19 ಬೌಂಡರಿ ಸಹಿತ 109 ರನ್ ಕಲೆಹಾಕಿದ ಆರ್ಯವೀರ್ ಸೆಹ್ವಾಗ್
ಭಾರತ U19 ತಂಡ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅವರು ಮೂರು ಪಂದ್ಯಗಳಲ್ಲಿ 109 ರನ್ ಗಳಿಸಿ ತಮ್ಮ ಚೊಚ್ಚಲ ಸರಣಿಯಲ್ಲಿ ಭರವಸೆ ಮೂಡಿಸಿದ್ದಾರೆ. ಭಾರತದ ಯುವ ಪಡೆ ಭವಿಷ್ಯದ ಕ್ರಿಕೆಟ್‌ಗೆ ಉತ್ತಮ ಸೂಚನೆ ನೀಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯ ಮೂರನೇ ಪಂದ್ಯವನ್ನು 6 ವಿಕೆಟ್ಗಳಿಂದ ಜಯಿಸುವ ಮೂಲಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಯುವ ಪಡೆಯನ್ನು ಕ್ವೀನ್ ಸ್ವೀಪ್ ಮಾಡಿದೆ. ಈ ಸರಣಿಗೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ಆಯ್ಕೆ ಮಾಡಲಾಗಿತ್ತು. ತಂದೆಯಂತೆ ಆರಂಭಿಕನಾಗಿ ಆಡಿದ ಆರ್ಯವೀರ್ ಮೂರೂ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಆರ್ಯವೀರ್ ಸೆಹ್ವಾಗ್ ನಿರಾಶೆ ಮೂಡಿಸಿದರು. ಉತ್ತಮ ಆರಂಭದ ಹೊರತಾಗಿಯೂ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಆರ್ಯವೀರ್ ಮೂರನೇ ಏಕದಿನ ಪಂದ್ಯದಲ್ಲಿ 31 ಎಸೆತಗಳಲ್ಲಿ 34 ರನ್ ಗಳಿಸಿದರು. ಇದರಲ್ಲಿ ಐದು ಬೌಂಡರಿಗಳನ್ನು ಬಾರಿಸಿದರು.
ಮೂರು ಪಂದ್ಯಗಳಿಂದ 109 ರನ್
ಆರ್ಯವೀರ್ ಸೆಹ್ವಾಗ್ ಅವರನ್ನು ಮೊದಲ ಬಾರಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅದರಂತೆ ಅವರಿಗೆ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಆರಂಭಿಸುವ ಅವಕಾಶವನ್ನು ನೀಡಲಾಗಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯ ಪ್ರತಿ ಪಂದ್ಯದಲ್ಲೂ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ಆರ್ಯವೀರ್ ಅವರ ಪ್ರದರ್ಶನ ಅದ್ಭುತವಲ್ಲದಿದ್ದರೂ, ಉತ್ತಮವಾಗಿತ್ತು. ಆರ್ಯವೀರ್ ಬಹುತೇಕ ಪ್ರತಿಯೊಂದು ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಯಶಸ್ವಿಯಾದರು. ಆದರೆ ಪ್ರತಿ ಪಂದ್ಯದಲ್ಲೂ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆರ್ಯವೀರ್ 28 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 3 ರನ್‌ಗಳಿಂದ ಅರ್ಧಶತಕ ವಂಚಿತರಾಗಿ 47 ರನ್ಗೆ ವಿಕೆಟ್ ಒಪ್ಪಿಸಿದರು. ಮೂರನೇ ಪಂದ್ಯದಲ್ಲಾದರೂ ಅವರು ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಂಭವಿಸಲಿಲ್ಲ.
ಏಕದಿನ, ಟಿ20 ಸರಣಿಗಾಗಿ ಭಾರತಕ್ಕೆ ಬಂದ ವೆಸ್ಟ್ ಇಂಡೀಸ್; ಸರಣಿ ವೇಳಾಪಟ್ಟಿ ಇಲ್ಲಿದೆ
105 ಎಸೆತಗಳಲ್ಲಿ 19 ಬೌಂಡರಿ
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆರ್ಯವೀರ್ ಸೆಹ್ವಾಗ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಅವರು ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು 105 ಎಸೆತಗಳನ್ನು ಎದುರಿಸಿ 109 ರನ್ ಕಲೆಹಾಕಿದರು. ಆರ್ಯವೀರ್ ಈ 105 ಎಸೆತಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲಿಲ್ಲವಾದರೂ 19 ಬೌಂಡರಿಗಳನ್ನು ಬಾರಿಸಿದರು. ಈ ಮೂರು ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ 103.80, ಮತ್ತು ಸರಾಸರಿ 36.33 ಆಗಿತ್ತು.




