ಒಂದು ಓವರ್‌ನಲ್ಲಿ 7 ಸಿಕ್ಸರ್‌! ರುತುರಾಜ್ ದಾಖಲೆಯನ್ನು ಸರಿಗಟ್ಟಿದ ಅಫ್ಘಾನ್ ಬ್ಯಾಟರ್; ವಿಡಿಯೋ ನೋಡಿ

|

Updated on: Jul 30, 2023 | 9:07 AM

Ruturaj Gaikwad: ಸೇದಿಕುಲ್ಲಾ ಅಟಲ್ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸುವ ಮೂಲಕ ರುತುರಾಜ್ ಗಾಯಕ್ವಾಡ್ ಅವರ ದಾಖಲೆಯನ್ನು ಸರಿಗಟ್ಟಿದರು.

ಒಂದು ಓವರ್‌ನಲ್ಲಿ 7 ಸಿಕ್ಸರ್‌! ರುತುರಾಜ್ ದಾಖಲೆಯನ್ನು ಸರಿಗಟ್ಟಿದ ಅಫ್ಘಾನ್ ಬ್ಯಾಟರ್; ವಿಡಿಯೋ ನೋಡಿ
ಸೇದಿಕುಲ್ಲಾ ಅಟಲ್, ರುತುರಾಜ್ ಗಾಯಕ್ವಾಡ್
Follow us on

ಕ್ರಿಕೆಟ್ ಒಂದು ಅನಿಶ್ಚಿತತೆಯ ಆಟ ಎಂಬುದು ಈಗಾಗಲೇ ಸಾಕಷ್ಟು ಬಾರಿ ಸಾಭೀತಾಗಿದೆ. ಈ ದಾಖಲೆಯನ್ನು ಯಾರಿಂದಲು ಮುರಿಯಲು ಸಾಧ್ಯವೇ ಇಲ್ಲ ಎಂಬ ದಾಖಲೆಗಳು ಕೂಡ ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುತ್ತವೆ. ಈಗ ಅಂತಹದ್ದೇ ದಾಖಲೆಯೊಂದು ಮತ್ತೊಮ್ಮೆ ಸೃಷ್ಟಿಯಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಬೂಲ್ ಪ್ರೀಮಿಯರ್ ಲೀಗ್‌ನ (Kabul Premier League) ಹತ್ತನೇ ಪಂದ್ಯದಲ್ಲಿ ಶಾಹೀನ್ ಹಂಟರ್ಸ್ ಮತ್ತು ಅಬಾಸಿನ್ ಡಿಫೆಂಡರ್ಸ್ ತಂಡಗಳು ಮುಖಾಮುಖಿಯಾದ್ದವು. ಈ ಪಂದ್ಯದಲ್ಲಿ ಶಾಹೀನ್ ಹಂಟರ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಫ್ಘಾನಿಸ್ತಾನದ 21 ವರ್ಷದ ಬ್ಯಾಟರ್ ಸೇದಿಕುಲ್ಲಾ ಅಟಲ್ (Sediqullah Atal) ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿ, ಈ ಹಿಂದೆ ಭಾರತದ ದೇಶೀ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ರುತುರಾಜ್ ( Ruturaj Gaikwad) ಬರೆದಿದ್ದ ಒಂದೇ ಓವರ್​ನಲ್ಲಿ 7 ಸಿಕ್ಸರ್​ಗಳ ದಾಖಲೆಯನ್ನು ಸರಿಗಟ್ಟಿದರು.

ತಂಡದ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಸೇದಿಕುಲ್ಲಾ ಅಟಲ್ ಶತಕ ಸಿಡಿಸಿ ಮಿಂಚಿದರು. ಒಂದೆಡೆ ತಂಡದ ವಿಕೆಟ್​ಗಳು ಸತತವಾಗಿ ಪತನವಾಗುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ ಅಟಲ್, ಕೊನೆಯ ಎಸೆತದವರೆಗೂ ಮೈದಾನದಲ್ಲಿ ನಿಂತು ತಂಡದ ಗೆಲುವಿನ ಹೀರೋ ಎನಿಸಿಕೊಂಡರು. ಅಲ್ಲದೆ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಜೇಯ 118 ರನ್ ಸಿಡಿಸಿದರು. 19ನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಟಲ್ ಒಂದೇ ಓವರ್​ನಲ್ಲಿ ಭರ್ಜರಿ 7 ಸಿಕ್ಸರ್ ಸಿಡಿಸಿದರು.

19ನೇ ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

ವಾಸ್ತವವಾಗಿ ಅಬಾಸಿನ್ ಡಿಫೆಂಡರ್ಸ್ ತಂಡದ ಪರ 19ನೇ ಓವರ್​ ಬೌಲ್ ಮಾಡಿದ ಅಮೀರ್ ಝಜೈ ಕೇವಲ 6 ಎಸೆತಗಳಲ್ಲಿ 48 ರನ್ ಬಿಟ್ಟುಕೊಟ್ಟರು. 19ನೇ ಓವರ್‌ನ ಮೊದಲ ಎಸೆತವನ್ನು ಝಜೈ ನೋ ಬಾಲ್ ಮಾಡಿದರು. ಈ ಎಸೆತದಲ್ಲಿ ಅಟಲ್ ಸಿಕ್ಸರ್ ಬಾರಿಸಿದರು. ಬಳಿಕ ಎರಡನೇ ಎಸೆತ ವೈಡ್ ಆಗಿ ಬೌಂಡರಿ ದಾಟಿತು. ಆನಂತರ ಅವರು ಬೌಲ್ ಮಾಡಿದ ಪ್ರತಿ ಬಾಲ್‌ನಲ್ಲೂ ಸಿಕ್ಸರ್ ಸಿಡಿದವು. ಒಟ್ಟಾರೆ ಈ ಓವರ್‌ನಲ್ಲಿ 48 ರನ್‌ಗಳು ಬಂದವು.

ಗಾಯಕ್ವಾಡ್ ದಾಖಲೆ ಸರಿಗಟ್ಟಿದ ಸೇದಿಕುಲ್ಲಾ

ಸೇದಿಕುಲ್ಲಾ ಅಟಲ್ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸುವ ಮೂಲಕ ರುತುರಾಜ್ ಗಾಯಕ್ವಾಡ್ ಅವರ ದಾಖಲೆಯನ್ನು ಸರಿಗಟ್ಟಿದರು. ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಗಾಯಕ್ವಾಡ್ ಸತತ 7 ಸಿಕ್ಸರ್ ಬಾರಿಸಿದ್ದರು.

92 ರನ್‌ಗಳ ಗೆಲುವು

ಅಟಲ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದ ಶಾಹೀನ್ ಹಂಟರ್ಸ್ ತಂಡ 214 ರನ್ ಕಲೆಹಾಕಿ, ಗೆಲುವಿಗೆ 215 ರನ್‌ಗಳ ಸವಾಲನ್ನು ನೀಡಿತು. ಗೆಲುವಿನ ಗುರಿ ಬೆನ್ನತ್ತಿದ ಅಬಾಸಿನ್ ಡಿಫೆಂಡರ್ಸ್ ತಂಡ ಕೇವಲ 121 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಈ ಪಂದ್ಯವನ್ನು ಹಂಟರ್ಸ್ 92 ರನ್‌ಗಳಿಂದ ಗೆದ್ದುಕೊಂಡಿತು. ಹಂಟರ್ಸ್ ತಂಡದ ಪರ ಸಯೀದ್ ಖಾನ್ ಮತ್ತು ಜಹಿದುಲ್ಲಾ ತಲಾ ಮೂರು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ