ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಬೇಸರದ ದಿನ. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (AB de Villiers) ಇನ್ನುಂದೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸುವುದಿಲ್ಲ. ದಿಢೀರ್ ಆಗಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ (AB de Villiers Retirement) ಘೋಷಿಸಿದ್ದಾರೆ. ಒಬ್ಬ ಕ್ರಿಕೆಟ್ ಆಟಗಾರ ತನ್ನ ದೇಶದಲ್ಲಿ ಮಾತ್ರವಲ್ಲದೆ ಇತರೆ ದೇಶಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸುವುದು ತೀರಾ ಕಡಿಮೆ. ಆದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರಿಗೆ ಇಡೀ ವಿಶ್ವದಲ್ಲೇ ಅಭಿಮಾನಿಗಳಿದ್ದಾರೆ. ಈ ಪೈಕಿ ಭಾರತದಲ್ಲಿ ತುಸು ಹೆಚ್ಚೇ ಎನ್ನಬಹುದು. ಎಬಿಡಿ ಅವರಿಗೂ ಭಾರತ ಎಂದರೆ ಅಚ್ಚುಮೆಚ್ಚು. ಇವರು ಐಪಿಎಲ್ನಲ್ಲಿ (IPL) ಆರ್‌ಸಿಬಿ (RCB) ತಂಡದ ಪರವಾಗಿ ಆಡುತ್ತಿದ್ದರೂ ಎದುರಾಳಿ ಅಭಿಮಾನಿಗಳು ಇವರ ಬ್ಯಾಟಿಂಗ್ಗೆ ಫಿದಾ ಆಗಿದ್ದೂ ಇದೆ.
“ನಾನು ಕೊನೆಯವರೆಗೂ ಆರ್‌ಸಿಬಿ ಆಟಗಾರನಾಗಿಯೇ ಇರುತ್ತೇನೆ. ಬೇರೆ ತಂಡದ ಪರ ಆಡುವುದಿಲ್ಲ” ಎಂದು ಈ ಹಿಂದೆ ಹಲವಾರು ಬಾರಿ ಎಬಿಡಿ ಪುನರುಚ್ಚರಿಸಿದ್ದರು. ಅದರಂತೆ ಇದೀಗ ಆರ್‌ಸಿಬಿ ಆಟಗಾರನಾಗಿಯೇ ಕ್ರಿಕೆಟ್‌ಗೆ ಎಬಿಡಿ ಗುಡ್ ಬೈ ಹೇಳಿದ್ದಾರೆ. ಪ್ರಮುಖವಾಗಿ ಭಾರತದ ಬಗ್ಗೆ ವಿಶೇಷವಾಗಿ ಎಬಿಡಿ ಮಾತನಾಡಿದ್ದು, “ನಾನು ಅರ್ಧ ಭಾರತೀಯ ಅರ್ಧ ದಕ್ಷಿಣ ಆಫ್ರಿಕಾದವನು. ಭಾರತವು ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ” ಎಂದು ಹೇಳಿದ್ದಾರೆ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊಟ್ಟ ಮೊದಲ ಬಾರಿ ಪ್ರತಿನಿಧಿಸಿದ್ದ ಎಬಿಡಿ, ಒಟ್ಟು 10 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಿದ್ದಾರೆ.
“ಇದೊಂದು ಅದ್ಭುತ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದುವರೆಗೆ ನಾನು ಶುದ್ಧವಾದ ಆನಂದ ಮತ್ತು ಕಡಿವಾಣವಿಲ್ಲದ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ಈಗ, 37 ನೇ ವಯಸ್ಸಿನಲ್ಲಿ, ಆ ಜ್ವಾಲೆಯು ಇನ್ನು ಮುಂದೆ ಪ್ರಕಾಶಮಾನವಾಗಿ ಉರಿಯುವುದಿಲ್ಲ. ಅದು ನಾನು ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಇದು ಹಠಾತ್ತಾಗಿ ಕಂಡರೂ ಸಹ, ನಾನು ಇಂದು ಈ ಘೋಷಣೆ ಮಾಡುತ್ತಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟಾನ್ಸ್, ಅಥವಾ ಪ್ರೋಟೀಸ್, ಅಥವಾ ಆರ್‌ಸಿಬಿ, ಅಥವಾ ಪ್ರಪಂಚದಾದ್ಯಂತ ಆಡುತ್ತಿರಲಿ, ಆಟವು ನನಗೆ ಊಹಿಸಲಾಗದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ, ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಅದೇ ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ”
ಎಂದು ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್ ಹಿಂದಿ ಭಾಷೆಯಲ್ಲೂ ಧನ್ಯವಾದ ಎಂದು ಬರೆದಿದ್ದಾರೆ.
“I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” – @ABdeVilliers17 #ThankYouAB pic.twitter.com/5b6RUYfjDY
— Royal Challengers Bangalore (@RCBTweets) November 19, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 156 ಐಪಿಎಲ್ ಪಂದ್ಯಗಳಾಡಿರುವ ಎಬಿ ಡಿವಿಲಿಯರ್ಸ್, 4,491 ರನ್‌ಗಳನ್ನು ಸಿಡಿಸಿದ್ದಾರೆ. ಆರ್‌ಸಿಬಿ ಇತಿಹಾಸದಲ್ಲಿಯೇ ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ಆಫ್ರಿಕಾ ಮಾಜಿ ನಾಯಕನ ಹೆಸರಿನಲ್ಲಿದೆ. 2015ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 133* ರನ್ ಹಾಗೂ 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಜೇಯ 129 ರನ್ ಸಿಡಿಸಿದ್ದರು. ಈ ಎರಡೂ ಇನಿಂಗ್ಸ್‌ಗಳು ಎಬಿಡಿ ಪಾಲಿಗೆ ಅತ್ಯಂತ ಶ್ರೇಷ್ಠ ಐಪಿಎಲ್ ಇನಿಂಗ್ಸ್‌ಗಳಾಗಿವೆ.
AB de Villiers: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್ ಶಾಕ್: ಎಲ್ಲ ಮಾದರಿಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್ಸ್ ವಿದಾಯ
(AB de Villiers Retirement ABD said I will be half Indian and half South African)
Published On - 2:05 pm, Fri, 19 November 21