Super 60: ಹೊಸ ಕ್ರಿಕೆಟ್ ಲೀಗ್ ಶುರು ಮಾಡಿದ ಯುವರಾಜ್ ಸಿಂಗ್
Super 60 Cricket League: ಟಿ20 ಕ್ರಿಕೆಟ್ ನಡುವೆ ಇದೀಗ ಟಿ10 ಲೀಗ್ ಕೂಡ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅಬುಧಾಬಿ ಟಿ10 ಲೀಗ್ನೊಂದಿಗೆ ಶುರುವಾದ ಈ ಟ್ರೆಂಡ್ ಇದೀಗ ಕೆನಡಾದಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಅಂದರೆ ಕೆನಡಾದಲ್ಲಿ ಸೂಪರ್-60 ಹೆಸರಿನಲ್ಲಿ ಹೊಸ ಲೀಗ್ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಕ್ರಿಕೆಟ್ ಅಂಗಳಕ್ಕೆ ಹೊಸ ಲೀಗ್ ಪರಿಚಯಿಸಲು ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ (Yuvraj Singh) ಮುಂದಾಗಿದ್ದಾರೆ. ಯುವರಾಜ್ ಸಿಂಗ್ ಹಾಗೂ 333 Sports Inc, ಕೆನಡಾ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಸೂಪರ್-60 (Super 60) ಹೆಸರಿನಲ್ಲಿ ಟಿ10 ಶುರು ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಕೆನಾಡದಲ್ಲಿ ನಡೆಯಲಿರುವ ಈ ಟಿ10 ಲೀಗ್‌ಗಾಗಿ ಈಗಾಗಲೇ 1300 ಕ್ಕೂ ಅಧಿಕ ಪ್ಲೇಯರ್ಸ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಲ್ಯಾಮ್-ಬ್ಯಾಂಗ್ ಟಿ10 ಸ್ವರೂಪದಲ್ಲಿ ನಡೆಯಲಿರುವ ಲೀಗ್‌ಗಾಗಿ 1135 ಪುರುಷ ಮತ್ತು 235 ಮಹಿಳಾ ಆಟಗಾರ್ತಿಯರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಡ್ರಾಫ್ಟ್ ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೀಗೆ ಹೆಸರು ನೋಂದಾಯಿಸಿಕೊಂಡಿರುವ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಫಿನ್ ಅಲೆನ್, ಸಿಕಂದರ್ ರಾಝ, ನಸೀಮ್ ಶಾ, ಅಲೆಕ್ಸ್ ಹೇಲ್ಸ್, ಶಮರ್ ಜೋಸೆಫ್, ಜೇಸನ್ ರಾಯ್, ಕೇಶವ್ ಮಹಾರಾಜ್, ಟಿಮ್ ಸೀಫರ್ಟ್, ಟಿಮ್ ಸೌಥಿ, ಜಿಮ್ಮಿ ನೀಶಮ್, ಆಝಂ ಖಾನ್, ಲುಂಗಿ ಎನ್‌ಗಿಡಿ, ರಿಲೀ ರೊಸ್ಸೌ, ಕ್ರಿಸ್ ಲಿನ್, ಜೇಸನ್ ಹೋಲ್ಡರ್, ಆಂಡ್ರೆ ಫ್ಲೆಚರ್, ಕೈಲ್ ಮೇಯರ್ಸ್, ತಬ್ರೇಝ್ ಶಮ್ಸಿ, ಭಾನುಕ ರಾಜಪಕ್ಸೆ, ಮಾರ್ಟಿನ್ ಗುಪ್ಟಿಲ್, ಡೇವಿಡ್ ಮಲಾನ್, ಮೆಹಿದಿ ಹಸನ್ ಮಿರಾಝ್, ತಂಝಿದ್ ಹಸನ್ ತಮೀಮ್, ಚಾಡ್ ಬೋವ್ಸ್ ಮತ್ತು ಗುಡಕೇಶ್ ಮೋಟಿ.
ಮಹಿಳಾ ಕ್ರಿಕೆಟಿಗರಲ್ಲಿ ಮ್ಯಾಡಿ ಗ್ರೀನ್, ಫ್ರಾನ್ ಜೋನಾಸ್, ರೋಸ್ಮರಿ ಮೈರ್, ಈಡನ್ ಕಾರ್ಸನ್, ಟಾಜ್ಮಿನ್ ಬ್ರಿಟ್ಸ್, ಆಮಿ ಸ್ಮಿತ್, ಲಾರೆನ್ ವಿನ್‌ಫೀಲ್ಡ್-ಹಿಲ್, ಜೆಸ್ ಜೊನಾಸ್ಸೆನ್, ಶಬ್ನಮ್ ಇಸ್ಮಾಯಿಲ್, ಲಾರಾ ಹ್ಯಾರಿಸ್, ಡಿಯಾಂಡ್ರಾ ಡಾಟಿನ್, ಶಿನೆಲ್ಲೆ ಹೆನ್ರಿ, ಸಿನಾಲೊ ಜಾಫ್ತಾ, ನೊನ್‌ಕುಲುಲೆಕೊ ಮ್ಲಾಬಾ, ಫಾತಿಮಾ ಸನಾ ಮತ್ತು ಲಿಯಾ ತಹುಹು ಹೆಸರುಗಳು ಕಾಣಿಸಿಕೊಂಡಿದೆ.
8 ತಂಡಗಳ ಟೂರ್ನಿ:
ಸೂಪರ್-60 ಟಿ10 ಲೀಗ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳ ಘೋಷಣೆ ಶೀಘ್ರದಲ್ಲೇ ನಡೆಯಲಿದೆ. ಅಲ್ಲದೆ ಇದೇ ವರ್ಷ ಜುಲೈನಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಕೆನಡಾದಲ್ಲಿ ಈಗಾಗಲೇ ಗ್ಲೋಬಲ್ ಟಿ20 ಕೆನಡಾ ಹೆಸರಿನಲ್ಲಿ ಟಿ20 ಲೀಗ್ ಆಯೋಜನೆಗೊಳ್ಳುತ್ತಿದೆ. 2018 ರಲ್ಲಿ ಶುರುವಾದ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿವೆ. ಇದೀಗ 8 ತಂಡಗಳ ನಡುವಣ ಸೂಪರ್-60 ಟಿ10 ಲೀಗ್ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಈ ಹಿಂದೆ ಕೆನಡಾ ಟಿ20 ಲೀಗ್ನಲ್ಲಿ ಮಾರ್ಕಸ್ ಸ್ಟೊಯಿನಿಸ್, ರಹಮಾನಲ್ಲಾ ಗುರ್ಬಾಝ್, ಡೇವಿಡ್ ವಾರ್ನರ್, ಸುನಿಲ್ ನರೈನ್ ಮತ್ತು ಮೊಹಮ್ಮದ್ ಅಮೀರ್ ಅವರಂತಹ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದರು. ಈ ಆಟಗಾರರು ಸೂಪರ್-60 ಲೀಗ್ ತಂಡಗಳ ಭಾಗವಾಗುವ ನಿರೀಕ್ಷೆಯಿದೆ. ಈ ಮೂಲಕ ಚೊಚ್ಚಲ ಸೂಪರ್-60 ಲೀಗ್ ಅನ್ನು ಅದ್ಧೂರಿಯಾಗಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ.