Arjun Tendulkar: 4 ಓವರ್, 10 ರನ್, 4 ವಿಕೆಟ್: ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಬಿರುಗಾಳಿಗೆ ಎದುರಾಳಿ ತತ್ತರ: ವಿಡಿಯೋ

| Updated By: Vinay Bhat

Updated on: Oct 15, 2022 | 9:22 AM

ಇದೀಗ ನಡೆಯುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (Syed Mushtaq Ali Trophy 2022) ಟೂರ್ನಿಯಲ್ಲಿ ಅರ್ಜುನ್‌ ತೆಂಡೂಲ್ಕರ್‌ ಭರ್ಜರಿ ಪ್ರದರ್ಶನ ತೋರುತ್ತಿದ್ದು ಟೀಮ್ ಇಂಡಿಯಾಕ್ಕೆ (Team India) ಕಾಲಿಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

Arjun Tendulkar: 4 ಓವರ್, 10 ರನ್, 4 ವಿಕೆಟ್: ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಬಿರುಗಾಳಿಗೆ ಎದುರಾಳಿ ತತ್ತರ: ವಿಡಿಯೋ
Arjun Tendulkar
Follow us on

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾಗವಹಿಸಿ ಭಾರತ ತಂಡವನ್ನು ಮುನ್ನಡೆಸಬೇಕು ಎಂದು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಕಳೆದ ಕೆಲವು ವರ್ಷಗಳಿಂದ ದೇಶೀಯ ಕ್ರಿಕೆಟ್​ನಲ್ಲಿ ಅರ್ಜುನ್ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ನಡೆಯುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (Syed Mushtaq Ali Trophy) ಟೂರ್ನಿಯಲ್ಲಿ ಅರ್ಜುನ್‌ ತೆಂಡೂಲ್ಕರ್‌ ಭರ್ಜರಿ ಪ್ರದರ್ಶನ ತೋರುತ್ತಿದ್ದು ಟೀಮ್ ಇಂಡಿಯಾಕ್ಕೆ (Team India) ಕಾಲಿಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದೇ ಮೊದಲ ಬಾರಿಗೆ ತಮ್ಮ ತಂಡವನ್ನು ಬಿಟ್ಟು ಗೋವಾ ತಂಡದ ಪರ ಆಡುತ್ತಿರುವ ಸಚಿನ್‌ ಪುತ್ರ, ಆಡಿದ ಮೂರು ಪಂದ್ಯಗಳಲ್ಲಿ 6 ವಿಕೆಟ್‌ ಕಿತ್ತು ಮಿಂಚಿದ್ದಾರೆ. ಅದರಲ್ಲೂ ಶುಕ್ರವಾರ ಜೈಪುರದಲ್ಲಿ ನಡೆದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಾರಕ ದಾಳಿ ನಡೆಸಿದ್ದಾರೆ.

ಈ ಪಂದ್ಯದಲ್ಲಿ 4 ಓವರ್‌ ಬೌಲಿಂಗ್ ಮಾಡಿದ ಅರ್ಜುನ್ ಕೇವಲ 10 ರನ್‌ ಮಾತ್ರವೇ ನೀಡಿ 1 ಮೇಡಿನ್‌ ಒಳಗೊಂಡಂತೆ ನಾಲ್ಕು ವಿಕೆಟ್‌ಗಳನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಮ್ಮ ಮೊದಲ ಓವರ್‌ನಲ್ಲಿ ಕೇವಲ 1 ರನ್ ಮಾತ್ರವೇ ನೀಡಿದ್ದರು. ಮೂರನೇ ಓವರನ್ನು ಮೇಡನ್ ಮಾಡಿದ್ದರು. ಇನ್ನು ಡೆತ್ ಓವರ್‌ನಲ್ಲಿ ಮತ್ತೆ ಬೌಲಿಂಗ್ ದಾಳಿಗೆ ಇಳಿದ ಅರ್ಜುನ್ ಆ ಸಂದರ್ಭದಲ್ಲಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅರ್ಜುನ್ ಬಲಿಯಾದವರಲ್ಲಿ ತಿಲಕ್ ವರ್ಮಾ, ವಿಕೆಟ್ ಕೀಪರ್ ಪ್ರತೀಕ್ ರೆಡ್ಡಿ, ಬುದ್ಧಿ ರಾಹುಲ್ ಮತ್ತು ಟಿ ರವಿತೇಜ ಸೇರಿದ್ದಾರೆ. ಅರ್ಜುನ್ ತಮ್ಮ 4-ಓವರ್ ಸ್ಪೆಲ್‌ನಲ್ಲಿ 17 ಡಾಟ್ ಬಾಲ್‌ಗಳನ್ನು ಬೌಲ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ
INDW vs SLW: ಇಂದು ಮಹಿಳಾ ಏಷ್ಯಾಕಪ್ ಫೈನಲ್: ರೋಚಕತೆ ಸೃಷ್ಟಿಸಿದ ಭಾರತೀಯ ವನಿತೆಯರ ಪ್ಲೇಯಿಂಗ್ XI
Asia Cup 2022: ಭಾರತ- ಶ್ರೀಲಂಕಾ ನಡುವೆ ಏಷ್ಯಾಕಪ್ ಫೈನಲ್; ಪಂದ್ಯ ಆರಂಭ ಎಷ್ಟು ಗಂಟೆಗೆ ಗೊತ್ತಾ?
T20 World Cup: ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಬಿಸಿಸಿಐ! ಸಿರಾಜ್- ಶಾರ್ದೂಲ್​ಗೂ ಅವಕಾಶ
T20 World Cup 2022: ಈಗಾಗಲೇ 6 ಲಕ್ಷ ಟಿಕೆಟ್​ಗಳ ಮಾರಾಟ; ಭಾರತ- ಪಾಕ್ ಪಂದ್ಯದ ಟಿಕೆಟ್​ಗೆ ಎಲ್ಲಿಲ್ಲದ ಬೇಡಿಕೆ

 

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಗೋವಾ ತ್ರಿಪುರಾ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ವಿಕೆಟ್ ಪಡೆಯಲು ವಿಫಲರಾದರೂ, ತಮ್ಮ 3 ಓವರ್‌ಗಳಲ್ಲಿ ಕೇವಲ 20 ರನ್ ಮಾತ್ರವೇ ಬಿಟ್ಟುಕೊಟ್ಟರು. ಪ್ರಮುಖವಾಗಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ದೆ ಕೆಡಿಸಿದರು. ನಂತರ ಬುಧವಾರ ನಡೆದ ಮಣಿಪುರ ವಿರುದ್ಧದ ಪಂದ್ಯದಲ್ಲಿ ತಮ್ಮ ಖಾತೆಯ ಸಂಪೂರ್ಣ 4 ಓವರ್‌ಗಳನ್ನು ಬೌಲ್‌ ಮಾಡಿದ ಅರ್ಜುನ್‌ 20 ರನ್ ಕೊಟ್ಟು 2 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದೀಗ ಹೈದರಾಬಾದ್ ವಿರುದ್ಧ 4 ವಿಕೆಟ್ ಪಡೆದಿದ್ದು ಕ್ರಿಕೆಟ್ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

ಇನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೂ ಮುನ್ನ ಅರ್ಜುನ್ ತೆಂಡೂಲ್ಕರ್, ಟೀಮ್ ಇಂಡಿಯಾದ ದಿಗ್ಗಜ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್ ಸಿಂಗ್ ಬಳಿ ವಿಶೇಷ ತರಬೇತಿ ಪಡೆದಿದ್ದರು. ಇಲ್ಲಿ ಅನೇಕ ವಿಚಾರಗಳನ್ನು ಕಲಿತಿದ್ದು ಈಗ ಫಲಿತಾಂಶ ಕಂಡುಬರುತ್ತಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅರ್ಜುನ್ ಮಾರಕ ದಾಳಿಯ ನಡುವೆಯೂ ಗೋವಾ ಸೋಲು ಕಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಆರಂಭದಲ್ಲೇ ಪ್ರತೀಕ್ ರೆಡ್ಡಿ (3) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ನಾಯಕ ತನ್ಮಯ್ ಅಗರ್ವಾಲ್ ಹಾಗೂ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಬರೋಬ್ಬರಿ 112 ರನ್​ಗಳ ಜೊತೆಯಾಟ ಆಡಿದರು. ತನ್ಮಯ್ 41 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್​ನೊಂದಿಗೆ 55 ರನ್ ಬಾರಿಸಿದರೆ, ತಿಲಕ್ 46 ಎಸೆತಗಳಲ್ಲ 6 ಫೋರ್ 2 ಸಿಕ್ಸರ್​ನೊಂದಿಗೆ 62 ರನ್ ಚಚ್ಚಿದರೆ. ಆದರೆ, ಇವರ ನಿರ್ಗಮನದ ಬಳಿಕ ಹೈದರಾಬಾದ್ ದಿಢೀರ್ ಕುಸಿತ ಕಂಡಿತು. ನಂತರ ಬಂದ ಬ್ಯಾಟರ್​ಗಳ ಪೈಕಿ ಮಿಕಿಲ್ ಜೈಸ್ವಾಲ್ 17 ರನ್ ಗಳಿಸಿದ್ದೇ ಹೆಚ್ಚು. ಉಳಿದವರ ಸ್ಕೋರ್ 10ರ ಮೇಲೋಗಲಿಲ್ಲ. ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಗೋವಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆದಿತ್ಯಾ ಕೌಶಿಕ್ 22 ಎಸೆತಗಳಲ್ಲಿ 33 ರನ್, ತುನಿಶ್ ಸಾವ್ಕರ್ 21 ಎಸೆತಗಳಲ್ಲಿ 23 ರನ್ ಹಾಗೂ ಏಕಾಂತ ಕೆರ್ಕರ್ 17 ಎಸೆಗಳಲ್ಲಿ 19 ರನ್ ಗಳಿಸಿದರಷ್ಟೆ. ಮುಖ್ಯವಾಗಿ ನಿತ್ತು ಆಡುವಲ್ಲಿ ಎಡವಿದ ಗೋವಾ ಬ್ಯಾಟರ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಸಂಪೂರ್ಣ 20 ಓವರ್ ಕೂಡ ಆಡದ ಗೋವಾ 18.5 ಓವರ್​ನಲ್ಲಿ 140 ರನ್​ಗೆ ಆಲೌಟ್ ಆಯಿತು. ಹೈದರಾಬಾದ್ ಪರ ತೆಲುಕುಪಲ್ಲಿ ರವಿ 4 ವಿಕೆಟ್ ಕಿತ್ತರೆ, ಅನಿಕೇತ್ 2 ವಿಕೆಟ್ ಪಡೆದರು.

Published On - 9:22 am, Sat, 15 October 22