Virat Kohli: ಇಂದಿನ ಪಂದ್ಯದಲ್ಲಿ ಕೊಹ್ಲಿ ದಾಖಲೆ ಉಡೀಸ್ ಮಾಡಲಿದ್ದಾರೆ ನ್ಯೂಜಿಲೆಂಡ್ನ ಈ ಆಟಗಾರ
Martin Guptill: ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆಯಲು ಮಾರ್ಟಿನ್ ಗಪ್ಟಿಲ್ಗೆ ಕೇವಲ 11 ರನ್ಗಳ ಅವಶ್ಯಕತೆಯಿದೆಯಷ್ಟೆ. ಸದ್ಯ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರಿದ್ದಾರೆ.
ನ್ಯೂಜಿಲೆಂಡ್ (New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ (India) ಇದೀಗ ಎರಡನೇ ಕದನಕ್ಕೆ ಸಜ್ಜಾಗಿದೆ. ಇಂದು ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ (India vs New Zealand) ನಡುವೆ ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಮತ್ತೊಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ (Martin Guptill) ಅವರು ವಿರಾಟ್ ಕೊಹ್ಲಿಯ (Virat Kohli) ವಿಶ್ವ ದಾಖಲೆ ಉಡೀಸ್ ಮಾಡಲು ಸಜ್ಜಾಗಿದ್ದಾರೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆಯಲು ಮಾರ್ಟಿನ್ ಗಪ್ಟಿಲ್ಗೆ ಕೇವಲ 11 ರನ್ಗಳ ಅವಶ್ಯಕತೆಯಿದೆಯಷ್ಟೆ. ಸದ್ಯ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರಿದ್ದು, ಇವರು 95 ಪಂದ್ಯಗಳಲ್ಲಿ 3227 ರನ್ ಕಲೆಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ಗಪ್ಟಿಲ್ ಅವರಿದ್ದು, ಇವರು 110 ಪಂದ್ಯಗಳಲ್ಲಿ 3217 ರನ್ ಬಾರಿಸಿದ್ದಾರೆ. ಇಂದಿನ ಎರಡನೇ ಟಿ20 ಪಂದ್ಯದಲ್ಲಿ ಮಾರ್ಟಿನ್ ಕೇವಲ 11 ರನ್ ಗಳಿಸಿದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ.
ಗಪ್ಟಿಲ್ ಅವರು ಎರಡು ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದರೆ, ಕೊಹ್ಲಿ 29 ಅರ್ಧಶತಕ ಬಾರಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ರೋಹಿತ್ ಶರ್ಮಾ ಆಗಿದ್ದಾರೆ. ಇವರು 109 ಪಂದ್ಯಗಳಿಂದ 3086 ರನ್ ಗಳಿಸಿದ್ದಾರೆ.
ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದೆ. ರೋಹಿತ್ ಪಡೆ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಟಿಮ್ ಸೌಧಿ ಪಡೆ ಸೇಡಿಗಾಗಿ ಕಾಯುತ್ತಿದೆ. ಅಲ್ಲದೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ವೈಫಲ್ಯವನ್ನು ಮರೆಮಾಚಲು ಟೀಮ್ ಇಂಡಿಯಾಕ್ಕೆ ಈ ಸರಣಿ ಬಹುಮುಖ್ಯವಾಗಿದ್ದು, ಕ್ಲೀನ್ ಸ್ವೀಪ್ ಮಾಡುವ ಪ್ಲಾನ್ ರೂಪಿಸಿದ್ದರೂ ಅಚ್ಚರಿ ಪಡಬೇಕಿಲ್ಲ.
ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ರನ್‌ಪ್ರವಾಹ ಹರಿಯುವ ನಿರೀಕ್ಷೆ ಇದೆ. ಜೊತೆಗೆ ಭಾರಿ ಇಬ್ಬನಿಯ ಸಮಸ್ಯೆಯಿಂದಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಟಾಸ್ ಗೆದ್ದ ತಂಡ ಎಂದಿನಂತೆ ಫೀಲ್ಡಿಂಗ್ ಆಯ್ದುಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಂದ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. 152 ರನ್ ಈ ಅಂಗಣದಲ್ಲಿ ಸರಾಸರಿ ಮೊತ್ತವಾಗಿದೆ.
ಇಂಡೋ- ಕಿವೀಸ್ ಎರಡನೇ ಟಿ20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ ಪ್ರಕ್ರಿಯೆ 6:30ಕ್ಕೆ ನಡೆಯಲಿದೆ. ಪಂದ್ಯದ ನೇರಪ್ರವಾಸ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಕೂಡ ನೇರಪ್ರಸಾರ ಕಾಣಲಿದೆ.
India vs New Zealand T20: ರಾಂಚಿ ಪಿಚ್ ಹೇಗಿದೆ?: ಟಾಸ್ ಗೆದ್ದ ತಂಡ ಏನು ಆಯ್ಕೆ ಮಾಡಿಕೊಳ್ಳಬೇಕು?
(Martin Guptill will eye a breaching Virat Kohlis elite record in T20I cricket on India vs New Zealand 2nd T20 Match)