
ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಕ್ರಿಕೆಟ್ ಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ತಂಡದಿಂದ ಹೊರಬಿದ್ದಿದ್ದ ಅವರು, ಆ ಸಮಯದಲ್ಲಿ ಒಂದೂವರೆ ವರ್ಷ ಖಿನ್ನತೆಯಿಂದ ಬಳಲಿದ್ದೆ ಎಂದು ಹೇಳಿಕೊಂಡಿದ್ದಾರೆ. 2003ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಮಿತ್ ಮಿಶ್ರಾ, ಬಳಿಕ ಭಾರತ ತಂಡದಿಂದ ಹೊರಗುಳಿಯಬೇಕಾಯಿತು. ಆ ಸಮಯದಲ್ಲಿ ವೃತ್ತಿಜೀವನದಲ್ಲಿ ಏನು ತಪ್ಪಾಯಿತು ಅನ್ನೋದೇ ಅವರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಮಾಜಿ ಆರಂಭಿಕ ಆಟಗಾರ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಜೊತೆಗಿನ ಸಂವಾದದಲ್ಲಿ ತಮ್ಮ ಜೀವನದ ಕಷ್ಟದ ದಿನಗಳನ್ನು ಅವರು ಹಂಚಿಕೊಂಡಿದ್ದಾರೆ.
‘ನಾನು ಒಂದೂವರೆ ವರ್ಷ ಡಿಪ್ರೆಶನ್ನಲ್ಲಿದ್ದೆ. ನನ್ನಿಂದ ಏನು ತಪ್ಪಾಯಿತು ಅನ್ನೋ ಯೋಚನೆಯೇ ಯಾವಾಗಲೂ ಕಾಡುತ್ತಿತ್ತು. ಎಲ್ಲ ಕಡೆ ಕ್ರಿಕೆಟ್ ಆಡುತ್ತಿದ್ದರೂ, ನಾನು ಎಲ್ಲಿ ತಪ್ಪು ಮಾಡಿದೆ ಅನ್ನೋ ಪ್ರಶ್ನೆ ಮಾತ್ರ ಮನಸ್ಸಿನಲ್ಲಿ ಇರುತ್ತಿತ್ತು. ಭಾರತ ತಂಡಕ್ಕೆ ಆಯ್ಕೆಯಾದ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ತಂಡದಿಂದ ಹೊರಬಿದ್ದ ಬಳಿಕ ನನ್ನ ವೃತ್ತಿಜೀವನ ನಿಧಾನವಾಗಿ ಕುಸಿಯತೊಡಗಿತು. ದೇಶೀಯ ಕ್ರಿಕೆಟ್ನಲ್ಲೂ ಅವಕಾಶಗಳು ಕಡಿಮೆಯಾದವು. ಜೊತೆಗೆ ನನ್ನ ಫಾರ್ಮ್ ಕೂಡ ಕೈಕೊಟ್ಟಿತ್ತು ಎಂದಿದ್ದಾರೆ.
‘ನಾನು ಭಾರತ ತಂಡದ ಪರ ಆಡಿದ್ದೆ. ಆಮೇಲೆ ತಂಡದಿಂದ ಹೊರಬಿದ್ದೆ. ದುಲೀಪ್ ಟ್ರೋಫಿಗೂ ಆಯ್ಕೆಯಾಗಲಿಲ್ಲ. ವಲಯಗಳ ಆಧಾರದಲ್ಲಿ ಆಯ್ಕೆಯಾಗುತ್ತಿದ್ದ ಭಾರತ ಎ ತಂಡದಲ್ಲೂ ಅವಕಾಶ ಸಿಗಲಿಲ್ಲ. ನನಗೆ ಏನಾಗುತ್ತಿದೆ ಅನ್ನೋದೇ ಅರ್ಥವಾಗುತ್ತಿರಲಿಲ್ಲ. ಒಂದು ಸೀಸನ್ ಕೂಡ ಚೆನ್ನಾಗಿ ಹೋಗಲಿಲ್ಲ. ಆ ಸಮಯದಲ್ಲಿ ಆಯ್ಕೆಗಾರರೊಬ್ಬರು, ನೀನು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಹೇಳಿದರು. ಆಗ ನನ್ನ ಆಟದ ಬಗ್ಗೆ ಗಂಭೀರವಾಗಿ ಯೋಚಿಸಿದೆ. ಭಾರತ ತಂಡಕ್ಕೆ ಮರಳುವ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದೆ, ಆದರೆ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡೆ ಎಂದು ಹೇಳಿದ್ದಾರೆ.
ಅಮಿತ್ ಮಿಶ್ರಾ ಅವರ ಮಾತುಗಳಲ್ಲಿ ಅತ್ಯಂತ ನೋವು ಮೂಡಿಸುವ ವಿಚಾರವೆಂದರೆ, ಆ ಕಷ್ಟದ ಸಮಯದಲ್ಲಿ ತಮ್ಮ ಮನಸ್ಸಿನ ಮಾತು ಹಂಚಿಕೊಳ್ಳಲು ಯಾರೂ ಇರಲಿಲ್ಲ ಅನ್ನೋದು. ‘ನನ್ನ ಕೆಟ್ಟ ಸಮಯದಲ್ಲಿ ಮಾತಾಡೋಕೆ ಯಾರೂ ಇರಲಿಲ್ಲ. ಮನೆಯವರಿಗೂ ಈ ವಿಚಾರ ಹೇಳಲು ಸಾಧ್ಯವಾಗಲಿಲ್ಲ. ಹೇಳಿದರೆ ಅವರು ಇನ್ನಷ್ಟು ಚಿಂತೆಗೆ ಒಳಗಾಗುತ್ತಾರೆ ಅನ್ನೋ ಭಯವಿತ್ತು. ಯಾರ ಬಳಿಯೂ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಎಲ್ಲವನ್ನೂ ನಾನೊಬ್ಬನೇ ಎದುರಿಸಬೇಕಾಯಿತು. ಆದರೆ, ಒಂದು ಹಂತದಲ್ಲಿ ಪ್ರದರ್ಶನ ಸುಧಾರಿಸದಿದ್ದರೆ ಪರಿಸ್ಥಿತಿ ಬದಲಾಗುವುದಿಲ್ಲ ಅನ್ನೋದನ್ನು ಅರಿತುಕೊಂಡೆ. ಬ್ಯಾಟಿಂಗ್ನಲ್ಲೂ ಸುಧಾರಣೆ ಮಾಡಿಕೊಳ್ಳುವಂತೆ ಸೂಚನೆ ಸಿಕ್ಕಾಗ, ಅದರ ಮೇಲೂ ಕೆಲಸ ಮಾಡಿದೆ.
‘ನಾನು ಚೆನ್ನಾಗಿ ಆಡಿದರೆ ಮಾತ್ರ ಅವಕಾಶಗಳು ಸಿಗುತ್ತವೆ ಅನ್ನೋದು ಅರ್ಥವಾಯಿತು. ಒಂದು ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಬಳಿಕ ದುಲೀಪ್ ಟ್ರೋಫಿಗೆ ಆಯ್ಕೆಯಾದೆ. ನನಗೆ ಯಾವುದೇ ಪ್ರಭಾವಿ ವ್ಯಕ್ತಿಯ ಬೆಂಬಲ ಇರಲಿಲ್ಲ. ಹೀಗಾಗಿ ಪ್ರತಿ ಬಾರಿಯೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲೇಬೇಕಿತ್ತು. ನನ್ನ ಕೋಚ್ ಕೂಡ ಇದೇ ಮಾತು ಹೇಳಿದ್ದರು’ ಎಂದು ಅವರು ತಿಳಿಸಿದ್ದಾರೆ.
‘ಭರವಸೆ ನೀಡಿ ಮೋಸ ಮಾಡಿದ್ರು’; ಕೊಹ್ಲಿ ವಿರುದ್ಧ ಅಮಿತ್ ಮಿಶ್ರಾ ಗಂಭೀರ ಆರೋಪ
ಕಷ್ಟದ ದಿನಗಳನ್ನು ಎದುರಿಸಿದ ಅಮಿತ್ ಮಿಶ್ರಾ, ಕೊನೆಗೂ ಅಕ್ಟೋಬರ್ 2008ರಲ್ಲಿ ಭಾರತ ತಂಡಕ್ಕೆ ಮರಳಿದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಬಳಿಕ ಭಾರತದ ಪರ 22 ಟೆಸ್ಟ್, 36 ಏಕದಿನ ಪಂದ್ಯಗಳು ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್ನಲ್ಲೂ ಅಮಿತ್ ಮಿಶ್ರಾ ಯಶಸ್ವಿ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ. 162 ಪಂದ್ಯಗಳಲ್ಲಿ 174 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಪಡೆದ ಏಕೈಕ ಆಟಗಾರ ಎಂಬ ವಿಶೇಷ ದಾಖಲೆಯೂ ಅವರ ಹೆಸರಿನಲ್ಲಿದೆ.