ಅಸ್ಟ್ರೇಲಿಯ ವಿರುದ್ಧ ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಭಾರತೀಯ ಟೀಮಿಗೆ ಒಂದು ಸಂತೋಷದ ಸಂಗತಿ ಸಿಕ್ಕಿದೆ. ರವಿವಾರದಂದು ಸಿಡ್ನಿಯಲ್ಲಿ ನಡೆದ ಎರಡನೆ ಒಂದು ದಿನದ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ತೊಡೆಸಂದಿ ನೋವಿಗೀಡಾದ ಸ್ಫೋಟಕ ಆರಂಭ ಆಟಗಾರ ಡೇವಿಡ್ ವಾರ್ನರ್ ಬುಧವಾರ ನಡೆಯಬೇಕಿರುವ ಮೂರನೆ ಒಂದು ದಿನದ ಪಂದ್ಯ ಮತ್ತು ಅದಾದ ನಂತರ ನಡೆಯುವ ಮೂರು ಟಿ20 ಪಂದ್ಯಗಳನ್ನು ಆಡಲಾರರು. ಡಿಸೆಂಬರ್ 17ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಭಾಗಿಯಾಗುವುದು ಕೂಡ ಅನುಮಾನಾಸ್ಪದವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ತಿಳಿಸಿದೆ.
ಓದುಗರಿಗೆ ಗೊತ್ತಿರುವಂತೆ ರವಿವಾರದಂದು ಭಾರತ ಬ್ಯಾಟ್ ಮಾಡುತ್ತಿದ್ದಾಗ, ನಾಲ್ಕನೆ ಓವರ್ನಲ್ಲಿ ಶಿಖರ್ ಧವನ್ ಬಾರಿಸಿದ ಚೆಂಡನ್ನು ಫೀಲ್ಡ್ ಮಾಡುವ ಪ್ರಯತ್ನದಲ್ಲಿ ಡೈವ್ ಮಾಡಿದ ವಾರ್ನರ್ ತೊಡೆಸಂದಿ ನೋವಿಗೊಳಗಾಗಿ ಜೊತೆ ಆಟಗಾರರ ಸಹಾಯದಿಂದ ಮೈದಾನದಿಂದಾಚೆ ಬರಬೇಕಾಯಿತು. ಅವರಿಗಾಗಿರುವ ಗಾಯ ತೀವ್ರ ಸ್ವರೂಪದ್ದೆಂದು ಸಿಎ ಹೇಳಿದ್ದು ಅವರ ಗುಣಮುಖರಾಗಲು 2-3 ವಾರ ಬೇಕಾಗಬಹುದೆಂದು ಗೊತ್ತಾಗಿದೆ. ಈ ಪಂದ್ಯದಲ್ಲಿ ಅವರು 77 ಎಸೆತಗಳಲ್ಲಿ 83 ರನ್ ಬಾರಿಸಿ ನಾಯಕ ಆರನ್ ಫಿಂಚ್ ಅವರೊಂದಿಗೆ ಮತ್ತೊಂದು ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.
ಏತನ್ಮಧ್ಯೆ, ಟೆಸ್ಟ್ ಪಂದ್ಯಗಳು ಶುರುವಾಗುವ ಮೊದಲು ವಿಶ್ರಾಂತಿ ಪಡೆಯುವುದಕ್ಕೋಸ್ಕರ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆಯೆಂದು ಸಿಎ ತಿಳಿಸಿದೆ. ಟಿ20 ಪಂದ್ಯಗಳಲ್ಲಿ ಆಡಲಿರುವ ಅತಿಥೇಯರ ತಂಡಕ್ಕೆ ಡಾರ್ಸಿ ಶಾರ್ಟ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯ ನಡುವೆ ಮೂರನೆ ಹಾಗೂ ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಬುಧವಾರದಂದು ಕ್ಯಾನ್ಬೆರಾದಲ್ಲಿ ನಡೆಯಲಿದೆ.