AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,4,6,4,6,6,4: ಒಂದೇ ಓವರ್​ನಲ್ಲಿ 45 ರನ್ ಚಚ್ಚಿದ ಅಫ್ಘಾನಿಸ್ತಾನ್ ಬ್ಯಾಟರ್

Usman Ghani: ಉಸ್ಮಾನ್ ಘನಿ ಅಫ್ಘಾನಿಸ್ತಾನದ ಅನುಭವಿ ಬ್ಯಾಟರ್. ಅಫ್ಘಾನ್ ಪರ 17 ಏಕದಿನ ಹಾಗೂ 35 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 1364 ರನ್ ಕಲೆಹಾಕಿದ್ದಾರೆ. 2023 ರಲ್ಲಿ ಕೊನೆಯ ಬಾರಿ ಅಫ್ಘಾನಿಸ್ತಾನ್ ತಂಡದಲ್ಲಿ ಕಾಣಿಸಿಕೊಂಡಿದ್ದ ಉಸ್ಮಾನ್ ಘನಿ ಸದ್ಯ ವಿಶ್ವದ ವಿವಿಧ ಲೀಗ್​ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ.

6,6,4,6,4,6,6,4: ಒಂದೇ ಓವರ್​ನಲ್ಲಿ 45 ರನ್ ಚಚ್ಚಿದ ಅಫ್ಘಾನಿಸ್ತಾನ್ ಬ್ಯಾಟರ್
Usman Ghani
ಝಾಹಿರ್ ಯೂಸುಫ್
|

Updated on: Aug 02, 2025 | 8:55 AM

Share

ಅಫ್ಘಾನಿಸ್ತಾನದ ಉಸ್ಮಾನ್ ಘನಿ ಟಿ10 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಒಂದೇ ಓವರ್​ನಲ್ಲಿ ಬರೋಬ್ಬರಿ 45 ರನ್​ಗಳಿಸುವ ಮೂಲಕ ಎಂಬುದು. ಇಂಗ್ಲೆಂಡ್​ನ ರಯನ್ಸ್ ಸ್ಪೋರ್ಟ್ಸ್ ಪಾರ್ಕ್​ ಮೈದಾನದಲ್ಲಿ ನಡೆದ ಇಸಿಎಸ್ ಟಿ10 ಲೀಗ್​ನಲ್ಲಿ ಲಂಡನ್ ಕೌಂಟಿ ಕ್ರಿಕೆಟ್ ಮತ್ತು ಗಿಲ್ಡ್‌ಫೋರ್ಡ್ ತಂಡಗಳು ಮುಖಾಮುಖಿಯಾಗಿದ್ದವು. 

ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಡನ್ ಕೌಂಟಿ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಸಿಸಿ ಪರ ಉಸ್ಮಾನ್ ಘನಿ ಹಾಗೂ ಇಸ್ಮಾಯಿಲ್ ಬಹರಮಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಮೊದಲ 3 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 52 ರನ್​ಗಳು.

ತಂಡದ ಸ್ಕೋರ್ ಅರ್ಧಶತಕ ದಾಟುತ್ತಿದ್ದಂತೆ ಅಬ್ಬರವನ್ನು ಸಿಡಿಲಬ್ಬರಕ್ಕೆ ಮಾರ್ಪಡಿಸಿದ ಉಸ್ಮಾನ್-ಇಸ್ಮಾಯಿಲ್ ಜೋಡಿ ಗಿಲ್ಡ್‌ಫೋರ್ಡ್ ಬೌಲರ್​ಗಳ ಬೆಂಡೆತ್ತಲಾರಂಭಿಸಿದರು. ಅದರಲ್ಲೂ ವಿಲ್ ಆರ್ನಿ ಎಸೆದ 8ನೇ ಓವರ್​ನಲ್ಲಿ ಉಸ್ಮಾನ್ ಘನಿ ಬರೋಬ್ಬರಿ 45 ರನ್ ಕಲೆಹಾಕಿದರು.

ಒಂದೇ ಓವರ್​ನಲ್ಲಿ 45 ರನ್​ಗಳು:

ವಿಲ್ ಆರ್ನಿ ಎಸೆದ 8ನೇ ಓವರ್​ನ ಮೊದಲ ಎಸೆತವು ನೋಬಾಲ್ ಆಗಿತ್ತು. ಈ ಎಸೆತದಲ್ಲಿ ಉಸ್ಮಾನ್ ಘನಿ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು ಮರು ಎಸೆತದಲ್ಲಿ ಮತ್ತೊಂದು ಸಿಕ್ಸ್ ಬಾರಿಸಿದರು. ಆ ಬಳಿಕ ಆರ್ನಿ ವೈಡ್​ನೊಂದಿಗೆ 5 ರನ್​ ನೀಡಿದರು. ಇನ್ನು 2ನೇ ಎಸೆತದಲ್ಲಿ ಉಸ್ಮಾನ್ ಮತ್ತೊಂದು ಸಿಕ್ಸ್ ಬಾರಿಸಿದರು. 3ನೇ ಎಸೆತವು ನೋ ಬಾಲ್ ಆಗಿತ್ತು, ಆ ಎಸೆತದಲ್ಲೂ ಫೋರ್ ಬಾರಿಸಿದರು. ಮರು ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಇನ್ನು 4ನೇ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. ಆ ಬಳಿಕ 5ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೆ, 6ನೇ ಎಸೆತದಲ್ಲಿ ಫೋರ್​ ಬಾರಿಸಿದರು.

ಈ ಮೂಲಕ ವಿಲ್ ಆರ್ನಿಯ ಒಂದೇ ಓವರ್​ನಲ್ಲಿ 6+ನೋಬಾಲ್, 6, 4+ವೈಡ್, 6,  4+ ನೋಬಾಲ್, 6, 0, 6 , 4 ರನ್​ಗಳೊಂದಿಗೆ ಉಸ್ಮಾನ್ ಘನಿ ತಂಡಕ್ಕೆ ಮೊತ್ತಕ್ಕೆ 45 ರನ್ ಸೇರಿಸಿದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 43 ಎಸೆತಗಳನ್ನು ಎದುರಿಸಿದ ಉಸ್ಮಾನ್ ಘನಿ 17 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 153 ರನ್ ಬಾರಿಸಿದರು. ಮತ್ತೊಂದೆಡೆ ಇಸ್ಮಾಯಿಲ್ ಬಹರಮಿ 19 ಎಸೆತಗಳಲ್ಲಿ 7 ಫೋರ್ ಹಾಗೂ 5 ಸಿಕ್ಸ್​ಗಳೊಂದಿಗೆ 61 ರನ್ ಸಿಡಿಸಿದರು. ಈ ಮೂಲಕ ಲಂಡನ್ ಕೌಂಟಿ ಕ್ರಿಕೆಟ್ ತಂಡವು 10 ಓವರ್​ಗಳಲ್ಲಿ ಬರೋಬ್ಬರಿ 226 ರನ್​ ಕಲೆಹಾಕಿತು.

ವಿಶ್ವ ದಾಖಲೆ ಬರೆದ ಉಸ್ಮಾನ್ ಘನಿ:

ಈ ಪಂದ್ಯದಲ್ಲಿ ಬಾರಿಸಿದ 153 ರನ್​ಗಳೊಂದಿಗೆ ಟಿ10 ಕ್ರಿಕೆಟ್​ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಉಸ್ಮಾನ್ ಘನಿ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಟಿ10 ಇನಿಂಗ್ಸ್​ವೊಂದರಲ್ಲಿ 17 ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಸಹ ಅಫ್ಘಾನ್ ಬ್ಯಾಟರ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮಾಜಿ ಆಟಗಾರನಿಗೆ ವಿಶೇಷ ಗೌರವ… ಹೆಡ್​ಬ್ಯಾಂಡ್ ಧರಿಸಿ ಕಣಕ್ಕಿಳಿದ ಸಿರಾಜ್

ಇನ್ನು ಈ ಮ್ಯಾಚ್​ನಲ್ಲಿ ಲಂಡನ್ ಕೌಂಟಿ ಕ್ರಿಕೆಟ್ ತಂಡ ನೀಡಿದ 226 ರನ್​ಗಳ ಗುರಿಯನ್ನು ಬೆನ್ನತ್ತಿದ ಗಿಲ್ಡ್‌ಫೋರ್ಡ್ ತಂಡವು 10 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 155 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಲಂಡನ್ ಕೌಂಟಿ ಕ್ರಿಕೆಟ್ ತಂಡ 71 ರನ್​ಗಳ ಭರ್ಜರಿ ಜಯ ಸಾಧಿಸಿದೆ.