
ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ 18 ವರ್ಷದ ಪುತ್ರ ಆರ್ಯವೀರ್ ಸೆಹ್ವಾಗ್ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಮುಂಬರುವ ವಿನೂ ಮಂಕಡ್ ಟ್ರೋಫಿಗಾಗಿ ಆರ್ಯವೀರ್ ಅವರನ್ನು ದೆಹಲಿಯ ಪುರುಷರ 19 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಘೋಷಿಸಿದೆ. ಡಿಡಿಸಿಎಯ ಜೂನಿಯರ್ ಪುರುಷರ ಆಯ್ಕೆ ಸಮಿತಿಯು 16 ಸದಸ್ಯರ ತಂಡವನ್ನು ಈ ಟೂರ್ನಿಗಾಗಿ ಆಯ್ಕೆ ಮಾಡಲಾಗಿದೆ. ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಅಲ್ಲಿ ದೆಹಲಿಯ ಯುವ ತಂಡವು ಆರ್ಯವೀರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಅರ್ನವ್ ಬುಗ್ಗಾ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.
ಆರ್ಯವೀರ್ ಸೆಹ್ವಾಗ್ ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯಾ ಅಂಡರ್ -19 ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಅವರು ಭಾರತದ ಅಂಡರ್ -19 ತಂಡಕ್ಕೆ ಪಾದಾರ್ಪಣೆ ಮಾಡಿದರು. ಸರಣಿಯ ಮೊದಲ ಪಂದ್ಯದಲ್ಲಿ 28 ರನ್, ಎರಡನೇ ಪಂದ್ಯದಲ್ಲಿ 47 ರನ್ ಮತ್ತು ಮೂರನೇ ಪಂದ್ಯದಲ್ಲಿ ಉಪಯುಕ್ತ 34 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. 18 ವರ್ಷದ ಆರ್ಯವೀರ್ ಹಿರಿಯರ ಮಟ್ಟದ ಟಿ20 ಕ್ರಿಕೆಟ್‌ನಲ್ಲೂ ಅನುಭವ ಹೊಂದಿದ್ದಾರೆ. ಈ ವರ್ಷ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಅವರು ವೆಸ್ಟ್ ದೆಹಲಿ ಲಯನ್ಸ್ ಫ್ರಾಂಚೈಸಿಯ ಭಾಗವಾಗಿದ್ದರು. ಆ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳನ್ನು ಆಡಿದ ಅವರು 24 ರನ್ ಕಲೆಹಾಕಿದರು.
ವಿನೂ ಮಂಕಡ್ ಟ್ರೋಫಿಗಾಗಿ ದೆಹಲಿಯ 16 ಸದಸ್ಯರ ತಂಡ: ಆರ್ಯವೀರ್ ಸೆಹ್ವಾಗ್ (ನಾಯಕ), ತನ್ಮಯ್ ಚೌಧರಿ, ಅರ್ನವ್ ಬುಗ್ಗಾ (ಉಪನಾಯಕ), ಧನ್ಯಾ ನಕ್ರಾ, ಉದಯ್ ಚಾವ್ಲಾ, ಗರ್ವ್ ಕುಮಾರ್, ಅಭಿರಾಜ್ ಗಗನ್ ಸಿಂಗ್ (ವಿಕೆಟ್ ಕೀಪರ್), ತರುಣ್ ಸಿಂಗ್ (ವಿಕೆಟ್ ಕೀಪರ್), ಆರ್ಯನ್ ಶರ್ಮಾ, ಓಜಸ್ದೀಪ್ ಸಿಂಗ್, ಕಿರಿತ್ ಕೌಶಿಕ್, ವರುಣ್ ವಂಜನಿ, ರುದ್ರ ದೇವ್ ಯಾದವ್, ಪ್ರದ್ಯುಮನ್ ಸನನ್, ಪಾರ್ಥ್ ರಾಜ್, ಶಾಂತನು ಯಾದವ್.