
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಅಂಡರ್-19 ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವಯಸ್ಸು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬೆಂಗಾಲ್ ತಂಡದ ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಅವರ ಮೇಲೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದ್ದು, ಅವರನ್ನು ತಂಡದಿಂದ ತಕ್ಷಣವೇ ಕೈಬಿಡಲಾಗಿದೆ.
ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧ ರಾಜ್‌ಕೋಟ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ಹಾಗೂ ಮಲ್ಟಿ-ಡೇ (ನಾಲ್ಕು ದಿನಗಳ) ಪಂದ್ಯಗಳ ಸರಣಿಗೆ ರೋಹಿತ್ ಯಾದವ್ ಆಯ್ಕೆಯಾಗಿದ್ದರು. ಆದರೆ ಬಿಸಿಸಿಐನ ವಯಸ್ಸು ಪರಿಶೀಲನಾ ವಿಭಾಗ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ನಡೆಸಿದ ದಾಖಲೆಗಳ ಪರಿಶೀಲನೆಯಲ್ಲಿ ರೋಹಿತ್ ಅವರ ವಯಸ್ಸಿನ ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳು ಪತ್ತೆಯಾಗಿವೆ.
ತನಿಖೆಯ ವೇಳೆ ರೋಹಿತ್ ಯಾದವ್ ಹೆಸರಿನಲ್ಲಿ ಮೂರು ಬೇರೆ ಬೇರೆ ಜನನ ಪ್ರಮಾಣ ಪತ್ರಗಳು (2007, 2009 ಮತ್ತು 2010ರ ಜನನ ವರ್ಷಗಳು) ಇರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಅವರ ಆಧಾರ್ ಕಾರ್ಡ್ ವಿವರಗಳನ್ನು ಸಹ ಹಲವು ಬಾರಿ ತಿದ್ದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ದೇಶಿ ಕ್ರಿಕೆಟ್‌ನಿಂದ ಎರಡು ವರ್ಷಗಳ ಕಾಲ ಅಮಾನತುಗೊಳಿಸಿದೆ.
ರೋಹಿತ್ ಯಾದವ್ ಏಕದಿನ ಮತ್ತು ಮಲ್ಟಿ-ಡೇ ಎರಡೂ ತಂಡಗಳಿಗೆ ಆಯ್ಕೆಯಾಗಿದ್ದರಿಂದ, ಇದೀಗ ಅವರ ಬದಲಿಗೆ ಇಬ್ಬರು ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ರೋಹಿತ್ ಯಾದವ್ ಪ್ರಕರಣ ಕೇವಲ ಒಂದು ಉದಾಹರಣೆಯಷ್ಟೇ. ಪ್ರಸ್ತುತ 2026-27ರ ದೇಶಿ ಕ್ರಿಕೆಟ್ ಸೀಸನ್ ಆರಂಭಕ್ಕೂ ಮುನ್ನ ಬೆಂಗಾಲ್ ಕ್ರಿಕೆಟ್ ಸಂಸ್ಥೆ ಭಾರಿ ತಪಾಸಣೆ ನಡೆಸಿದ್ದು, ವಯಸ್ಸಿನ ದಾಖಲೆಗಳಲ್ಲಿ ಅಕ್ರಮ ಎಸಗಿದ ಒಟ್ಟು 62 ಆಟಗಾರರನ್ನು ನೋಂದಣಿ ಮತ್ತು ವರ್ಗಾವಣೆ ಪ್ರಕ್ರಿಯೆಯಿಂದ ಅನರ್ಹಗೊಳಿಸಿದೆ.
ಈ ಪಟ್ಟಿಯಲ್ಲಿ 2022ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಪ್ರಮುಖ ವೇಗಿ ರವಿ ಕುಮಾರ್ ಅವರ ಹೆಸರೂ ಇರುವುದು ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದೆ. ರವಿ ಕುಮಾರ್ ದಾಖಲೆಗಳಲ್ಲಿ ಸುಮಾರು 27 ರಿಂದ 40 ತಿಂಗಳಿಗೂ ಹೆಚ್ಚು ವಯಸ್ಸಿನ ವ್ಯತ್ಯಾಸ ಕಂಡುಬಂದಿದೆ.
ಒಟ್ಟಾರೆಯಾಗಿ, ಯುವ ಕ್ರಿಕೆಟಿಗರು ದೇಶದ ಪರವಾಗಿ ಆಡುವ ತರಾತುರಿಯಲ್ಲಿ ಅಥವಾ ಒತ್ತಡಕ್ಕೆ ಮಣಿದು ಇಂತಹ ಅಡ್ಡದಾರಿಗಳನ್ನು ಹಿಡಿಯುವುದು ಭಾರತೀಯ ಕ್ರಿಕೆಟ್‌ನ ಘನತೆಗೆ ತಂದ ಕಪ್ಪುಚುಕ್ಕೆಯಾಗಿದೆ. ಆದಾಗ್ಯೂ, ಬಿಸಿಸಿಐ ಮತ್ತು ಸಿಎಬಿ ಕೈಗೊಂಡಿರುವ ಈ ಕಠಿಣ ಮತ್ತು ರಾಜಿ ಇಲ್ಲದ ತಪಾಸಣಾ ಕ್ರಮಗಳು ಯುವ ಆಟಗಾರರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿವೆ.
ಭಾರತ U19 ಏಕದಿನ ತಂಡ: ಲಕ್ಷ್ಯ ರಾಯ್ಚಂದನಿ (ನಾಯಕ), ಯಶ್ಬರ್ಧನ್ ಚೌಹಾಣ್ (ಉಪನಾಯಕ), ರಜತ್ ಬಾಘೇಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ ಯಶ್ವೀರ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ, ಕಾವ್ಯಾ ಪಟೇಲ್, ಆರ್ಯನ್ ಸಾವಸಾನಿ.
ಇದನ್ನೂ ಓದಿ: ಕೆಎಲ್ ರಾಹುಲ್ ಕಣಕ್ಕಿಳಿಯುವುದು ಯಾವ ತಂಡದ ಪರ? ಕೊನೆಗೂ ಸಿಕ್ತು ಸ್ಪಷ್ಟನೆ
ಭಾರತ U19 ಟೆಸ್ಟ್ ತಂಡ: ಯಶ್ಬರ್ಧನ್ ಚೌಹಾಣ್ (ನಾಯಕ), ಲಕ್ಷ್ಯ ರಾಯಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಜಾ, ಮನಲ್ ಚೌಹಾನ್, ಕುಶ್ ಪಟೇಲ್, ಮಾನವ್ ಕೃಷ್ಣ (ವಿಕೆಟ್ ಕೀಪರ್), ಅಭಿಪ್ರಯ್ ಬಿಸ್ವಾಸ್ (ವಿಕೆಟ್ ಕೀಪರ್), ಇಶಾನ್ ಓಂ, ಅಯಾನ್ ಅಕ್ರಮ್, ಪ್ರಣವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್, ತನ್ಮಯ್ ಬಲೋಡಾ.