
ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ 2025 ರ ಏಷ್ಯಾಕಪ್ ಟೂರ್ನಿಗೆ ಅಫ್ಘಾನಿಸ್ತಾನ್ 22 ಸದಸ್ಯರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. ಈ ತಂಡವು ಪಾಕಿಸ್ತಾನ್ ಹಾಗೂ ಯುಎಇ ಒಳಗೊಂಡ ತ್ರಿಕೋನ ಸರಣಿ ಆಡಲಿದ್ದು, ಈ ಸರಣಿಯ ಬಳಿಕ 22 ಆಟಗಾರರಿಂದ ಏಷ್ಯಾಕಪ್ಗೆ 15 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಇನ್ನು ಈ 22 ಸದಸ್ಯರ ತಂಡದಲ್ಲಿ ಭರವಸೆಯ ಯುವ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಫ್ಘಾನ್ ತಂಡದಲ್ಲಿ ಕಾಣಿಸಿಕೊಂಡಿದ್ದ ಗಝನ್‌ಫರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಯುವ ಸ್ಪಿನ್ನರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.
2025 ರ ಟಿ20 ಬ್ಲಾಸ್ಟ್‌ನಲ್ಲಿ ಡರ್ಬಿಶೈರ್ ಪರ ಕಣಕ್ಕಿಳಿದಿದ್ದ ಗಝನ್‌ಫರ್ 16 ವಿಕೆಟ್ ಉರುಳಿಸಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೆ ಇದೇ ವೇಳೆ ಕೇವಲ 7.05 ರ ಎಕಾನಮಿ ರೇಟ್ನಲ್ಲಿ ಮಾತ್ರ ರನ್ ನೀಡಿದ್ದರು. ಹೀಗಾಗಿಯೇ ಮುಂಬರುವ ಟಿ20 ಸರಣಿಗೆ ಅಲ್ಲಾ ಗಝನ್‌ಫರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.
ಇತ್ತ ಅಲ್ಲಾ ಗಝನ್‌ಫರ್ ಅವರ ಮರಳುವಿಕೆಯು ಅಫ್ಘಾನಿಸ್ತಾನದ ಸ್ಪಿನ್ ಅಸ್ತ್ರವನ್ನು ಮತ್ತಷ್ಟು ಬಲಪಡಿಸಿದೆ. ಏಕೆಂದರೆ ಈಗಾಗಲೇ ತಂಡದಲ್ಲಿ ಅನುಭವಿ ಸ್ಪಿನ್ನರ್ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಇದ್ದು, ಇವರೊಂದಿಗೆ ಯುವ ಸ್ಪಿನ್ನರ್ಗಳಾಗಿ ಅಲ್ಲಾ ಗಝನ್‌ಫರ್ ಹಾಗೂ ನೂರ್ ಅಹ್ಮದ್ ಸೇರಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್ನಲ್ಲಿ ಅಫ್ಘಾನ್ ಕಡೆಯಿಂದ ಸ್ಪಿನ್ ಅಸ್ತ್ರಗಳ ಪ್ರಯೋಗವನ್ನು ನಿರೀಕ್ಷಿಸಬಹುದು.
ಏಷ್ಯಾಕಪ್ಗೂ ಮೊದಲು ಅಫ್ಘಾನಿಸ್ತಾನ್ ತ್ರಿಕೋನ ಸರಣಿ ಆಡಲಿದೆ. ಆಗಸ್ಟ್ 29 ರಿಂದ ಶಾರ್ಜಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಅಫ್ಘಾನಿಸ್ತಾನ್, ಪಾಕಿಸ್ತಾನ್ ಹಾಗೂ ಯುಎಇ ತಂಡಗಳು ಕಣಕ್ಕಿಳಿಯಲಿವೆ. ಈ ಸರಣಿಯ ಬಳಿಕ ಅಫ್ಘಾನ್ ಪಡೆ ಏಷ್ಯಾಕಪ್ ಆಡಲಿದೆ.
ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ್ ತಂಡವು ಗ್ರೂಪ್ ಬಿ ನಲ್ಲಿ ಕಾಣಿಸಿಕೊಂಡಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಹಾಂಗ್ ಕಾಂಗ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ 2 ಜಯ ಸಾಧಿಸಿದರೆ ಅಫ್ಘಾನಿಸ್ತಾನ್ ತಂಡವು ಸೂಪರ್ 4 ಹಂತಕ್ಕೇರಬಹುದು.
ಇದನ್ನೂ ಓದಿ: KL Rahul: ಭಾರತ ತಂಡದಿಂದ ಕೆಎಲ್ ರಾಹುಲ್ ಔಟ್
ಅತ್ತ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ತಂಡಗಳಿವೆ. ಈ ಗ್ರೂಪ್ನಿಂದ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ, ದ್ವಿತೀಯ ಸುತ್ತಿನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ಮುಖಾಮುಖಿಯಾಗಲಿದೆ.
ಏಷ್ಯಾ ಕಪ್ ಮತ್ತು ತ್ರಿಕೋನ ಸರಣಿಗೆ ಅಫ್ಘಾನಿಸ್ತಾನ್ ಪ್ರಾಥಮಿಕ ತಂಡ:
ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಖುಲ್ಲಾ ಅಟಲ್, ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ನಂಗ್ಯಾಲ್ ಖರೋಟಿ, ಶರಫುದ್ದೀನ್ ಅಶ್ರಫ್, ಕರೀಮ್ ಜನ್ನತ್, ಅಝ್ಮತ್ ಒಮರ್ಝಾಹಿ, ಗುಲ್ಬದ್ದೀನ್ ನೈಬ್, ಮುಜೀಬ್ ಝದ್ರಾನ್, ಅಲ್ಲಾ ಗಝನ್‌ಫರ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ನವೀನ್ ಉಲ್ ಹಕ್, ಫರೀದ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದ್ಝಾಹಿ, ಬಶೀರ್ ಅಹ್ಮದ್.