
ಬೆಂಗಳೂರು (ಆ. 22): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇತ್ತೀಚೆಗೆ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಾವಳಿಗಾಗಿ, ಆಯ್ಕೆದಾರರು ಯುವ ಆಟಗಾರರಿಂದ ತುಂಬಿದ ತಂಡವನ್ನು ಆಯ್ಕೆ ಮಾಡಿದರು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರಿಗೆ ಆಯ್ಕೆದಾರರು ಪ್ರಾಮುಖ್ಯತೆ ನೀಡಲಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಎಬ್ಬಿದೆ. ಅಲ್ಲದೆ ಭಾರತ ಕೆಲ ಮಾಜಿ ಆಟಗಾರರು ಕೂಡ ಅಯ್ಯರ್ ಅವರನ್ನು ಕಡೆಗಣಿಸಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.
ಶ್ರೇಯಸ್ ಅಯ್ಯರ್ ಆಯ್ಕೆ ಆಗದಿರುವುದು ಆಘಾತ
ಶ್ರೇಯಸ್ ಅಯ್ಯರ್ ಅವರು ಏಷ್ಯಾ ಕಪ್‌ಗೆ ಖಂಡಿತವಾಗಿಯೂ ಆಯ್ಕೆ ಆಗುತ್ತಾರೆ ಎಂದು ನಂಬಲಾಗಿತ್ತು. ಅವರು ಐಪಿಎಲ್ 2025 ರಲ್ಲಿ 604 ರನ್ ಗಳಿಸಿದರು ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ 345 ರನ್ ಚಚ್ಚಿದ್ದರು. ಆದರೆ ಅವರಿಗೆ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈಗ ಅವರು ಟಿ 20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ಬಹಳ ಸಮಯ ಕಾಯಬೇಕಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಏಷ್ಯಾ ಕಪ್‌ಗೆ ಖಂಡಿತವಾಗಿಯೂ ನಾನು ಸೆಲೆಕ್ಟ್ ಆಗುತ್ತೇನೆ ಎಂದು ಅಯ್ಯರ್ ಆಶಿಸಿದ್ದರು. ಆದರೆ ಇದು ಆಗದಿದ್ದಾಗ ಅವರು ನಿರಾಶೆಗೊಂಡರು.
ಅಜಿತ್ ಅಗರ್ಕರ್ ವಿಚಿತ್ರ ಹೇಳಿಕೆ
ಈ ವಿಷಯದ ಬಗ್ಗೆ ಅಜಿತ್ ಅಗರ್ಕರ್, ‘ಶ್ರೇಯಸ್ ಯಾರ ಸ್ಥಾನವನ್ನು ಪಡೆಯುತ್ತಾರೆ? ಅದು ಅವರ ತಪ್ಪೂ ಅಲ್ಲ ಅಥವಾ ನಮ್ಮ ತಪ್ಪೂ ಅಲ್ಲ. ನೀವು 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಆದ್ದರಿಂದ ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ’ ಎಂದು ಹೇಳಿದರು. ಅಗರ್ಕರ್ ಅವರ ಈ ಉತ್ತರದಿಂದ ಜನರು ಇನ್ನಷ್ಟು ಕೋಪಗೊಂಡರು. ಅಯ್ಯರ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿಯೂ ಇರಿಸಲಾಗಿಲ್ಲ. ಇದು ಆಯ್ಕೆ ಸಮಿತಿಯು ಅವರನ್ನು ಇಷ್ಟಪಡದಿರಬಹುದು ಎಂದು ಅಭಿಮಾನಿಗಳು ಭಾವಿಸುವಂತೆ ಮಾಡಿತು. ಆದರೆ ಅಯ್ಯರ್ ಅವರನ್ನು ಸ್ಟ್ಯಾಂಡ್‌ಬೈ ಪಟ್ಟಿಯಲ್ಲಿ ಏಕೆ ಇರಿಸಲಾಗಿಲ್ಲ ಎಂದು ಬಿಸಿಸಿಐ ಮೂಲವೊಂದು TOI ಗೆ ತಿಳಿಸಿದೆ. ಆಯ್ಕೆದಾರರಿಗೆ ಅಯ್ಯರ್ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಅವರು ಹೇಳಿದ್ದಾರೆ.
IPL 2026: ಪೃಥ್ವಿ ಶಾ ಖರೀದಿಗೆ ಮೂರು ಐಪಿಎಲ್ ಫ್ರಾಂಚೈಸಿಗಳಿಂದ ತಯಾರಿ
“ಶ್ರೇಯಸ್‌ನಂತಹ ಅನುಭವಿ ಆಟಗಾರನನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇಡಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು! ನೀವು ಅವರನ್ನು ಆಯ್ಕೆ ಮಾಡಿದರೆ, ಅವರು ಪ್ಲೇಯಿಂಗ್ 11 ರಲ್ಲಿ ಆಡುತ್ತಾರೆ. ಅಯ್ಯರ್ ವಿರುದ್ಧ ಯಾರಿಗೂ ಯಾವುದೇ ದೂರು ಇಲ್ಲ. ಅವರಿಗೆ ಅವಕಾಶಗಳು ಸಿಗುತ್ತವೆ ಮತ್ತು ಮುಂದಿನ ದಿನಗಳಲ್ಲಿ ಅವರು ಮೂರೂ ಸ್ವರೂಪಗಳಲ್ಲಿ ಭಾರತಕ್ಕಾಗಿ ಹಲವು ಪಂದ್ಯಗಳನ್ನು ಆಡುತ್ತಾರೆ.” ಎಂದು ಮೂಲಗಳು ತಿಳಿಸಿವೆ.
ಏಷ್ಯಾಕಪ್ ನಂತರವೂ ಹಲವು ಟಿ20 ಪಂದ್ಯಗಳು
ಏಷ್ಯಾಕಪ್ ನಂತರ ಭಾರತ 10 ಟಿ20ಐ ಪಂದ್ಯಗಳನ್ನು ಆಡಬೇಕಾಗಿದೆ. ಐದು ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಮತ್ತು ಐದು ಪಂದ್ಯಗಳು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆಯಲಿವೆ. ನವೆಂಬರ್‌ನಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಯ್ಯರ್ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೊಂದಿದ್ದಾರೆ. ಇದರೊಂದಿಗೆ, ಅವರು ಟಿ20 ವಿಶ್ವಕಪ್‌ಗಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ