ಏಷ್ಯಾಕಪ್ಗಾಗಿ (Asia Cup 2022) ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು (Team India) ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ವೇಗಿಗಳಿಲ್ಲ ಎಂಬುದು ವಿಶೇಷ. ಅಂದರೆ ತಂಡದ ಆಯ್ಕೆಗೂ ಮುನ್ನ ಬೆನ್ನು ನೋವಿನ ಕಾರಣ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇನ್ನು ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಗಾಯಗೊಂಡ ಹರ್ಷಲ್ ಪಟೇಲ್ ಕೂಡ ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಇತ್ತ ಈ ಇಬ್ಬರು ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ರನ್ನು ಆಯ್ಕೆ ಮಾಡಿದೆ.
ಆದರೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವೇಶ್ ಖಾನ್ರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದೇ ಕಾರಣದಿಂದಾಗಿ ಅವೇಶ್ ಅವರ ಆಯ್ಕೆಯು ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ತಂಡಕ್ಕೆ ಮೂವರು ವೇಗಿಗಳು ಮಾತ್ರ ಆಯ್ಕೆಯಾಗಿದ್ದು, ಹೀಗಾಗಿ ಟೂರ್ನಿಯುದ್ದಕ್ಕೂ ಅವರಲ್ಲೇ ಬದಲಾವಣೆ ಮಾಡಿಕೊಳ್ಳಬೇಕಿದೆ.
ಇದೇ ಕಾರಣದಿಂದಾಗಿ ಇದೀಗ ಯ್ಕೆ ಸಮಿತಿಯು ತಂಡದಲ್ಲಿ ಮಹತ್ವದ ಬದಲಾವಣೆ ತರಲು ಪ್ಲ್ಯಾನ್ ರೂಪಿಸಿದೆ. ಅದರಂತೆ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿರುವ ದೀಪಕ್ ಚಹರ್ ಅವರನ್ನು ಏಷ್ಯಾಕಪ್ ಸ್ಕ್ವಾಡ್ಗೆ ಆಯ್ಕೆ ಮಾಡಲು ಚಿಂತಿಸಿದೆ.
ಆದರೆ ಇತ್ತ ದೀಪಕ್ ಚಹರ್ ಅವರು ಗಾಯದ ಕಾರಣ ಕಳೆದ 6 ತಿಂಗಳಿಂದ ಒಂದೇ ಒಂದು ಪಂದ್ಯವಾಡಿಲ್ಲ. ಹೀಗಾಗಿ ಜಿಂಬಾಬ್ವೆ ವಿರುದ್ದದ ಸರಣಿಯಲ್ಲಿ ಚಹರ್ ಅವರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಒಂದು ವೇಳೆ ದೀಪಕ್ ಚಹರ್ ಜಿಂಬಾಬ್ವೆ ವಿರುದ್ದ ಅತ್ಯುತ್ತಮ ಪ್ರದರ್ಶನ ನೀಡಿದ್ರೆ ಇತ್ತ ಅವೇಶ್ ಖಾನ್ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಬಹುದು. ಹಾಗೆಯೇ ಅವೇಶ್ ಖಾನ್ ಮೀಸಲು ಆಟಗಾರನಾಗಿ ಹಿಂಬಡ್ತಿ ಪಡೆಯಬಹುದು.
ಹೀಗಾಗಿ ಜಿಂಬಾಬ್ವೆ ವಿರುದ್ದದ 2 ಪಂದ್ಯಗಳ ಏಕದಿನ ಸರಣಿಯು ದೀಪಕ್ ಚಹರ್ ಅವರ ಏಷ್ಯಾಕಪ್ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೆಯೇ ಅವೇಶ್ ಖಾನ್ ತಂಡದಲ್ಲಿ ಉಳಿಯಲಿದ್ದಾರಾ ಎಂಬುದು ಕೂಡ ನಿರ್ಧಾರವಾಗಲಿದೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ವೇಳೆಯೂ ಆಯ್ಕೆ ಸಮಿತಿ ಇಂತಹದೊಂದು ಮಹತ್ವದ ಬದಲಾವಣೆ ಮಾಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಂದು ಮುಖ್ಯ ತಂಡಕ್ಕೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಅವರನ್ನು ಕೊನೆಯ ಕ್ಷಣದಲ್ಲಿ ಕೈ ಬಿಡಲಾಗಿತ್ತು. ಬದಲಾಗಿ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ಅಂತಹದ್ದೇ ಪ್ರಯೋಗಕ್ಕೆ ಆಯ್ಕೆ ಸಮಿತಿ ಮುಂದಾಗಿದೆ.
“ದೀಪಕ್ ಚಹರ್ ಗಾಯದಿಂದ ಹಿಂತಿರುಗಿರುವ ಕಾರಣ ಅವರನ್ನು ನೇರವಾಗಿ ಏಷ್ಯಾ ಕಪ್‌ಗೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರನನ್ನು ಬದಲಾಯಿಸಲು ನಮಗೆ ಅವಕಾಶವಿದೆ. ಜಿಂಬಾಬ್ವೆ ಸರಣಿಯಲ್ಲಿ ದೀಪಕ್ ಚಹರ್ ಮಿಂಚಿದ್ರೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಕಂಡು ಬರಬಹುದು” ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಹೀಗಾಗಿ ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.