CPL 2024: ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ 17 ವರ್ಷದ ಯುವ ದಾಂಡಿಗ
Caribbean Premier League 2024: ಕೆರಿಬಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಮತ್ತು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಫಾಲ್ಕನ್ಸ್ ತಂಡವು 20 ಓವರ್ಗಳಲ್ಲಿ 163 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪೇಟ್ರಿಯಾಟ್ಸ್ ಕೊನೆಯ ಎಸೆತದಲ್ಲಿ 1 ರನ್ಗಳಿಸಿ 1 ವಿಕೆಟ್ನ ರೋಚಕ ಜಯ ಸಾಧಿಸಿದೆ.
Updated on: Aug 31, 2024 | 1:53 PM

ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ ಯುವ ದಾಂಡಿಗ ಜ್ಯುವೆಲ್ ಆಂಡ್ರ್ಯೂ ದಾಖಲೆ ಬರೆದಿದ್ದಾರೆ. ಅದು ಸಹ ತಮ್ಮ 17ನೇ ವಯಸ್ಸಿನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಅಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಸಿಪಿಎಲ್ 2024ರ ಮೊದಲ ಪಂದ್ಯದಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಮತ್ತು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡದ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜ್ಯುವೆಲ್ ಆಂಡ್ರ್ಯೂ ಅದ್ಭುತ ಇನಿಂಗ್ಸ್ ಆಡಿದರು.

5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜ್ಯುವೆಲ್ ಆಂಡ್ರ್ಯೂ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಅಲ್ಲದೆ ಯುವ ದಾಂಡಿಗ 30 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಅರ್ಧಶತಕದೊಂದಿಗೆ ಜ್ಯುವೆಲ್ ಆಂಡ್ರ್ಯೂ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಅಂದರೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿಕೋಲಸ್ ಪೂರನ್ ಹೆಸರಿನಲ್ಲಿತ್ತು. 2013 ರ ಸಿಪಿಎಲ್ನಲ್ಲಿ ಪೂರನ್ ಅವರು ಚೊಚ್ಚಲ ಅರ್ಧಶತಕ ಬಾರಿಸಿದಾಗ ಅವರ ವಯಸ್ಸು 17 ವರ್ಷ, 302 ದಿನಗಳು.

ಇದೀಗ ಜ್ಯುವೆಲ್ ಆಂಡ್ರ್ಯೂ 17 ವರ್ಷ, 266 ದಿನಗಳ ವಯಸ್ಸಿನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಾಫ್ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ ಲೀಗ್ನಲ್ಲಿ ಅರ್ಧಶತಕ ಬಾರಿಸಿದ ಕಿರಿಯ ಬ್ಯಾಟರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಭಾರತದ ರಿಯಾನ್ ಪರಾಗ್ ಎಂಬುದು ವಿಶೇಷ. 2019 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ಪರಾಗ್ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 17 ವರ್ಷ, 175 ದಿನಗಳು ಮಾತ್ರ. ಈ ಮೂಲಕ ರಿಯಾನ್ ಪರಾಗ್ ಫ್ರಾಂಚೈಸಿ ಲೀಗ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
