ಏಷ್ಯಾಕಪ್ 2023 (Asia Cup 2023) ಟೂರ್ನಿಯಲ್ಲಿ ಸೂಪರ್-4 ಹಂತದ ಪಂದ್ಯಗಳಿಗೆ ಈಗಾಗಲೇ ಚಾಲನೆ ಸಿಕ್ಕಾಗಿದೆ. ಸೆಪ್ಟೆಂಬರ್ 6 ರಂದು ನಡೆದ ಸೂಪರ್-4 ಸ್ಟೇಜ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ಕಾಣುವ ತನ್ನ ಫಾರ್ಮ್ ಮುಂದುವರೆಸಿತು. ಲಾಹೊರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಬಾಬರ್ ಪಡೆ 7 ವಿಕೆಟ್ಗಳ ಜಯ ಸಾಧಿಸಿತು. ಆದರೆ, ಏಷ್ಯಾಕಪ್ನಲ್ಲಿ ಇಂದು ಮತ್ತು ನಾಳೆ ಪಂದ್ಯವನ್ನು ಆಯೋಜಿಸಲಾಗಿಲ್ಲ. ಯಾವುದೇ ಪಂದ್ಯ ಏಷ್ಯಾಕಪ್ನಲ್ಲಿ ಎರಡು ದಿನ ನಡೆಯುತ್ತಿಲ್ಲ. ಇದಕ್ಕೆ ಕಾರಣವಿದೆ.
ಏಷ್ಯಾಕಪ್‌ನ ಸೂಪರ್-4 ಹಂತದಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸುತ್ತಿವೆ. ಶ್ರೀಲಂಕಾ, ಪಾಕಿಸ್ತಾನ, ಭಾರತ ಹಾಗೂ ಬಾಂಗ್ಲಾದೇಶ. ಇದರಲ್ಲಿ ಬುಧವಾರ ನಡೆದ ಮೊದಲ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದರೆ, ವೇಳಾಪಟ್ಟಿಯ ಪ್ರಕಾರ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಈ ಮ್ಯಾಚ್ ಇರುವುದು ಶ್ರೀಲಂಕಾದಲ್ಲಿ. ಬಾಂಗ್ಲಾ ತಂಡ ಪಾಕ್ನಿಂದ ಲಂಕಾಕಕ್ಕೆ ತೆರಳಲು ಸಮಯ ಬೇಕಿದೆ. ಹೀಗಾಗಿ ಒಂದು ದಿನ ಪ್ರಯಾಣಕ್ಕಾಗಿ, ಮತ್ತೊಂದು ದಿನ ವಿಶ್ರಾಂತಿಗಾಗಿ ಎಂದು ಎರಡು ದಿನ ಏಷ್ಯಾಕಪ್ನಲ್ಲಿ ಪಂದ್ಯ ಆಯೋಜಿಸಲಾಗಿಲ್ಲ.
ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಭಾರತ: ಇಲ್ಲಿದೆ ಕಾರಣ
ಸೆಪ್ಟೆಂಬರ್ 9ಕ್ಕೆ ಏಷ್ಯಾಕಪ್‌ನ ಸೂಪರ್-4 ಹಂತದ ಪಂದ್ಯದಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತ ಬಾಂಗ್ಲಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅತ್ತ ಗುಂಪು ಹಂತದಲ್ಲಿ ಬೊಂಬಾಟ್ ಪ್ರದರ್ಶನ ತೋರಿರುವ ಶ್ರೀಲಂಕಾ ಸೂಪರ್-4 ನಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತೆ ಎಂಬುದು ನೋಡಬೇಕಿದೆ.
ಏಷ್ಯಾಕಪ್‌ನ ಸೂಪರ್-4 ರೌಂಡ್ ಮತ್ತು ಫೈನಲ್ ಪಂದ್ಯಗಳ ಸ್ಥಳಗಳನ್ನು ಬದಲಾಹಿಸುವ ಸಾಧ್ಯತೆಗಳಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಏಷ್ಯಾಕಪ್ ಪಂದ್ಯಗಳು ನಡೆಯುವ ಸ್ಥಳಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂದ್ಯಗಳನ್ನು ಈ ಮೊದಲೇ ನಿರ್ಧರಿಸಿದ ಸ್ಥಳಗಳಲ್ಲಿ ಅಂದರೆ ಕೊಲಂಬೊದಲ್ಲಿಯೇ ಆಡಲಾಗುತ್ತದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಮಾಹಿತಿ ನೀಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ