
2026 ರ ಮಹಿಳಾ ಏಷ್ಯಾಕಪ್‌ನ ಒಂಬತ್ತನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಸತತ 3ನೇ ಗೆಲುವು ದಾಖಲಿಸುವ ಮೂಲಕ ಅಜೇಯ ತಂಡವಾಗಿ ಸೆಮಿಫೈನಲ್ಗೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 8.2 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತು.
ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸತತ ಐದನೇ ಟಿ20 ಗೆಲುವಿನ ಗುರಿ ಹೊಂದಿದ್ದರೆ, ಇತ್ತ ಪಾಕಿಸ್ತಾನ ಭಾರತದ ವಿರುದ್ಧದ ಗೆಲುವಿನ ಬರವನ್ನು ಕೊನೆಗೊಳಿಸುವ ಇರಾದೆಯಲ್ಲಿತ್ತು. ಅಕ್ಟೋಬರ್ 2022 ರಿಂದ ಇದುವರೆಗೆ ಭಾರತದ ವಿರುದ್ಧ ನಡೆದಿದ್ದ ಎಲ್ಲಾ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನ ಸೋತಿತ್ತು. ಹೀಗಾಗಿ ಈ ಪಂದ್ಯವನ್ನು ಗೆದ್ದು ಸೋಲಿನ ಸರಪಳಿ ಮುರಿಯುವ ಕನಸು ಕಂಡಿದ್ದ ಪಾಕ್ ತಂಡವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋಲಿಸಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಿದರು ಎಂದರೆ ತಪ್ಪಲ್ಲ.
ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಆರಂಭಿಕರಾದ ಮುನೀಬಾ ಅಲಿ ಮತ್ತು ಶಾವಲ್ ಜುಲ್ಫಿಕರ್ 4.2 ಓವರ್‌ಗಳಲ್ಲಿ 27 ರನ್‌ಗಳನ್ನು ಸೇರಿಸುವ ಮೂಲಕ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಈ ಅವಧಿಯಲ್ಲಿ ಪ್ರತಿಕಾ ರಾವಲ್ ಎರಡೂ ಬಾರಿ ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣದಿಂದ ಮುನೀಬಾಗೆ ಎರಡು ಜೀವದಾನಗಳು ದಕ್ಕಿದವು. ಆದಾಗ್ಯೂ, ಮುನೀಬಾ ಅಥವಾ ಪಾಕಿಸ್ತಾನ ತಂಡ ಈ ಆರಂಭವನ್ನು ಬಳಸಿಕೊಳ್ಳಲು ಮತ್ತು ಬಲವಾದ ಮೊತ್ತವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ.
Team India have done it again against their arch-rivals ~ making it 9-1 in the head-to-head! 🇮🇳 #DPWorldWomensAsiaCup2026 #INDWvPAKW #ACC pic.twitter.com/c6jFFoZ55K
— AsianCricketCouncil (@ACCMedia1) September 5, 2026
ಶ್ರೀ ಚರಣಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್ ಮತ್ತು ಶಫಾಲಿ ವರ್ಮಾ ಅವರನ್ನೊಳಗೊಂಡ ಭಾರತೀಯ ಸ್ಪಿನ್ ದಾಳಿಯು ಪಾಕಿಸ್ತಾನವನ್ನು ಕೇವಲ 55 ರನ್‌ಗಳಿಗೆ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಇದರರ್ಥ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ನಂತರ, ಪಾಕಿಸ್ತಾನ ಮುಂದಿನ ಒಂಬತ್ತು ವಿಕೆಟ್‌ಗಳನ್ನು ಕೇವಲ 28 ರನ್‌ಗಳಿಗೆ ಕಳೆದುಕೊಂಡಿತು. ಈ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆ ಬರೆಯಿತು.
35 ರನ್‌ಗಳಿಗೆ 6 ವಿಕೆಟ್..! ಭಾರತದ ಬೌಲಿಂಗ್ಗೆ ಪಾಕಿಸ್ತಾನ ವಿಲವಿಲ
ಈ ಗುರಿ ಬೆನ್ನಟ್ಟಿದ ಭಾರತದ ಪರ ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಬೇಗನೇ ಗೆಲುವಿನ ದಡ ಮುಟ್ಟಿಸುವ ಸುಳಿವು ನೀಡಿದರು. ಆದರೆ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ತಮ್ಮ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ಎರಡು ಓವರ್‌ಗಳ ಒಳಗೆ ಶಫಾಲಿ, ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತವನ್ನು ಸ್ವಲ್ಪ ತೊಂದರೆಗೆ ಸಿಲುಕಿಸಿದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ (18) ಮತ್ತು ದೀಪ್ತಿ ಶರ್ಮಾ (12) ಒಟ್ಟಾಗಿ 8.4 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
Published On - 10:23 pm, Sat, 5 September 26