಆಡಲಾಗುತ್ತದೆ. ಈ ಆಟದಲ್ಲಿ ಟೆನಿಸ್ನಂತೆ ಸಿಂಗಲ್ ಮತ್ತು ಡಬಲ್ಸ್ ಕೂಡ ಇರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Sat, 31 August 24