
ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಶಪೂರ್ ಝದ್ರಾನ್ (Shapoor Zadran) ಅವರು ಮಂಗಳವಾರ (ಜುಲೈ 7, 2026) ದೆಹಲಿಯಲ್ಲಿ ನಿಧನರಾಗಿದ್ದಾರೆ. ಜುಲೈ 8 ರಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿದ್ದ ಅವರು, ಜನ್ಮದಿನದ ಕೇವಲ ಒಂದು ದಿನ ಮುಂಚಿತವಾಗಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಶಪೂರ್ ಅವರು ‘ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗನಿರೋಧಕ ಶಕ್ತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತೀವ್ರವಾದ ಉರಿಯೂತಕ್ಕೆ ಕಾರಣವಾಗುವ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ಜನವರಿ 2026 ರಿಂದ ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಮೇ ತಿಂಗಳಿನಿಂದ ಅವರು ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಶಪೂರ್ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದು, ಅವರನ್ನು “ಅಫ್ಘಾನ್ ಕ್ರಿಕೆಟ್‌ಗೆ ಬಲವಾದ ಬುನಾದಿ ಹಾಕಿಕೊಟ್ಟ ಮಹಾನ್ ಆಟಗಾರ” ಎಂದು ಕೊಂಡಾಡಿದೆ. ಇಂದಿನ ಅಫ್ಘಾನಿಸ್ತಾನ್ ತಂಡ ರೂಪುಗೊಳ್ಳುವಲ್ಲಿ ಶಪೂರ್ ಝದ್ರಾನ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಯುವ ಆಟಗಾರರಿಗೆ ಸ್ಫೂರ್ತಿಯಾಗಿ ನಿಂತಿದ್ದರು.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಶಪೂರ್ ಝದ್ರಾನ್ ಅವರ ಅಕಾಲಿಕ ನಿಧನಕ್ಕೆ ಮಾಜಿ ಅಂತರರಾಷ್ಟ್ರೀಯ ಕೋಚ್ ರವಿಶಾಸ್ತ್ರಿ, ಅಫ್ಘಾನ್ ಆಟಗಾರರಾದ ಮೊಹಮ್ಮದ್ ನಬಿ, ರಶೀದ್ ಖಾನ್ ಸೇರಿದಂತೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಹಾಗೂ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಂಬನಿ ಮಿಡಿದಿದ್ದಾರೆ.