Virat Kohli: 5475 ದಿನಗಳ ಕ್ರಿಕೆಟ್ ಬದುಕಿನಲ್ಲಿ ಕಿಂಗ್ ಕೊಹ್ಲಿಯ ಪ್ರಮುಖ 15 ಸಾಧನೆಗಳಿವು

|

Updated on: Aug 18, 2023 | 4:13 PM

Virat Kohli: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕಾಲಿಟ್ಟು ಇಂದಿಗೆ 15 ವರ್ಷಗಳು ಕಳೆದಿವೆ. 15 ವರ್ಷಗಳು ಅಂದರೆ 5475 ದಿನಗಳಲ್ಲಿ ಕೊಹ್ಲಿ ಖಾತೆಗೆ ಸಾಕಷ್ಟು ದಾಖಲೆಗಳು ಸೇರಿವೆ. ಆದರೆ ಕೊಹ್ಲಿ ವೃತ್ತಿಜೀವನದಲ್ಲಿನ 15 ವಿಶೇಷ ಸಂಗತಿಗಳ ವಿವರವನ್ನು ನಾವು ನಿಮಗೆ ಹೇಳಲಿದ್ದೇವೆ.

Virat Kohli: 5475 ದಿನಗಳ ಕ್ರಿಕೆಟ್ ಬದುಕಿನಲ್ಲಿ ಕಿಂಗ್ ಕೊಹ್ಲಿಯ ಪ್ರಮುಖ 15 ಸಾಧನೆಗಳಿವು
ವಿರಾಟ್ ಕೊಹ್ಲಿ
Follow us on

501 ಪಂದ್ಯಗಳು, 25582 ರನ್‌, 76 ಶತಕ… ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ (Virat Kohli) ಸಾಧನೆಗಳನ್ನು ವಿವರಿಸಲು ಈ ಅಂಕಿಅಂಶಗಳೇ ಸಾಕು. ತನ್ನ ಸರ್ವಶ್ರೇಷ್ಠ ಪ್ರದರ್ಶನದಿಂದಾಗಿ ವಿಶ್ವ ಕ್ರಿಕೆಟ್​ನ ರಾಜನಾಗಿ ಮೆರೆಯುತ್ತಿರುವ ಕೊಹ್ಲಿಗೆ ಈ ದಿನ ಬಹಳ ಮಹತ್ವದ್ದಾಗಿದೆ. ಇಂದಿಗೆ ಸರಿಯಾಗಿ 15 ವರ್ಷಗಳ ಹಿಂದೆ, ಅಂದರೆ 18 ಆಗಸ್ಟ್ 2008 ರಂದು ಕೊಹ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ (International Cricket) ಪಂದ್ಯವನ್ನಾಡಿದ ದಿನವಿದು. ಅಂದು ತಮ್ಮ ಚೊಚ್ಚಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದ ಕೊಹ್ಲಿ, 33 ನಿಮಿಷವಷ್ಟೇ ಮೈದಾನದಲ್ಲಿ ಬ್ಯಾಟ್ ಬೀಸಿದ್ದರು. ಅಂದಿನಿಂದ ಆರಂಭವಾದ ಕಿಂಗ್ ಕೊಹ್ಲಿಯ ಕ್ರಿಕೆಟ್ ಜರ್ನಿಗೆ ಇಂದು ಭರ್ತಿ 15 ವರ್ಷ. ಈ ಒಂದೂವರೆ ದಶಕದ ಪ್ರಯಾಣದಲ್ಲಿ ಕೊಹ್ಲಿ ಸೃಷ್ಟಿಸಿದ ದಾಖಲೆಗಳಿಗೆ ಲೆಕ್ಕವಿಲ್ಲ.

ಕೊಹ್ಲಿ ಅಂತರಾಷ್ಟ್ರೀಯ ವೃತ್ತಿಜೀವನ

2008ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ ಈ ಮಾದರಿಯಲ್ಲಿ 275 ಪಂದ್ಯಗಳಲ್ಲಿ 12898 ರನ್ ಬಾರಿಸಿದ್ದಾರೆ. ಇದರಲ್ಲಿ 46 ಶತಕಗಳು ಮತ್ತು 65 ಅರ್ಧ ಶತಕಗಳು ಸೇರಿವೆ. 2 ವರ್ಷಗಳ ಬಳಿಕ ಅಂದರೆ 2010 ರಲ್ಲಿ ಟಿ20 ಗೆ ಪಾದಾರ್ಪಣೆ ಮಾಡಿದ ವಿರಾಟ್, 115 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 37 ಅರ್ಧ ಶತಕ ಸೇರಿದಂತೆ ಒಟ್ಟು 4008 ರನ್ ಗಳಿಸಿದ್ದಾರೆ. ಮತ್ತೊಂದೆಡೆ, 2011 ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಈ ಸ್ವರೂಪದಲ್ಲಿ 29 ಶತಕಗಳು ಮತ್ತು ಅರ್ಧ ಶತಕಗಳು ಸೇರಿದಂತೆ ಒಟ್ಟು 8676 ರನ್‌ ಸಿಡಿಸಿದ್ದಾರೆ.

Virat Kohli:‘ಎಲ್ಲಾ ಸುಳ್ಳು’; ಇನ್​ಸ್ಟಾಗ್ರಾಮ್ ಆದಾಯದ ಬಗ್ಗೆ ಸ್ಪಷ್ಟನೆ ನೀಡಿದ ಕೊಹ್ಲಿ

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕಾಲಿಟ್ಟು ಇಂದಿಗೆ 15 ವರ್ಷಗಳು ಕಳೆದಿವೆ. 15 ವರ್ಷಗಳು ಅಂದರೆ 5475 ದಿನಗಳಲ್ಲಿ ಕೊಹ್ಲಿ ಖಾತೆಗೆ ಸಾಕಷ್ಟು ದಾಖಲೆಗಳು ಸೇರಿವೆ. ಆದರೆ ಕೊಹ್ಲಿ ವೃತ್ತಿಜೀವನದಲ್ಲಿನ 15 ವಿಶೇಷ ಸಂಗತಿಗಳ ವಿವರವನ್ನು ನಾವು ನಿಮಗೆ ಹೇಳಲಿದ್ದೇವೆ.

  1. 2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು.
  2. 2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಕೊಹ್ಲಿ, ತಮ್ಮ ಬ್ಯಾಟ್ ಮೂಲಕ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು.
  3. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ 43 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
  4. 2013 ರಲ್ಲಿ, ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಏಕದಿನ ಬ್ಯಾಟ್ಸ್‌ಮನ್ ಪಟ್ಟಕ್ಕೇರಿದ ವಿರಾಟ್, 2018 ರಲ್ಲಿ ಟೆಸ್ಟ್‌ನಲ್ಲಿ ನಂಬರ್ ಒನ್ ಬ್ಯಾಟರ್ ಎನಿಸಿಕೊಂಡರು. ಅಲ್ಲದೆ ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.
  5. 2014 ರಲ್ಲಿ ಎಂಎಸ್ ಧೋನಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಕೊಹ್ಲಿಯನ್ನು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಯಿತು. ಆ ನಂತರ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಕೊಹ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕನಾಗಿ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
  6. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ 4008 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.
  7. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದು, ಅವರು 213 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  8. 2018 ರಲ್ಲಿ, ಕೊಹ್ಲಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಯಿತು.
  9. 2018-2019ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ಮತ್ತು ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆ ಕೊಹ್ಲಿ ಪಾಲಾಯಿತು.
  10. ಟೆಸ್ಟ್ ನಂತರ ಟಿ20 ಮತ್ತು ಏಕದಿನ ತಂಡದ ನಾಯಕತ್ವವನ್ನೂ ವಹಿಸಿಕೊಂಡ ಕೊಹ್ಲಿ, 2019ರಲ್ಲಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಆಡಿತ್ತು.
  11. 2020 ರಲ್ಲಿ ಕೊಹ್ಲಿಗೆ, ಐಸಿಸಿ ದಶಕದ ಅತ್ಯುತ್ತಮ ಪುರುಷ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  12. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ ನಂತರ 500 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಾಲ್ಕನೇ ಭಾರತೀಯ ಆಟಗಾರ ವಿರಾಟ್ ಕೊಹ್ಲಿ.
  13. ಸಚಿನ್ ತೆಂಡೂಲ್ಕರ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76 ಶತಕ ಸಿಡಿಸಿದ ಎರಡನೇ ಆಟಗಾರ ಕೊಹ್ಲಿ.
  14. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7 ದ್ವಿಶತಕಗಳನ್ನು ಸಿಡಿಸಿದ ಏಕೈಕ ಭಾರತೀಯ ವಿರಾಟ್.
  15. ಕೊಹ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕ ಕೂಡ ಆಗಿದ್ದಾರೆ . ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದ್ದು, 11 ಪಂದ್ಯಗಳು ಡ್ರಾ ಆಗಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Fri, 18 August 23