ಭಾರತ ಮತ್ತು ಆಸ್ಟ್ರೇಲಿಯ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ಶುರುವಾಗಲಿದೆ. ನಿಮಗೆ ಚೆನ್ನಾಗಿ ಗೊತ್ತಿದೆ, ಆಸ್ಟ್ರೇಲಿಯಾದ ಪ್ರೇಕ್ಷಕರು ಬೇರೆ ದೇಶದ ಆಟಗಾರರರಿಗೆ ಸೂಪರ್ ಸ್ಟಾರ್ ಸ್ಟೇಟಸ್ ಸುಲಭವಾಗಿ ನೀಡುವುದಿಲ್ಲ. ಭಾರತದ ಆಟಗಾರರ ಪೈಕಿ ಕೆಲವರನ್ನಷ್ಟೇ ಅವರು ತಮ್ಮ ದೇಶದ ಆಟಗಾರರಿಗೆ ನೀಡುವ ಪ್ರೀತಿಯನ್ನು ನೀಡಿದ್ದಾರೆ. ಹಿಂದೆ, ಅವರು ಸಚಿನ್ ತೆಂಡೂಲ್ಕರ್ರನ್ನು ಮನಸಾರೆ ಇಷ್ಟಪಡುತ್ತಿದ್ದರು ಈಗ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು.
ಸಚಿನ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಬರುವಾಗ ಅವರೆಲ್ಲ ಎದ್ದುನಿಂತು ಸಚಿನ್, ಸ..ಚಿನ್, ಸ….ಚಿನ್ ಎಂದು ಕೂಗುತ್ತಾ ಸ್ವಾಗತಿಸುತ್ತಿದ್ದರು. ಹಾಗೆಯೇ, ಕೊಹ್ಲಿ ಬ್ಯಾಟ್ ಮಾಡಲು ಆಗಮಿಸುವಾಗಲೂ ಸ್ಟೇಡಿಯಂನಲ್ಲಿ ನೆರೆದಿರುವವರು, ಕೊಹ್ಲಿ… ಕೊಹ್ಲಿ ಅಂತ ಅರಚುತ್ತಿರುತ್ತಾರೆ.
ಸಚಿನ್ ಮತ್ತು ಕೊಹ್ಲಿ ಪಡೆದುಕೊಂಡ ಖ್ಯಾತಿ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳ ಮೇಲೆ ಮಾಡಿರುವ ಮೋಡಿ ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಬೇರೆ ಯಾವುದೇ ಆಟಗಾರನಿಗೂ ಮಾಡಲಾಗಿಲ್ಲ. ಆದರೆ, 1989ರಲ್ಲಿ ಪಾಕಿಸ್ತಾನದ ವೇಗದ ಬೌಲರ್ ವಾಸಿಮ್ ಅಕ್ರಮ್ ಅಂಥ ಪ್ರಭಾವ ಬೀರಿದ್ದರು ಎಂದು ಆಸ್ಟ್ರೇಲಿಯಾದ ಮಾಜಿ ಕಾಮೆಂಟೇಟರ್ ಜಿಮ್ ಮ್ಯಾಕ್ಸ್ವೆಲ್ ಹೇಳುತ್ತಾರೆ.
ಆ ವರ್ಷ ಆಸ್ಟ್ರೇಲಿಯ ಪ್ರವಾಸಕ್ಕೆ ಹೋಗಿದ್ದ ಪಾಕಿಸ್ತಾನ ಟೆಸ್ಟ್ ಸರಣಿಯನ್ನು, ಯಾವುದೇ ಪ್ರತಿರೋಧವೊಡ್ಡದೆ ಸೋತರೂ ಅಲ್ಲಿನ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಅಕ್ರಮ್ ಬೀರಿದರು ಎಂದು ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಸ್ವೆಲ್ ಹೇಳಿದ್ದಾರೆ.
‘ಆ ಸರಣಿಯಲ್ಲಿ ವಾಸಿಮ್ ಅಕ್ರಮ್ ಒಬ್ಬ ವೇಗದ ಬೌಲರ್ಗೆ ಸಾಧ್ಯವಾಗಬಹುದಾದ ಎಲ್ಲ ಆಯಾಮಗಳನ್ನು ಪ್ರದರ್ಶಿಸಿದರು. ಸರಣಿಯುದ್ದಕ್ಕೂ ಅಪ್ರತಿಮ ಬೌಲಿಂಗ್ ಪ್ರದರ್ಶನ ನೀಡಿದ ಅಕ್ರಮ್ ಬಾಲನ್ನು ಸೀಮ್, ಸ್ವಿಂಗ್, ರಿವರ್ಸ್ ಸ್ವಿಂಗ್-ಎಲ್ಲವನ್ನೂ ಮಾಡಿದರು. ಅವರು ನಡೆಸಿದ ದಾಳಿ ಪ್ರೇಕ್ಷಕರ ಮೈನವಿರೇಳಿಸಿತ್ತು. ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಮೇಲೆ ಅಕ್ರಮ್ ಮಾಡಿದ ಮೋಡಿ, ಅವರಲ್ಲಿ ಸೃಷ್ಟಿಸಿದ ರೋಚಕತೆ ಅಸಾಮಾನ್ಯವಾದ್ದು. ಇಲ್ಲಿಗೆ ಪ್ರವಾಸ ಬರುವ ಮೊದಲೇ ಅಕ್ರಮ್ ಬೌಲಿಂಗ್ ಪರಾಕ್ರಮಗಳ ಬಗ್ಗೆ ತಿಳಿದುಕೊಂಡಿದ್ದ ಅಸ್ಸೀಗಳನ್ನು ಈ ಸುಲ್ತಾನ್ ಆಫ್ ಸ್ವಿಂಗ್ ಒಂದಿಷ್ಟೂ ನಿರಾಸೆಗೊಳಿಸಲಿಲ್ಲ’ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಅಕ್ರಮ್ ನಂತರ ಅಂಥ ಮೋಡಿಯನ್ನು ಮೂಡಣ ದೇಶದ ಬೌಲರ್ಗಳ ಪೈಕಿ ಯಾರಾದರೂ ಬೀರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಸ್ವೆಲ್, ಭಾರತದ ಜಸ್ಪ್ರೀತ್ ಬುಮ್ರಾ ಅವರ ಹೆಸರು ಉಲ್ಲೇಖಿಸಿದರು.
‘ಇಂಡಿಯಾದ ಜಸ್ಪ್ರೀತ್ ಬುಮ್ರಾ ನಿಸ್ಸಂದೇಹವಾಗಿ ಅಕ್ರಮ್ರಷ್ಟೇ ಪ್ರಭಾವವನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳ ಮೇಲೆ ಬೀರಿದ್ದಾರೆ. ಬುಮ್ರಾ ಬೌಲಿಂಗ್ ಮಾಡುವುದನ್ನು ನೋಡುವಾಗ ನನಗೆ ಅಕ್ರಮ್ ನೆನಪಾಗುತ್ತಾರೆ. ಅವರು ಶಾರ್ಟರ್ ರನಪ್ನಿಂದ ಎಸೆಯುವ ಸ್ಫೋಟಕ ಎಸೆತಗಳು ನನ್ನಲ್ಲಿ ರೋಮಾಂಚನ ಹುಟ್ಟಿಸುತ್ತವೆ’ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಬರಹಗಾರ ಮತ್ತು ಇತಿಹಾಸಜ್ಞ ಗಿದ್ಯೋನ್ ಹೇಗ್ ಸಹ ಅಕ್ರಮ್ ಮತ್ತು ಬುಮ್ರಾ ಸೃಷ್ಟಿಸಿರುವ ಮೋಡಿ ನಂಬಲಸದಳವಾದ್ದು ಎನ್ನುತ್ತಾರೆ.
‘‘ಅಕ್ರಮ್ಗಿಂತ ಮೊದಲು, ವೆಸ್ಟ್ ಇಂಡೀಸ್ನ ಮಾಲ್ಕಂ ಮಾರ್ಷಲ್, ಮೈಕೆಲ್ ಹೊಲ್ಡಿಂಗ್, ಌಂಡಿ ರಾಬರ್ಟ್ಸ್, ಕಾಲಿನ್ ಕ್ರಾಫ್ಟ್ ಮೊದಲಾದವರು ಸೃಷ್ಟಿಸಿದ ಹವಾ ಎಣಿಕೆಗೆ ನಿಲುಕದಂಥದ್ದು. ಆಸ್ಟ್ರೇಲಿಯಾದ ನೆಲದ ಮೇಲೆ ಅವರ ಹಾಗೆ ಪ್ರೇಕ್ಷಕರನ್ನು ವಶೀಕರಕ್ಕೊಳಪಡಿಸಿದ ಮತ್ತೊಬ್ಬ ಬೌಲರ್ ಎಂದರೆ ಅಕ್ರಮ್. ಈಗಿನ ಬೌಲರ್ಗಳ ಪೈಕಿ ಹೇಳುವುದಾದರೆ, ಭಾರತದ ಜಸ್ಪ್ರೀತ್ ಬುಮ್ರಾ ಈ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಹಾಗೆ ರೋಮಾಂಚನ ಹುಟ್ಟಿಸುವ ಬೌಲರ್ ಮತ್ತೊಬ್ಬನಿಲ್ಲ,’’ ಎಂದು ಹೇಗ್ ಹೇಳಿದ್ದಾರೆ.
ಹಾಗೆ ನೋಡಿದರೆ, ಅಕ್ರಮ್ ಮತ್ತು ಬುಮ್ರಾ ನಡುವೆ ಹಲವಾರು ವಿಖ್ಯಾತ, ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಬೌಲರ್ಗಳು ಅಸ್ಟ್ರೇಲಿಯಾದ ಪಿಚ್ಗಳ ಮೇಲೆ ಚಮತ್ಕಾರ ಮೆರೆದಿದ್ದಾರೆ. ವಿಂಡೀಸ್ನ ಕರ್ಟ್ಲೀ ಌಂಬ್ರೋಸ್, ಕರ್ಟ್ನೀ ವಾಲ್ಷ್, ಇಂಗ್ಲೆಂಡಿನ ಜೇಮ್ಸ್ ಌಂಡರ್ಸನ್, ಸ್ಟುವರ್ಟ್ ಬ್ರಾಡ್, ಪಾಕಿಸ್ತಾನದ ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಮತ್ತು ದಕ್ಷಿಣ ಆಫ್ರಿಕಾದ ಡೇಲ್ ಸ್ಟೀನ್ ಮತ್ತು ಆಲನ್ ಡೊನಾಲ್ಡ್; ಮೊದಲಾದವರೆಲ್ಲ ಯಾವ ವೇಗದ ಬೌಲರ್ನಿಗೂ ಕಮ್ಮಿಯಿಲ್ಲ. ಆದರೆ, ಇವರಲ್ಲಿ ಯಾರೊಬ್ಬರೂ, ಅಕ್ರಮ್ ಮತ್ತು ಬುಮ್ರಾ ಮಾಡಿರುವ, ರೋಮಾಂಚನ ಮತ್ತು ಮೋಡಿಯನ್ನು ಸೃಷ್ಟಿಸಲಾಗಿಲ್ಲ ಎಂದು ಹೇಗ್ರಂತೆ ಅನೇಕ ಆಸ್ಸೀಗಳು ಹೇಳುತ್ತಾರೆ.
‘‘ಅವರಿಬ್ಬರನ್ನು ಶತಮಾನಕ್ಕೊಮ್ಮೆ ಹುಟ್ಟುವ ಬೌಲರ್ಗಳೆಂದೇ ನಾನು ಪರಿಗಣಿಸುತ್ತೇನೆ. ಅಸ್ಟ್ರೇಲಿಯ ಸೃಷ್ಟಿಸಿರುವ ಮತ್ತು ಊಹಿಸದಕ್ಕಿಂತ ಭಿನ್ನವಾದ ಬೌಲರ್ಗಳು,’’ ಎಂದು ಹೇಗ್ ಹೇಳುತ್ತಾರೆ.
ಇದುವರೆಗೆ ಕೇವಲ 14 ಟೆಸ್ಟ್ಗಳನ್ನು ಮಾತ್ರ ಆಡಿರುವ ಬುಮ್ರಾ ತಾನಾಡಿರುವ ಸರಣಿಗಳಲ್ಲೆಲ್ಲ ವಿಜೃಂಬಿಸಿದ್ದಾರೆ. ನ್ಯೂಜಿಲೆಂಡ್ನಲ್ಲಿ ಹೊರತುಪಡಿಸಿ, ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಮತ್ತು ವೆಸ್ಟ್ ಇಂಡೀಸ್ ದೇಶಗಳ ಮೈದಾನಗಳಲ್ಲಿ ಇನ್ನಿಂಗ್ಸೊಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. ವಿಂಡೀಸ್ನ ಬ್ಯಾಟಿಂಗ್ ಲೆಜೆಂಡ್ ಸರ್ ವಿವ್ ರಿಚರ್ಡ್ಸ್, ಬುಮ್ರಾರನ್ನು ತಮ್ಮ ಕಾಲದ ಲೆಜೆಂಡರಿ ಬೌಲರ್ ಡೆನಿಸ್ ಲಿಲ್ಲಿಗೆ ಹೋಲಿಸುತ್ತಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಸಚಿನ್ ಸಮಕಾಲೀನ ಶ್ರೇಷ್ಠ ಬ್ಯಾಟ್ಸ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ರಿಕ್ಕಿ ಪಾಂಟಿಂಗ್, ‘ಸದ್ಯ, ನಾನಾಡುತ್ತಿದ್ದ ದಿನಗಳಲ್ಲಿ ಬುಮ್ರಾ ಇರಲಿಲ್ಲವಲ್ಲ!’ ಎಂದೊಮ್ಮೆ ಉದ್ಗರಿಸಿದ್ದರು.
ಇಂಥ ಬುಮ್ರಾ ನಾಳೆ ಶುರುವಾಗಲಿರುವ ಮೊದಲ ಟೆಸ್ಟ್ನಲ್ಲಿ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಲಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಬುಮ್ರಾ ನಡುವೆ ಬಾಯಲ್ಲಿ ನೀರೂರಿಸುವಂಥ ಹಣಾಹಣಿ ನಡೆಯಲಿದೆ. ಬುಮ್ರಾ ಇದುವರೆಗಿನ ತಮ್ಮ ಚಿಕ್ಕ ಕರೀಯರ್ನಲ್ಲಿ ತೋರಿರುವ ಚಮತ್ಕಾರವನ್ನು ಪುನರಾವರ್ತಿಸುವರೋ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.
Published On - 9:20 pm, Wed, 16 December 20