AFG vs ZIM: 11 ವಿಕೆಟ್ ಉರುಳಿಸಿದ ರಶೀದ್ ಖಾನ್; 5 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಅಫ್ಘಾನಿಸ್ತಾನ

|

Updated on: Jan 06, 2025 | 6:25 PM

AFG vs ZIM: ಅಫ್ಘಾನಿಸ್ತಾನ ತಂಡವು ಜಿಂಬಾಬ್ವೆ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದು 4 ವರ್ಷಗಳ ಬರವನ್ನು ನೀಗಿಸಿಕೊಂಡಿದೆ. ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಮತ್ತು ರಹಮತ್ ಶಾ ಹಾಗೂ ಇಸ್ಮತ್ ಅಲಂ ಅವರ ಶತಕಗದ ಇನ್ನಿಂಗ್ಸ್​ನಿಂದಾಗಿ ಅಫ್ಘಾನಿಸ್ತಾನಕ್ಕೆ ಸ್ಮರಣೀಯ ಈ ಗೆಲುವು ಸಿಕ್ಕಿದೆ. ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರಹಮತ್ ಶಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

AFG vs ZIM: 11 ವಿಕೆಟ್ ಉರುಳಿಸಿದ ರಶೀದ್ ಖಾನ್; 5 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಅಫ್ಘಾನಿಸ್ತಾನ
ಅಫ್ಘಾನಿಸ್ತಾನ
Follow us on

ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಳ್ಳುವಲ್ಲಿ ಅಫ್ಘಾನಿಸ್ತಾನ ತಂಡ ಯಶಸ್ವಿಯಾಗಿದೆ. ಈ ಮೂಲಕ ಅಫ್ಘಾನಿಸ್ತಾನ ತಂಡ ಬರೋಬ್ಬರಿ 5 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2019 ರಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಆ ಬಳಿಕ ಅಫ್ಘಾನಿಸ್ತಾನ 5 ದೇಶಗಳ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತಾದರೂ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಅದರ ಬರವನ್ನು ಅಫ್ಘನ್ ಪಡೆ ನೀಗಿಸಿಕೊಂಡಿದೆ.

72 ರನ್​ಗಳ ಸೋಲು

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 157 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಕೂಡ ಮೊದಲ ಇನ್ನಿಂಗ್ಸ್​ನಲ್ಲಿ ಪ್ರಬಲ ಹೋರಾಟ ನೀಡಿ 243 ರನ್​ ಕಲೆಹಾಕಿತು. ಇತ್ತ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘನ್ ತಂಡ 363 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಗೆಲುವಿಗೆ 278 ರನ್ ಗುರಿ ಪಡೆದ ಜಿಂಬಾಬ್ವೆ ತಂಡ ಕೇವಲ 205 ರನ್‌ಗಳಿಗೆ ಆಲೌಟ್ ಆಗಿ 72 ರನ್​ಗಳಿಂದ ಸೊಲೊಪ್ಪಿಕೊಂಡಿತು.

ರಶೀದ್ ಖಾನ್ ಮ್ಯಾಜಿಕ್

ಎರಡನೇ ಇನಿಂಗ್ಸ್​ನಲ್ಲಿ ಅಫ್ಘಾನಿಸ್ತಾನ ಪರ ಗೆಲುವಿನ ಪ್ರದರ್ಶನ ನೀಡಿದ್ದ ರಶೀದ್ ಖಾನ್ 27.3 ಓವರ್ ಬೌಲ್ ಮಾಡಿ 66 ರನ್ ನೀಡಿ 7 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್​ನಲ್ಲಿ ಮ್ಯಾಜಿಕ್ ಮಾಡಿದ್ದ ರಶೀದ್ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ರಶೀದ್​ಗೆ ಸಾಥ್ ನೀಡಿದ ಜಿಯಾ-ಉರ್-ರಹಮಾನ್ ಕೂಡ 2 ವಿಕೆಟ್ ಪಡೆದರೆ, ಜಿಂಬಾಬ್ವೆಯ ಕೊನೆಯ ವಿಕೆಟ್ ರನ್ ಔಟ್ ಆಗಿ ಪತನವಾಯಿತು.

ರಹಮತ್ ಶಾ ಮತ್ತು ಇಸ್ಮತ್ ಆಲಂ ಶತಕ

ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ರಶೀದ್ ಖಾನ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರಾದರೂ, ಅಫ್ಘಾನಿಸ್ತಾನದ ಗೆಲುವಿನ ಅಡಿಪಾಯವನ್ನು ರಹಮತ್ ಶಾ ಮತ್ತು ಇಸ್ಮತ್ ಆಲಂ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಹಾಕಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕಗಳನ್ನು ಗಳಿಸಿದರು. ರಹಮತ್ 275 ಎಸೆತಗಳಲ್ಲಿ 139 ರನ್ ಕಲೆಹಾಕಿದರೆ, 8 ನೇ ಸ್ಥಾನದಲ್ಲಿ ಬಂದ ಇಸ್ಮತ್ ಕೂಡ 101 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಹಮತ್ ಶಾ ಸರಣಿಶ್ರೇಷ್ಠ

ಈ ಇಬ್ಬರ ಇನ್ನಿಂಗ್ಸ್‌ಗಳ ಆಧಾರದ ಮೇಲೆ, ಅಫ್ಘಾನಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ 363 ರನ್ ಕಲೆಹಾಕಲು ಸಾಧ್ಯವಾಯಿತು. ಇತ್ತ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ ಸಿಕ್ಕಿದ್ದ ಮುನ್ನಡೆಯ ಲಾಭವನ್ನು ಪಡೆಯಲು ಸಾಧ್ಯವಾಗದೆ ಅಂತಿಮವಾಗಿ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಅಫ್ಘಾನಿಸ್ತಾನ ಟೆಸ್ಟ್ ಸರಣಿಯನ್ನು 1-0ಅಂತರದಿಂದ ವಶಪಡಿಸಿಕೊಂಡರೆ ಸರಣಿಯಲ್ಲಿ ಅತ್ಯಧಿಕ 392 ರನ್ ಕಲೆಹಾಕಿದ ರಹಮತ್ ಶಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Mon, 6 January 25