Prithvi Shaw: 10 ಬೌಂಡರಿ, 6 ಸಿಕ್ಸರ್.. 210 ರ ಸ್ಟ್ರೈಕ್ ರೇಟ್..! ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಪೃಥ್ವಿ ಶಾ
Syed Mushtaq Ali Trophy 2022: ಅಸ್ಸಾಂ ವಿರುದ್ಧ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಂತರ ಪೃಥ್ವಿ ಶಾ 46 ಎಸೆತಗಳಲ್ಲಿ ಶತಕ ಪೂರೈಸಿದರು. ಈ ವೇಳೆ ಅವರು 6 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದರು.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸುಕೊಳ್ಳುವಲ್ಲಿ ಸತತವಾಗಿ ವಿಫಲರಾಗುತ್ತಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ದೇಶೀ ಟೂರ್ನಿಯಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಈ ಮೊದಲು ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ ಪೃಥ್ವಿಗೆ ಆಯ್ಕೆ ಮಂಡಳಿ ಬಿಗ್ ಶಾಕ್ ನೀಡಿತ್ತು. ಆದರೆ ಈಗ ತನ್ನ ಪವರ್ಫುಲ್ ಬ್ಯಾಟಿಂಗ್ ಪ್ರದರ್ಶಿಸಿರುವ ಪೃಥ್ವಿ ಆಯ್ಕೆಗಾರರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರಯವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy 2022) ಮೂರು ದಿನಗಳಲ್ಲಿ ಪೃಥ್ವಿ ಶಾ ಎರಡನೇ ಬಾರಿ ಬಿರುಗಾಳಿ ಎಬ್ಬಿಸಿದ್ದಾರೆ. ಈ ಬಾರಿ ಅವರು ಸೃಷ್ಟಿಸಿದ ಬಿರುಗಾಳಿ ಕೊಂಚ ವೇಗದಿಂದ ಕೂಡಿದ್ದು, ಅವರ ಬ್ಯಾಟ್ ನಿಂದ ಶತಕದ ಬಿರುಗಾಳಿ ಎದ್ದಿದೆ.
ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ರೌದ್ರಾವತಾರ ತಳಿದ ಪೃಥ್ವಿ, ಅಸ್ಸಾಂನ ಪ್ರತಿಯೊಬ್ಬ ಬೌಲರ್‌ಗಳ ಬೆಂಡೆತ್ತಿದ್ದರು. ಚೆಂಡಿಗೆ ಅಷ್ಟ ದಿಕ್ಕುಗಳ ದರ್ಶನ ಮಾಡಿಸಿದ ಪೃಥ್ವಿ, ಮೈದಾನದ ಒಳಗೆ ಮತ್ತು ಹೊರಗೆ ಕುಳಿತಿದ್ದ ಆಯ್ಕೆಗಾರರ ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ.
Maiden hundred for Captain Prithvi Shaw in T20 format, hundred from 46 balls including 10 fours and 6 sixes, A knock to remember, What a player. pic.twitter.com/bokhoHDAPQ
— Johns. (@CricCrazyJohns) October 14, 2022
ಟಿ20ಯಲ್ಲಿ ಚೊಚ್ಚಲ ಶತಕ
ಅಸ್ಸಾಂ ವಿರುದ್ಧ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಂತರ ಪೃಥ್ವಿ ಶಾ 46 ಎಸೆತಗಳಲ್ಲಿ ಶತಕ ಪೂರೈಸಿದರು. ಈ ವೇಳೆ 210 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಪೃಥ್ವಿ, ತಮ್ಮ ಇನ್ನಿಂಗ್ಸ್ನಲ್ಲಿ 6 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದು ಪೃಥ್ವಿ ಶಾ ಅವರ ಮೂರನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಆಡಿದ 2 ಪಂದ್ಯಗಳಲ್ಲಿ, ಅವರು ಒಂದರಲ್ಲಿ 55 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ.
ಬಿರುಸಿನ ಶತಕದಲ್ಲಿ ಬಿರುಸಿನ ಜೊತೆಯಾಟ
ಪೃಥ್ವಿ ಶಾ ಅಸ್ಸಾಂ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಬಿರುಸಿನ ಶತಕದ ಜೊತೆಯಾಟ ನಡೆಸಿದರು. ಶತಕ ಪೂರೈಸಿದರೂ ಅಸ್ಸಾಂ ಬೌಲರ್‌ಗಳ ಮೇಲೆ ಪೃಥ್ವಿ ಶಾ ದಾಳಿ ನಿಲ್ಲಲಿಲ್ಲ. ಸತತ ರನ್ ಮಳೆ ಸುರಿಯುತ್ತಲೇ ಮುಂಬೈ ತಂಡದ ಸ್ಕೋರ್ ಬೋರ್ಡ್ಗೆ ರನ್ ಸೇರಿಸುತ್ತಲೇ ಇದ್ದರು.