
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಹಾಗೂ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ, ಟ್ರಾನ್ಸ್‌ಜೆಂಡರ್ ಕ್ರಿಕೆಟರ್ ಅನಯಾ ಬಂಗಾರ್ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ದೀರ್ಘಾವಧಿಯ ಕಾನೂನು ಹಾಗೂ ಕ್ರೀಡಾ ನಿಯಮಾವಳಿಗಳ ಹೋರಾಟದ ಬಳಿಕ, ಕ್ರಿಕೆಟ್ ಆಸ್ಟ್ರೇಲಿಯಾ (CA) ಅನಯಾಗೆ ಮಹಿಳಾ ಕಮ್ಯುನಿಟಿ ಕ್ರಿಕೆಟ್ ಮತ್ತು ಪ್ರೀಮಿಯರ್ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅಧಿಕೃತ ಅನುಮತಿ ನೀಡಿದೆ.
25 ವರ್ಷದ ಅನಯಾ ಬಂಗಾರ್, ಆಸ್ಟ್ರೇಲಿಯಾದಾದ್ಯಂತ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಪ್ರೀಮಿಯರ್ ಲೀಗ್‌ಗಳಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ. ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನೀತಿ-ನಿಯಮಗಳು ಇಲ್ಲದ ಕಾರಣ, ಅನಯಾ ತಮ್ಮ ಕ್ರಿಕೆಟ್ ಭವಿಷ್ಯಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮೊರೆ ಹೋಗಿದ್ದರು.
ಹಿಂದೆ ಮುಂಬೈ ಅಂಡರ್-19 ಕ್ರಿಕೆಟ್ ತಂಡದಲ್ಲಿ ಪುರುಷರ ವಿಭಾಗದಲ್ಲಿ ಆಡುತ್ತಿದ್ದ ಅನಯಾ, 2022 ರಲ್ಲಿ ತಮ್ಮ ಲಿಂಗ ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಿದ್ದರು. ನಂತರ ಮಾರ್ಚ್ 2026 ರಲ್ಲಿ ಅವರು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇತ್ತ ಲಿಂಗಾಂತರಿಯಾದ ಬಳಿಕ ಅನಯಾಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಅವಕಾಶ ಇರಲಿಲ್ಲ. ಅತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟ್ರಾನ್ಸ್ ಮಹಿಳೆಯರ ಭಾಗವಹಿಸುವಿಕೆಯನ್ನು ನಿಷೇಧಿಸಿದ್ದರೂ, ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನ ಈ ನಿರ್ಧಾರ ಅನಯಾಗೆ ಹೊಸ ಭರವಸೆ ನೀಡಿದೆ.
ಸದ್ಯ ಕಮ್ಯುನಿಟಿ ಕ್ರಿಕೆಟ್‌ಗೆ ಅನುಮತಿ ಸಿಕ್ಕಿದ್ದರೂ, ಮಾರ್ಚ್ 2027 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ‘ವುಮೆನ್ಸ್ ಬಿಗ್ ಬ್ಯಾಷ್ ಲೀಗ್’ (WBBL) ನಂತಹ ಎಲೈಟ್ ಮಟ್ಟದ ಪಂದ್ಯಾವಳಿಗಳಲ್ಲಿ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ಕಠಿಣ ನಿಬಂಧನೆಗಳನ್ನು ವಿಧಿಸಿದೆ:
ಇದನ್ನೂ ಓದಿ: ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
“ಕೇವಲ ಅನುಮತಿ ಸಿಕ್ಕ ತಕ್ಷಣ ನನಗೆ ಫ್ರಾಂಚೈಸಿ ತಂಡಗಳಲ್ಲಿ ಸ್ಥಾನ ಸಿಗುವುದಿಲ್ಲ. ಕಠಿಣ ತರಬೇತಿ ನಡೆಸಿ, ನನ್ನ ಪ್ರತಿಭೆ ಮತ್ತು ಅರ್ಹತೆಯ ಆಧಾರದ ಮೇಲೆ ನಾನು ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತೇನೆ,” ಎಂದು ಅನಯಾ ಬಂಗಾರ್ ತಮ್ಮ ಕ್ರೀಡಾ ಮನೋಭಾವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.