ಭೀಕರ ಬೌನ್ಸರ್… ಚೆಂಡು ನೇರವಾಗಿ ಸಿಕ್ಸರ್​ಗೆ! ಅಂಪೈರ್ ನೀಡಿದ್ದು 5 ರನ್​!

ಬ್ಯಾಟ್ ಬೀಸದೆಯೇ ಸಿಕ್ಸರ್! ಕ್ರಿಕೆಟ್ ಇತಿಹಾಸದಲ್ಲೇ ಕಾಣದ ಮಹಾ ವಿಸ್ಮಯಕ್ಕೆ ಸಾಕ್ಷಿಯಾದ ಕೆನಡಾ ಸೂಪರ್ 60! ಬೌಲರ್ ಎಸೆದ ಚೆಂಡು ನೇರವಾಗಿ ಗ್ಯಾಲರಿ ಸೇರಿದ್ದನ್ನು ನೋಡಿ ಇಡೀ ಕ್ರೀಡಾಂಗಣವೇ ಶಾಕ್ ಆಗಿತ್ತು. ಆದರೆ ಅಂಪೈರ್ ನೀಡಿದ್ದು ಕೇವಲ 5 ರನ್ ಮಾತ್ರ. ಇದಕ್ಕೆ ಕಾರಣ ಎಂಸಿಸಿ ನಿಯಮ.

ಭೀಕರ ಬೌನ್ಸರ್... ಚೆಂಡು ನೇರವಾಗಿ ಸಿಕ್ಸರ್​ಗೆ! ಅಂಪೈರ್ ನೀಡಿದ್ದು 5 ರನ್​!
Canada Super 60
Image Credit source: Fancode

Updated on: Oct 05, 2026 | 1:31 PM

ಕ್ರಿಕೆಟ್ ಇತಿಹಾಸವು ಹಲವು ರೋಚಕ ಹಾಗೂ ವಿಚಿತ್ರ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಆದರೆ, ಕೆನಡಾದಲ್ಲಿ ನಡೆಯುತ್ತಿರುವ ಕೆನಡಾ ಸೂಪರ್-60 ಟಿ10 ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯವೊಂದರಲ್ಲಿ ಬೌಲರ್ ಎಸೆದ ಚೆಂಡು ನೇರವಾಗಿ ಹೋಗಿ ಬಿದ್ದದ್ದು ಸಿಕ್ಸರ್​ಗೆ..! ಅಚ್ಚರಿ ಎನಿಸಿದರೂ ಇದು ಸತ್ಯ.

ವ್ಯಾಂಕೋವರ್‌ನ ಬಿಸಿ ಪ್ಲೇಸ್ ಕ್ರೀಡಾಂಗಣದಲ್ಲಿ ನಡೆದ ಟೊರೊಂಟೊ ಸಿಕ್ಸರ್ಸ್ ಮತ್ತು ಮಿಸಿಸೌಗಾ ಮಾಸ್ಟರ್ಸ್ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಈ ಹೈ-ಡ್ರಾಮಾ ನಡೆಯಿತು. ಮಿಸಿಸೌಗಾ ಮಾಸ್ಟರ್ಸ್ ತಂಡದ ವೇಗಿ, ಅಮೆರಿಕನ್ ಆಟಗಾರ ಅಲಿ ಖಾನ್, ಟೊರೊಂಟೊ ಸಿಕ್ಸರ್ಸ್ ತಂಡದ ಬ್ಯಾಟರ್ ಕೀರನ್ ಪೊಲಾರ್ಡ್ ಅವರಿಗೆ ಭೀಕರ ಬೌನ್ಸರ್ ಒಂದನ್ನು ಎಸೆದರು.

ಆದರೆ ಚೆಂಡು ಪಿಚ್ ಆದ ಬಳಿಕ ಅತಿ ಎತ್ತರಕ್ಕೆ ಪುಟಿದು, ಬ್ಯಾಟರ್ ಹಾಗೂ ವಿಕೆಟ್ ಕೀಪರ್ ತಲೆಯ ಮೇಲಿಂದ ಹಾರಿ, ನೆಲ ಮುಟ್ಟದೆಯೇ ನೇರವಾಗಿ ಬೌಂಡರಿ ಗೆರೆಯ ಆಚೆ ಹೋಗಿ ಬಿತ್ತು.

ನೋಡಲು ಇದು ಸ್ಪಷ್ಟವಾಗಿ ‘ವೈಡ್ ಸಿಕ್ಸ್’ ತರಹ ಇತ್ತು. ಕಾಮೆಂಟೇಟರ್ ಬಾಕ್ಸ್‌ನಲ್ಲಿದ್ದ ಡ್ಯಾನಿ ಮಾರಿಸನ್ ಕೂಡ “ಇದು ಸಿಕ್ಸ್ ವೈಡ್!” ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ಮೈದಾನದಲ್ಲಿದ್ದ ಅಂಪೈರ್ ಸಿಗ್ನಲ್ ಮಾಡಿದ್ದು ಮಾತ್ರ ‘ಫೈವ್ ವೈಡ್ಸ್’ ಎಂದು.

ಸಿಕ್ಸ್ ಆದರೂ 5 ರನ್:

ಈ ವೈಡ್ ಸಿಕ್ಸ್​ ನೋಡಿ ವೀಕ್ಷಕರು ಮತ್ತು ಅಭಿಮಾನಿಗಳಿಗೆ ಒಂದು ವೈಡ್ ರನ್ ಮತ್ತು ಸಿಕ್ಸರ್‌ನ 6 ರನ್ ಸೇರಿ ಒಟ್ಟು 7 ರನ್ ನಿರೀಕ್ಷೆಯಲ್ಲಿದ್ದರು. ಆದರೆ ಫೀಲ್ಡ್ ಅಂಪೈರ್ ಕೇವಲ ವೈಡ್ + ಫೋರ್ ನೀಡಿದರು. ಅಂದರೆ 5 ರನ್ ಎಂದು ತೀರ್ಪಿತ್ತರು. ಇದಕ್ಕೆ ಕಾರಣ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ನಿಯಮ.

ಬ್ಯಾಟ್‌ಗೆ ತಗುಲಿದರೆ ಮಾತ್ರ ಸಿಕ್ಸ್: ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ತಂಡಕ್ಕೆ 6 ರನ್ ಸಿಗಬೇಕಾದರೆ, ಚೆಂಡು ಕಡ್ಡಾಯವಾಗಿ ಬ್ಯಾಟರ್‌ನ ಬ್ಯಾಟ್‌ಗೆ ಅಥವಾ ಆತನ ದೇಹ/ಹೆಲ್ಮೆಟ್‌ಗೆ ತಗುಲಿ ನೇರವಾಗಿ ಬೌಂಡರಿ ಗೆರೆ ದಾಟಬೇಕು.

ಬ್ಯಾಟ್‌ಗೆ ತಗುಲದಿದ್ದರೆ ಬೌಂಡರಿ ಬೈಸ್: ಬೌಲರ್ ಎಸೆದ ಚೆಂಡು ಬ್ಯಾಟ್ ಅಥವಾ ಯಾವುದೇ ಫೀಲ್ಡರ್ ಕೈಗೆ ತಗುಲದೆ ನೇರವಾಗಿ ಬೌಂಡರಿ ಗೆರೆ ದಾಟಿದರೆ, ಅದನ್ನು ಬೌಂಡರಿ 4 ರನ್ ಎಂದೇ ಪರಿಗಣಿಸಲಾಗುತ್ತದೆ (ಅದು ನೆಲಕ್ಕೆ ತಾಗದೇ ಹೋದರೂ ಸಹ).

ಹೀಗಾಗಿ, ಅಲಿ ಖಾನ್ ಎಸೆದ ಚೆಂಡು ವೈಡ್ ಆಗಿದ್ದಕ್ಕೆ 1 ರನ್ ಮತ್ತು ಅದು ಯಾರದೇ ಸಂಪರ್ಕವಿಲ್ಲದೆ ಬೌಂಡರಿ ದಾಟಿದ್ದಕ್ಕೆ 4 ರನ್ ಸೇರಿ ಒಟ್ಟು 5 ರನ್ ಮಾತ್ರ ನೀಡಲಾಯಿತು. ಇದೀಗ ಈ ವೈಡ್ ಸಿಕ್ಸ್ ಎಸೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈಲ್ ಆಗಿದೆ.

ಕ್ರೀಡಾಂಗಣದ ಗಾತ್ರ ಕಾರಣ!

ಬಿಸಿ ಪ್ಲೇಸ್ ಕ್ರೀಡಾಂಗಣದ ಬೌಂಡರಿಗಳು ಅತ್ಯಂತ ಚಿಕ್ಕದಾಗಿದ್ದು (ಸುಮಾರು 45 ಮೀಟರ್), ಇದೂ ಕೂಡ ಚೆಂಡು ಸುಲಭವಾಗಿ ಗ್ಯಾಲರಿ ಸೇರಲು ಪ್ರಮುಖ ಕಾರಣವಾಯಿತು. ಈ ವಿಚಿತ್ರ ಎಸೆತದ ನಡುವೆಯೂ, ಪಂದ್ಯದಲ್ಲಿ ಟೊರೊಂಟೊ ಸಿಕ್ಸರ್ಸ್ ತಂಡವು 9 ರನ್‌ಗಳ ಜಯ ಸಾಧಿಸಿ ಫೈನಲ್ ತಲುಪಿತು. ಏನೇ ಆದರೂ, ಈ ಪಂದ್ಯ ಮಾತ್ರ ಅಲಿ ಖಾನ್ ಅವರ ‘ವೈಡ್ ಸಿಕ್ಸ್’ ಎಸೆತದಿಂದಾಗಿ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us