ಕೆಎಲ್ ರಾಹುಲ್ ಕಣಕ್ಕಿಳಿಯುವುದು ಯಾವ ತಂಡದ ಪರ? ಕೊನೆಗೂ ಸಿಕ್ತು ಸ್ಪಷ್ಟನೆ
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಟ್ರೇಡ್ ವದಂತಿಗಳಲ್ಲಿ ಒಂದಾಗಿದ್ದ ಕೆ.ಎಲ್. ರಾಹುಲ್ ಅವರ ಕೋಲ್ಕತಾ ನೈಟ್ ರೈಡರ್ಸ್ ಸೇರ್ಪಡೆ ಕುರಿತ ಸಸ್ಪೆನ್ಸ್‌ಗೆ ಇದೀಗ ತೆರೆ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಸುದ್ದಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸ್ವತಃ ಅಧಿಕೃತ ಸ್ಪಷ್ಟನೆ ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಹೊಸ ತಂಡದ ಪಾಲಾಗಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಇತ್ತೀಚೆಗೆ ವೈರಲ್ ಆದ ವದಂತಿಗಳು. ಅಂದರೆ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಕೋಲ್ಕತಾ ನೈಟ್ ರೈಡರ್ಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಎಲ್ಲಾ ಸುದ್ದಿಗಳಿಗೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಎಲ್ ರಾಹುಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ವಿಶೇಷವಾಗಿ ಸ್ಟಾರ್ ಆಟಗಾರ ರಿಷಭ್ ಪಂತ್ ಮತ್ತೆ ಡೆಲ್ಲಿ ತಂಡಕ್ಕೆ ಮರಳಿದ ನಂತರ, ರಾಹುಲ್ ಅವರನ್ನು ಬೇರೆ ತಂಡಕ್ಕೆ ಟ್ರೇಡ್ (ವರ್ಗಾವಣೆ) ಮಾಡಲಾಗುತ್ತದೆ ಎಂಬ ಊಹಾಪೋಹಗಳು ದಟ್ಟವಾಗಿದ್ದವು.
ವದಂತಿಗಳನ್ನು ತಳ್ಳಿಹಾಕಿದ ಪಾರ್ಥ್:
ಕೆಎಲ್ ರಾಹುಲ್ ಅವರ ಟ್ರೇಡಿಂಗ್ ಅಥವಾ ಅವರ ತಂಡವನ್ನು ತೊರೆಯುವ ಎಲ್ಲಾ ಸುಳ್ಳು ಸುದ್ದಿಗಳಿಗೆ ಪಾರ್ಥ್ ಜಿಂದಾಲ್ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪಾರ್ಥ್, ಕೆ.ಎಲ್. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿಯೇ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
“ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಕೆ.ಎಲ್. ರಾಹುಲ್ ಒಬ್ಬ ಕ್ಲಚ್ ಪ್ಲೇಯರ್. ನಾನು ಕಂಡ ಅತ್ಯಂತ ಪ್ರಾಮಾಣಿಕ ಆಟಗಾರರಲ್ಲಿ ಅವರೂ ಒಬ್ಬರು. ಅವರು ಯಾವಾಗಲೂ ತನಗಿಂತ ಹೆಚ್ಚಾಗಿ ತಂಡದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾರೆ. ನಮ್ಮ ನಡುವೆ ಇನ್ನೂ ಸಾಧಿಸಬೇಕಾದ ಬಾಕಿ ಉಳಿದಿರುವ ಕೆಲಸಗಳಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೆಮ್ಮೆ ಪಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ.” ಎಂದು ಜಿಂದಾಲ್ ಬರೆದುಕೊಂಡಿದ್ದಾರೆ.
KL IS KLUTCH FOR @DelhiCapitals – one of the nicest guys i know and one who puts the team before himself always. We have unfinished business and will work hard together to make Delhi proud @IPL https://t.co/RJC3JgpMsk
— Parth Jindal (@ParthJindal11) September 7, 2026
‘ನಾನು ನನ್ನ ಮನೆಯಲ್ಲಿದ್ದೇನೆ’ ಎಂದ ಕೆಎಲ್ಆರ್:
ಈ ವದಂತಿಗಳಿಗೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಡೆಲ್ಲಿ ಜರ್ಸಿ ಧರಿಸಿರುವ ಕೆ.ಎಲ್. ರಾಹುಲ್ ಅಭಿಮಾನಿಗಳನ್ನು ಉದ್ದೇಶಿಸಿ, “ನಾನು ನನ್ನ ಮನೆಯಲ್ಲಿದ್ದೇನೆ” ಎಂದು ಹೇಳುವ ಮೂಲಕ ತಾವು ತಂಡದಲ್ಲೇ ಮುಂದುವರಿಯುವುದನ್ನು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಕ್ರಿಕೆಟ್ ಆಸ್ಟ್ರೇಲಿಯಾದಿಂದ ಗ್ರೀನ್ ಸಿಗ್ನಲ್: ಬಿಬಿಎಲ್ನತ್ತ ಐಪಿಎಲ್ ಮಾಲೀಕರ ಚಿತ್ತ!
ಈ ದಿಢೀರ್ ಬೆಳವಣಿಗೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿಗಳಿಗೆ ಸಂಪೂರ್ಣವಾಗಿ ಬ್ರೇಕ್ ಬಿದ್ದಂತಾಗಿದ್ದು, ಮುಂಬರುವ ಟೂರ್ನಿಯಲ್ಲಿ ರಾಹುಲ್ ಮತ್ತು ಪಂತ್ ಜೋಡಿ ಒಟ್ಟಿಗೆ ಕಣಕ್ಕಿಳಿಯುವುದು ಖಚಿತವಾಗಿದೆ.
Published On - 12:20 pm, Tue, 8 September 26




