Asia Cup 2023: ಸೂಪರ್-4 ನಲ್ಲಿ ಪಾಕಿಸ್ತಾನ್ ಶುಭಾರಂಭ: ಮುಂದಿನ ಎದುರಾಳಿ ಭಾರತ
Asia Cup 2023: ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿರುವ ಪಾಕಿಸ್ತಾನ್ ತಂಡದ ಮುಂದಿನ ಎದುರಾಳಿ ಭಾರತ. ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಮೊದಲ ಸುತ್ತಿನಲ್ಲಿ ಭಾರತ-ಪಾಕ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗಿತ್ತು.
ಏಷ್ಯಾಕಪ್ 2023ರ ಸೂಪರ್-4ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸಿದೆ. ಲಾಹೋರ್ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಬಾಂಗ್ಲಾ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ಒದಗಿಸಿರಲಿಲ್ಲ.
ಆರಂಭಿಕ ಆಟಗಾರ ಮೆಹದಿ ಹಸನ್ ಮಿರಾಝ್ (0) ನಸೀಮ್ ಶಾ ಎಸೆತದಲ್ಲಿ ಔಟಾದರೆ, ಆ ಬಳಿಕ ಬಂದ ಲಿಟ್ಟನ್ ದಾಸ್ 16 ರನ್ಗಳಿಸಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ನಯಿಮ್ (20) ಹ್ಯಾರಿಸ್ ರೌಫ್ ಎಸೆತದಲ್ಲಿ ಔಟಾದರು. ಇನ್ನು ತೌಹಿದ್ ಹೃದೋಯ್ 2 ರನ್ಗಳಿಸಿ ಬಂದ ವೇಗದಲ್ಲೇ ಹಿಂತಿರುಗಿದರು.
ಈ ಹಂತದಲ್ಲಿ ಜೊತೆಗೂಡಿದ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ 5ನೇ ವಿಕೆಟ್ಗೆ 100 ರನ್ಗಳ ಜೊತೆಯಾಟವಾಡಿದರು. 57 ಎಸೆತಗಳಲ್ಲಿ 53 ರನ್ ಬಾರಿಸಿದ ಶಕೀಬ್ ವಿಕೆಟ್ ಪಡೆಯುವಲ್ಲಿ ಕೊನೆಗೂ ಫಹೀಮ್ ಅಶ್ರಫ್ ಯಶಸ್ವಿಯಾದರು.
ಇದರ ಬೆನ್ನಲ್ಲೇ 64 ರನ್ ಬಾರಿಸಿದ್ದ ಮುಶ್ಫಿಕುರ್ ರಹೀಮ್ ಹ್ಯಾರಿಸ್ ರೌಫ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಮತ್ತೆ ಹಿಡಿದ ಸಾಧಿಸಿದ ಪಾಕ್ ಬೌಲರ್ಗಳು ಬಾಂಗ್ಲಾದೇಶ್ ತಂಡವನ್ನು 38.4 ಓವರ್ಗಳಲ್ಲಿ 193 ರನ್ಗಳಿಗೆ ಆಲೌಟ್ ಮಾಡಿದರು.
ಪಾಕಿಸ್ತಾನ್ ಪರ ಹ್ಯಾರಿಸ್ ರೌಫ್ 6 ಓವರ್ಗಳಲ್ಲಿ 19 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ನಸೀಮ್ ಶಾ 5.4 ಓವರ್ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದರು.
ಇನ್ನು 194 ರನ್ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಫಖರ್ ಝಮಾನ್ (20) ಬೇಗನೆ ನಿರ್ಮಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ (17) ತಸ್ಕಿನ್ ಅಹ್ಮದ್ ಎಸೆತದಲ್ಲಿ ಬೌಲ್ಡ್ ಆದರು.
ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಇಮಾಮ್ ಉಲ್ ಹಕ್ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು. ಅಲ್ಲದೆ 84 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ 71 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು. ಅಂತಿಮವಾಗಿ ಅಜೇಯ 63 ರನ್ ಬಾರಿಸುವ ಮೂಲಕ ರಿಝ್ವಾನ್ ಪಾಕ್ ತಂಡವನ್ನು 39.3 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಸೂಪರ್-4 ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಮುಂದಿನ ಎದುರಾಳಿ ಭಾರತ:
ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿರುವ ಪಾಕಿಸ್ತಾನ್ ತಂಡದ ಮುಂದಿನ ಎದುರಾಳಿ ಭಾರತ. ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಮೊದಲ ಸುತ್ತಿನಲ್ಲಿ ಭಾರತ-ಪಾಕ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಇದೀಗ ದ್ವಿತೀಯ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕಾದಾಟದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.