IPL 2025: RCB ಏನಾದ್ರು ಪ್ಲೇಆಫ್ಗೆ ಹೋದ್ರೆ… ಅಂಬಾಟಿ ರಾಯುಡು ಅಚ್ಚರಿಯ ಹೇಳಿಕೆ
IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 8 ಪಂದ್ಯಗಳನ್ನಾಡಿದೆ. ಈ ಎಂಟು ಮ್ಯಾಚ್ಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದೆ. ಆರ್ಸಿಬಿ ಈ 5 ಪಂದ್ಯಗಳನ್ನು ಗೆದ್ದಿರುವುದು ಎದುರಾಳಿಗಳ ತವರು ಮೈದಾನದಲ್ಲಿ ಎಂಬುದು ವಿಶೇಷ.

IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತಿದೆ. ಅದರಲ್ಲೂ ತವರಿನಲ್ಲಿ ಸೋಲುತ್ತಿರುವ ಆರ್ಸಿಬಿ ತಂಡವು ಎದುರಾಳಿಗಳ ತವರು ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈ ಪ್ರದರ್ಶನೊಂದಿಗೆ ಆರ್ಸಿಬಿ ತಂಡವು 8 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದೆ.
ಈ ಐದು ಗೆಲುವುಗಳೊಂದಿಗೆ 10 ಅಂಕಗಳನ್ನು ಪಡೆದಿರುವ ಆರ್ಸಿಬಿ ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ನಿರೀಕ್ಷೆಯಲ್ಲಿದೆ. ಒಂದು ವೇಳೆ ಆರ್ಸಿಬಿ ಪಡೆ ಇದೇ ಪ್ರದರ್ಶನ ಮುಂದುವರೆಸಿದರೆ, ಅವರು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಂದಿದ್ದು ಮತ್ಯಾರೂ ಅಲ್ಲ, ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.
ಖಾಸಗಿ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಅಂಬಾಟಿ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೇ ಪ್ರದರ್ಶನದೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಟ್ಟರೆ ಅವರನ್ನು ತಡೆಯುವುದು ಕಷ್ಟ. ಆರ್ಸಿಬಿ ಏನಾದ್ರೂ ಪ್ಲೇಆಫ್ ಹಂತಕ್ಕೇರಿದರೆ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಳ್ಳಲಿದೆ.
ಒಂದು ವೇಳೆ ಆರ್ಸಿಬಿ ತಂಡವು ತನ್ನ ತವರಿನಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರುವುದು ಸುಲಭವಾಗಲಿದೆ. ಆದರೆ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮೂರು ಪಂದ್ಯ ಸೋತಿರುವುದೇ ಈಗ ಅವರ ದೊಡ್ಡ ಚಿಂತೆ. ಇದಾಗ್ಯೂ ಮುಂದಿನ ಪಂದ್ಯಗಳಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಗೆಲುವು ದಾಖಲಿಸಿದರೆ, ನಾಕೌಟ್ ಹಂತಕ್ಕೇರುವುದನ್ನು ಎದುರು ನೋಡಬಹುದು.
ಇನ್ನು ಪ್ಲೇಆಫ್ ಹಂತಕ್ಕೇರಿದರೆ, ಆರ್ಸಿಬಿ ತಂಡವನ್ನು ಫೈನಲ್ನಲ್ಲಿ ಎದುರು ನೋಡಬಹುದು. ಏಕೆಂದರೆ ಪ್ಲೇಆಫ್ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಗಳಲ್ಲಿ ಆರ್ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ತಂಡ ಗೆಲ್ಲಬಾರದು ಎಂದು ಅಂಬಾಟಿ ರಾಯುಡು ಆಗ್ರಹಿಸಿದ್ದರು. ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ ರಾಯುಡು, ಆರ್ಸಿಬಿ ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು.
ನನ್ನ ಪ್ರಕಾರ ಈ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಬಹುದು. ಹೀಗಾಗಿ ನಾನು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಆಶಿಸುತ್ತೇನೆ ಎಂದು ರಾಯುಡು ಹೇಳಿದ್ದರು. ಆದರೀಗ ಸಿಎಸ್ಕೆ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಇದರ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಅಂಬಾಟಿ ರಾಯುಡು, ಈ ಬಾರಿ ಆರ್ಸಿಬಿ ಪ್ಲೇಆಫ್ಗೆ ಎಂಟ್ರಿ ಕೊಟ್ಟರೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದಿದ್ದಾರೆ.