ಮಳೆ ಅಡ್ಡಿ ನಡುವೆಯೂ ಏಷ್ಯಾಕಪ್‌ನ (Asia Cup 2023) ಲೀಗ್ ಹಂತ ಮುಕ್ತಾಯಗೊಂಡಿದೆ. ಇದೀಗ ಸೂಪರ್ 4 ಹಂತ ಇಂದಿನಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ತಂಡಗಳ ಮುಖಾಮುಖಿಯಾಗಲಿವೆ. ಆ ಬಳಿಕ ಸೆಪ್ಟೆಂಬರ್ 10ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಮೊದಲು ಈ ಉಭಯ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಮಳೆ ಈ ಪಂದ್ಯಕ್ಕೆ ಅಡ್ಡಿಯುಂಟು ಮಾಡಿತ್ತು. ಇದು ಉಭಯ ದೇಶಗಳ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯನ್ನುಂಟು ಮಾಡಿತ್ತು. ಇದೀಗ ಈ ತಂಡಗಳ ಎರಡನೇ ಬಾರಿಯ ಮುಖಾಮುಖಿಗೂ ವರುಣ ರಾಯನ ಅವಕೃಪೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾದ್ದವು. ಆದರೆ ಆ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 47 ಓವರ್ಗಳ ಬ್ಯಾಟಿಂಗ್ ಮಾಡಿತ್ತು. ಆದರೆ ಪಾಕಿಸ್ತಾನದ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಕೊಲಂಬೊದಲ್ಲಿ ಈ ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲು ಸಿದ್ದತೆ ನಡೆಸಿವೆ. ಆದರೆ ಅಲ್ಲೂ ಸಹ, ಸೆಪ್ಟೆಂಬರ್ 10 ರಂದು ಮಳೆಯಾಗಲಿದೆ ಎಂದು ವರದಿಯಾಗಿದೆ.
‘ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸುವುದು ಯಾರಿಗೂ ಇಷ್ಟವಿರಲಿಲ್ಲ’; ಗೊಂದಲಗಳಿಗೆ ತೆರೆ ಎಳೆದ ಜಯ್ ಶಾ
ಕೊಲಂಬೊದಲ್ಲಿ ಸೆಪ್ಟೆಂಬರ್ 10 ರಂದು ಅಂದರೆ ಭಾನುವಾರದಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ನವೀಕರಣ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಬೆಳಿಗ್ಗೆ 70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದರೆ ದೊಡ್ಡ ಅಪಾಯವೆಂದರೆ ಮಳೆಯ ಸಮಯ. ಪಂದ್ಯ ಪ್ರಾರಂಭವಾಗುವ ಸಮಯಕ್ಕೆ ಮಳೆಯ ಆಗಮನವಾಗಲಿದ್ದು, ಕ್ರಮೇಣ ಅದು ಹೆಚ್ಚಾಗುತ್ತದೆ. ಆಗಸದಲ್ಲಿ ನಿರಂತರವಾಗಿ ಕಪ್ಪು ಮೋಡ ಕವಿದಿದ್ದು, ರಾತ್ರಿ ವೇಳೆ ಭಾರೀ ಮಳೆಯಾಗುವ ಸಂಪೂರ್ಣ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಒಂದು ವೇಳೆ ಹವಾಮಾನ ವರದಿ ನಿಜವಾದರೆ ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನದ ಸತತ ಎರಡನೇ ಪಂದ್ಯವನ್ನು ರದ್ದುಗೊಳ್ಳುವ ಸಾಧ್ಯತೆಗಳಿವೆ. ಇದು ಸಾಲದೆಂಬಂತೆ ಕೊಲಂಬೊದಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮಳೆಯ ಭೀತಿ ಎದುರಾಗಿಲ್ಲ. ಬದಲಿಗೆ ಇಲ್ಲಿ ನಡೆಯಲಿರುವ ಭಾರತದ ಇನ್ನೆರಡು ಪಂದ್ಯಗಳಿಗೂ ಮಳೆಯಿಂದಾಗಿ ತೊಂದರೆಯಾಗಬಹುದು ಎಂದು ವರದಿಯಾಗಿದೆ.
ಸೆ.12ರಂದು ಇದೇ ಮೈದಾನದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಅಂದು ಕೊಲಂಬೊದಲ್ಲಿ ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಪಂದ್ಯಕ್ಕೆ ಹಿಂದಿನ ದಿನಗಳಿಗೆ ಹೋಲಿಸಿದರೆ ವಾತಾವರಣ ಕೊಂಚ ಸ್ಪಷ್ಟವಾಗಲಿದೆ ಎಂದು ವರದಿಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Wed, 6 September 23